ಸಿದ್ದರಾಮಯ್ಯ ದಿಢೀರ್‌ ತಣ್ಣಗಾಗಿದ್ದು ಏಕೆ..? ಮೌನದ ಹಿಂದಿನ ಮರ್ಮವೇನು..?

Siddaramaiah observes silence on 'politics'
Highlights

ಸರಣಿ ವಿಡಿಯೋ ಬಾಂಬ್‌ ಸಿಡಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿಗೆ ಹಿಂತಿರುಗಿದ ನಂತರ ತಣ್ಣಗಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.

ಬೆಂಗಳೂರು :  ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಮೈತ್ರಿ ಸರ್ಕಾರದ ಆಯಸ್ಸು ಹಾಗೂ ಹೊಸ ಬಜೆಟ್‌ ಮಂಡನೆ ವಿರೋಧಿಸಿ ಸರಣಿ ವಿಡಿಯೋ ಬಾಂಬ್‌ ಸಿಡಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿಗೆ ಹಿಂತಿರುಗಿದ ನಂತರ ತಣ್ಣಗಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.

ಹೊಸ ಬಜೆಟ್‌ ಮಂಡನೆಗೆ ಮುಂದಾಗಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನಿರ್ಧಾರಕ್ಕೆ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಆಪ್ತರ ಬಳಿ ಆಕ್ಷೇಪಿಸುವ ಹಾಗೂ ಮೈತ್ರಿ ಸರ್ಕಾರದ ಬಾಳಿಕೆ ಲೋಕಸಭೆ ಚುನಾವಣೆವರೆಗೆ ಮಾತ್ರ ಎಂದು ಅಭಿಪ್ರಾಯ ವ್ಯಕ್ತಪಡಿಸುವ ವಿಡಿಯೋಗಳು ಬಹಿರಂಗಗೊಂಡು ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ನಿರ್ಮಿಸಿದ್ದವು. ಸಿದ್ದರಾಮಯ್ಯ ಬೆಂಗಳೂರಿಗೆ ಹಿಂತಿರುಗಿದ ನಂತರ ಪ್ರಮುಖ ಬೆಳವಣಿಗೆಗಳು ನಡೆಯಬಹುದು ಎಂಬ ನಿರೀಕ್ಷೆ ಹುಟ್ಟಿಸಿದ್ದವು.

ಆದರೆ, ಬೆಂಗಳೂರಿಗೆ ಆಗಮಿಸಿದ ನಂತರ ಸಿದ್ದರಾಮಯ್ಯ ಅವರು ಅಪ್ಪಟ ಕಾಂಗ್ರೆಸ್‌ ನಾಯಕರಂತೆ ವರ್ತಿಸಿದ್ದಾರೆ. ಕೆಪಿಸಿಸಿ ಕಚೇರಿಗೆ ತೆರಳಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿ ಸಭೆ ಕುರಿತ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಕಾಂಗ್ರೆಸ್‌ನ ಕಾರ್ಯಕ್ರಮಗಳು ಮುಂದುವರೆಯಬೇಕು ಎಂಬ ಷರತ್ತು ಮುಂದಿಡುವ ಕೆಲಸವನ್ನು ಮಾಡಿದ್ದಾರೆ. ಆದರೆ, ಎಲ್ಲಿಯೂ ಬಂಡಾಯ ಅಥವಾ ಸರ್ಕಾರಕ್ಕೆ ಧಕ್ಕೆ ಬರುವಂತಹ ಯಾವುದೇ ಹೇಳಿಕೆ ನೀಡಿಲ್ಲ. 

ಅಷ್ಟೇ ಏಕೆ, ಶಾಂತಿವನದಲ್ಲಿದ್ದಾಗ ಬಿಡುಗಡೆಯಾಗಿದ್ದ ಎರಡು ವಿಡಿಯೋಗಳಿಗೂ ಸ್ಪಷ್ಟನೆ ನೀಡಿದ್ದು, ತಮ್ಮ ಮಾತಿನ ಹಿಂದೆ ಹಾಗೂ ಮುಂದಿನ ಸಂಭಾಷಣೆಗಳು ಇಲ್ಲದ ಸಂದರ್ಭವನ್ನು ಬಳಸಿಕೊಂಡು ತಪ್ಪು ಅರ್ಥ ಬರುವಂತೆ ಎಡಿಟ್‌ ಮಾಡಿ ವಿಡಿಯೋ ಬಿಡುಗಡೆ ಮಾಡಲಾಗಿದೆ. ಖಾಸಗಿಯಾಗಿ ಮಾತನಾಡಿದ್ದನ್ನು ಹೀಗೆ ಬಹಿರಂಗಪಡಿಸುವುದು ಎಷ್ಟುನೈತಿಕ ಎಂದು ಪ್ರಶ್ನಿಸುವ ಮೂಲಕ ಆ ವಿಚಾರವನ್ನೇ ಗೌಣಗೊಳಿಸುವ ಪ್ರಯತ್ನ ಮಾಡಿದ್ದಾರೆ.

ಸಿದ್ದರಮಯ್ಯ ಅವರ ಈ ಬದಲಾದ ಧೋರಣೆಗೆ ಕಾರಣವೇನು ಎಂಬ ಬಗ್ಗೆ ಕಾಂಗ್ರೆಸ್‌ ವಲಯದಲ್ಲಿ ಕುತೂಹಲಕರ ಚರ್ಚೆ ನಡೆದಿದೆ. ಮೂಲಗಳ ಪ್ರಕಾರ, ಬಜೆಟ್‌ ಹಾಗೂ ಸಾಲಮನ್ನಾ ವಿಚಾರಗಳನ್ನು ಸಮನ್ವಯ ಸಮಿತಿಗೂ ತರುವ ಮುನ್ನವೇ ಪ್ರಕಟಿಸಿದ್ದು ಸಿದ್ದರಾಮಯ್ಯ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. 

ಹೀಗಾಗಿ ಪ್ರತಿರೋಧದ ಧ್ವನಿ ಹೊರ ಹೊಮ್ಮಿಸಿ, ಆ ಎರಡು ವಿಚಾರಗಳು ಭಾನುವಾರ ನಡೆಯಲಿರುವ ಸಮನ್ವಯ ಸಮಿತಿಗೆ ಬರುವಂತೆ ಮಾಡುವುದು ಹಾಗೂ ಸರ್ಕಾರದ ಮಟ್ಟದಲ್ಲಿ ತಮ್ಮನ್ನು ನಿರ್ಲಕ್ಷಿಸಿದರೆ ಬಂಡಾಯವೇಳುವೆ ಎಂಬ ಸಂದೇಶ ರವಾನೆ ಮಾಡುವ ಉದ್ದೇಶವಿತ್ತು. ಈ ಉದ್ದೇಶ ಈಡೇರಿರುವುದರಿಂದ ಈಗ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

loader