ಪ್ರತಿಪಕ್ಷದ ನಾಯಕರಾಗಿದ್ದ ಸಂದರ್ಭ ಸಿದ್ದರಾಮಯ್ಯ, ಪಾಲಿ ನಾರಿಮನ್ ತಂಡ ಬದಲಾಗಲಿ ಎಂದಿದ್ದರು

ಬೆಂಗಳೂರು(ಸೆ.06): ಕಾವೇರಿ ನೀರಿನ ಕಾನೂನು ಹೋರಾಟದಲ್ಲಿ ಪ್ರತೀ ಬಾರಿ ಕರ್ನಾಟಕಕ್ಕೆ ಹಿನ್ನಡೆಯಾಗುತ್ತಿದೆ. ಪ್ರತೀ ಬಾರಿಯೂ ಆದೇಶ ಬಂದಾಗ ನಮ್ಮನ್ನಾಳುವ ಸರ್ಕಾರಗಳು, ಪ್ರತಿನಿಧಿಸುವ ಕಾನೂನು ತಂಡ ನ್ಯಾಯಾಲಯಕ್ಕೆ ಸೂಕ್ತವಾಗಿ ಮನವರಿಕೆ ಮಾಡಿಕೊಡ;ಲಿಲ್ಲ ಎಂಬ ಮಾತುಗಳು ಕೇಳಿಬರುತ್ತವೆ. ಅದಕ್ಕೆ ಪ್ರತಿಪಕ್ಷಗಳೂ ಧ್ವನಿಗೂಡಿಸುತ್ತವೆ. ಆದರೆ, ಪ್ರತಿಪಕ್ಷದಲ್ಲಿದ್ದಾಗ ವಾಗ್ದಾಳಿ ನಡೆಸುವ ನಾಯಕರು ಅಧಿಕಾರಕ್ಕೆ ಬಂದಾಗ ತಮ್ಮ ಮಾತನ್ನ ಪಾಲನೇ ಮಾಡುವುದಿಲ್ಲ. ಸದ್ಯ, ಸಿಎಂ ಸಿದ್ದರಾಮಯ್ಯ ವಿಚಾರದಲ್ಲಿ ಆಗಿರುವುದೂ ಅದೇ

ಪ್ರತಿಪಕ್ಷದ ನಾಯಕರಾಗಿದ್ದ ಸಂದರ್ಭ ಸಿದ್ದರಾಮಯ್ಯ, ರಾಜ್ಯದ ಪರ ಸುಪ್ರೀಂಕೋರ್ಟ್`ನಲ್ಲಿ ವಾದ ಮಂಡಿಸುತ್ತಿರುವ ಪಾಲಿ ನಾರಿಮನ್ ತಂಡದ ವಿರುದ್ಧ ಹರಿಹಾಯ್ದಿದ್ದರು.

ಸದನದಲ್ಲಿ ಮಾತನಾಡಿದ್ದ ಅಂದಿನ ವಿಪಕ್ಷನಾಯಕ ಸಿದ್ದರಾಮಯ್ಯ, ನ್ಯಾಯಾಲಯದಲ್ಲಿ ಕಾವೇರಿ ನೀರಿನ ಸಂಬಂಧ ಸರಿಯಾಗಿ ವಾದ ಮಂಡಿಸದ ನಾರಿಮನ್ ತಂಡ ಬದಲಾಗಲಿ ಎಂದಿದ್ದರು. ಕಾನೂನು ಸಲಹೆಗಾರರು ತಮ್ಮ ಹೋರಾಟದಲ್ಲಿ ಹಿನ್ನಡೆ ತೋರಿರುವುದು ಸತ್ಯ. ಇದರಿಂದಾಗಿ ನಾವು ಕಾನೂನು ಹೋರಾಟದಲ್ಲಿ ಸೋತಿದ್ದೇವೆ ಎಂದಿದ್ದರು. ಬಳ್ಳಾರಿ ಪಾದಯಾತ್ರೆ ಸಂದರ್ಭವೂ ಇದೇ ವಾದ ಮಾಡಿದ್ದರು.

ಆದರೆ, ಸಿದ್ದರಾಮಯ್ಯ ಈಗ ಸಿಎಂ ಆಗಿದ್ದಾರೆ. ಆದರೂ ಅಂದಿನ ಮಾತಿನಂತೆ ನಾರಿಮನ್ ತಂಡವನ್ನ ಬದಲಾಯಿಸಲಿಲ್ಲವೇಕೆ..? ಅಂದಿನ ಸರ್ಕಾರ ನಾರಿಮನ್ ಮಾತು ಕೇಳಿ ನೀರು ಬಿಟ್ಟ ರೀತಿಯೇ.. ಇವತ್ತಿನ ಸರ್ಕಾರವೂ ನಾರಿಮನ್ ಮಾತು ಕೇಳಿ ನೀರು ಬಿಟ್ಟಿದೆಯೇ..? ಎಂಬ ಪ್ರಶ್ನೆ ಎದ್ದಿದೆ.