ಸಿದ್ದರಾಮಯ್ಯ ಶಾಂತಿವನಕ್ಕೆ ಹೋದಾಗಿನಿಂದಲೂ ರಾಜ್ಯ ರಾಜಕೀಯದಲ್ಲಿ ಸಂಚಲನ  ಮೂಡಿಸುತ್ತಿದ್ದಾರೆ.  ಸಿದ್ದರಾಮಯ್ಯ ಹೇಳಿಕೆಗಳು ಕಾಂಗ್ರೆಸ್-ಜೆಡಿಎಸ್’ಗೆ ನುಂಗಲಾರದ ತುಪ್ಪವಾಗಿದೆ. ಸಿದ್ದರಾಮಯ್ಯಗೆ ಹೇಳುವಂತಿಲ್ಲ, ಬಿಡುವಂತಿಲ್ಲ ಎನ್ನುವಂತಾಗಿದೆ. 

ನವದೆಹಲಿ (ಜೂ. 03): ಲೋಕಸಭಾ ಚುನಾವಣೆವರೆಗೆ ಮೈತ್ರಿ ಇದ್ದರೆ ಓಕೆ, ಆದರೆ ಬಹಳ ದಿನ ಕರ್ನಾಟಕದಲ್ಲಿ ದೇವೇಗೌಡರ ಜೊತೆಗೆ ಮೈತ್ರಿ ಸರ್ಕಾರ ನಡೆಸಿದರೆ ರಾಜ್ಯದಲ್ಲಿ ಕಾಂಗ್ರೆಸ್‌ ತಮಿಳುನಾಡಿನ ಹಾದಿ ಹಿಡಿಯಲಿದೆ ಎಂದು ಸಿದ್ದರಾಮಯ್ಯ ನೇರವಾಗಿ ಹೈಕಮಾಂಡ್‌ಗೆ ಹೇಳಿದ್ದಾರೆಂದು ದಿಲ್ಲಿ ವಲಯದಲ್ಲಿ ಗುಸುಗುಸು ಹರಡಿದೆ.

ಲೋಕಸಭೆಯಲ್ಲಿ ಮೈತ್ರಿ ಸಾಧ್ಯವಿಲ್ಲ, ಅನಗತ್ಯ ಒತ್ತಡ ಹೇರಬೇಡಿ ಎಂದೂ ಹೈಕಮಾಂಡ್‌ಗೆ ಅವರು ಹೇಳಿದ್ದಾರಂತೆ. ಧರ್ಮಸ್ಥಳದ ಶಾಂತಿವನದ ಸಿ.ಡಿ. ಬಿಡುಗಡೆಯಾದ ನಂತರ ದೂರವಾಣಿಯಲ್ಲಿ ತಮ್ಮನ್ನು ಸಂಪರ್ಕಿಸಿದ ಅಹ್ಮದ್‌ ಪಟೇಲ್, ಗುಲಾಂ ನಬಿ ಆಜಾದ್‌ಗೆ ಈ ಎಲ್ಲಾ ವಿಷಯವನ್ನು ಸಿದ್ದರಾಮಯ್ಯ ತಿಳಿಸಿದ್ದಾರೆ ಎನ್ನಲಾಗುತ್ತಿದ್ದು, ‘ಮೈತ್ರಿಯಿಂದ ಒಂದು ಕಡೆ ಬಿಜೆಪಿ ಪ್ರಬಲವಾಗುತ್ತದೆ, ಇನ್ನೊಂದು ಕಡೆ ಜೆಡಿಎಸ್‌ ಮೊದಲಿಗಿಂತ ಅಧಿಕಾರದ ಬಲದ ಮೇಲೆ ಚಿಗುರಿಕೊಳ್ಳುತ್ತದೆ. ಆದರೆ ನಷ್ಟಅನುಭವಿಸುವುದು ಕಾಂಗ್ರೆಸ್‌. ದಯವಿಟ್ಟು ನಿಮ್ಮ ದಿಲ್ಲಿ ರಾಜಕೀಯಕ್ಕಾಗಿ ರಾಜ್ಯದ ಕಾಂಗ್ರೆಸ್‌ ಬಲಿ ಕೊಡಬೇಡಿ. ಇದನ್ನು ದಯವಿಟ್ಟು ರಾಹುಲ್ ಗಾಂಧಿಗೆ ತಿಳಿಸಿ ಹೇಳಿ’ ಎಂದು ಕೇಳಿಕೊಂಡಿದ್ದಾರೆಂದು ಕೆಲ ಕಾಂಗ್ರೆಸಿಗರೇ ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ ಯಾವುದೇ ಕಾರಣಕ್ಕೂ ವಿವಾದ ಹೆಚ್ಚಿಸುವ ಹೇಳಿಕೆಗಳನ್ನು ನೀಡದಂತೆ ಸಿದ್ದು ಮನವೊಲಿಸಿರುವ ಕಾಂಗ್ರೆಸ್‌ ಮ್ಯಾನೇಜರ್‌ಗಳು, ‘ಲೋಕಸಭೆವರೆಗೆ ತೃತೀಯ ರಂಗದ ಪಕ್ಷಗಳಿಗೆ ತೋರಿಸಲಿಕ್ಕಾದರೂ ಕರ್ನಾಟಕದ ಸರ್ಕಾರ ಸುಸೂತ್ರವಾಗಿ ನಡೆಯಬೇಕು. ನಿಮಗೆ ಮತ್ತು ನಿಮ್ಮ ಬೆಂಬಲಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಸುಮ್ಮನಿರಿ’ ಎಂದು ಹೇಳಿದ್ದಾರಂತೆ. ಕೆಲ ಕಾಂಗ್ರೆಸ್‌ ದಿಲ್ಲಿ ನಾಯಕರ ಪ್ರಕಾರ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆ ಮತ್ತು ಸಂಪುಟ ವಿಸ್ತರಣೆಯಲ್ಲಿ ಸಿದ್ದು ಹೇಳಿದಂತೆ ಕೇಳುವುದು ಹೈಕಮಾಂಡ್‌ಗೆ ಅನಿವಾರ್ಯವಾಗಲಿದೆಯಂತೆ.

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ವಿಶೇಷ ಪ್ರತಿನಿಧಿ