Asianet Suvarna News Asianet Suvarna News

ಕಾಂಗ್ರೆಸ್‌ ನಾಯಕರ ಜೊತೆ ಸಿದ್ದರಾಮಯ್ಯ ರಹಸ್ಯ ಸಭೆ : ನಡೆದ ಚರ್ಚೆ ಏನು..?

ಧರ್ಮಸ್ಥಳದ ಶಾಂತಿವನದಲ್ಲಿರುವ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವru 12 ಮಂದಿ ಕಾಂಗ್ರೆಸ್ ಮುಖಂಡರ ಜೊತೆ ರಹಸ್ಯವಾಗಿ ಸಭೆ ನಡೆಸಿದ್ದಾರೆ. ಆದರೆ ಈ ಸಭೆಯಲ್ಲಿ ಚರ್ಚಿಸಲಾದ ವಿಚಾರಗಳ ಬಗ್ಗೆ ಮಾತ್ರ ಯಾವುದೇ ಗುಟ್ಟೂ ಬಿಟ್ಟುಕೊಟ್ಟಿಲ್ಲ. 

Siddaramaiah Holds Secret Meeting With TB Jyachandra  12 Other MLAs

ಮಂಗಳೂರು :  ಧರ್ಮಸ್ಥಳದ ಶಾಂತಿವನದಲ್ಲಿರುವ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವರಾದ ರಮೇಶ್‌ ಜಾರಕಿಹೊಳಿ, ಶಿವಾನಂದ ಪಾಟೀಲ್‌, ಮಾಜಿ ಸಚಿವ ಎಚ್‌.ಆಂಜನೇಯ ಸೇರಿದಂತೆ ಹಲವು ಹಾಲಿ, ಮಾಜಿ ಸಚಿವರು, ಶಾಸಕರು, ವಿವಿಧ ಸಂಘಟನೆ ಮುಖಂಡರು ಬುಧವಾರ ಭೇಟಿಯಾಗಿದ್ದಾರೆ. ಸುಮಾರು 20ಕ್ಕೂ ಅಧಿಕ ಮಂದಿಯ ಜೊತೆ ಸಿದ್ದರಾಮಯ್ಯ ಅವರು ರಹಸ್ಯ ಮಾತುಕತೆ ನಡೆಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಬಜೆಟ್‌ ಮಂಡನೆ ವಿರೋಧಿಸಿ, ಸರ್ಕಾರದ ಕಾಲಾವಧಿ ಕುರಿತು ಸಿದ್ದರಾಮಯ್ಯ ಅವರ ಸಂಭಾಷಣೆಯ ವಿಡಿಯೋ ತುಣುಕುಗಳು ಬಹಿರಂಗವಾದ ಬೆನ್ನಲ್ಲೇ ಇಂಥದ್ದೊಂದು ಸಭೆ ನಡೆದಿದೆ.

ಸಿದ್ದರಾಮಯ್ಯ ಅವರು ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯಿಂದ ಗುರುವಾರ ಡಿಸ್ಚಾಜ್‌ರ್‍ ಆಗಲಿದ್ದು, ಹೀಗಾಗಿ ಒಂದೇ ದಿನ ಬಾಕಿ ಉಳಿದಿರುವಾಗ ಶಾಸಕರ ದಂಡು ದಿಢೀರನೆ ಧರ್ಮಸ್ಥಳಕ್ಕೆ ಆಗಮಿಸಿರುವ ಹಿಂದಿನ ತುರ್ತು ಕಾರಣಗಳೇನು ಎಂಬುದು ಮಾತ್ರ ನಿಗೂಢವಾಗಿ ಉಳಿದಿದೆ. ಹೆಚ್ಚಿನ ಮುಖಂಡರು ತಾವು ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಲು ಬಂದಿದ್ದೇವೆ ಎಂದು ತಿಳಿಸಿದ್ದಾರೆಯೇ ಹೊರತು ಸಭೆಯ ಕುರಿತಾಗಿ ಮತ್ಯಾವ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ.

ರಹಸ್ಯ ಮಾತುಕತೆ:  ಬೆಳಗ್ಗೆ ಸುಮಾರು 11 ಗಂಟೆಗೆ ಸಚಿವ ರಮೇಶ್‌ ಜಾರಕಿಹೊಳಿ, ಸಂಸದ ಬಿ.ವಿ. ನಾಯಕ್‌ ಅವರೊಂದಿಗೆ ಆರೇಳು ಮಂದಿ ಶಾಸಕರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಅಲ್ಲಿಂದ ಖಾಸಗಿ ವಾಹನದಲ್ಲಿ ಶಾಂತಿವನಕ್ಕೆ ತೆರಳಿದರು. ಮಧ್ಯಾಹ್ನ ವೇಳೆಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ್‌ ಕೂಡ ಬಂದಿಳಿದರು. ಬಳಿಕ ಸಿದ್ದರಾಮಯ್ಯ ಅವರು ಶಾಂತಿವನದೊಳಗೆ ತಮ್ಮ ಆಪ್ತ ಬೆಂಬಲಿಗರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮೊದಲು ಮಾಜಿ ಸಚಿವ ಎಚ್‌. ಆಂಜನೇಯ ಅವರು ಒಬ್ಬಂಟಿಯಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತೆರಳಿದ್ದಾರೆ.

ಜಯಚಂದ್ರಗೆ ಗೇಟ್‌ಪಾಸ್‌!:  ಶಾಂತಿವನಕ್ಕೆ ತಡವಾಗಿ ಆಗಮಿಸಿದ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡದೆ ವಾಪಸ್‌ ಕಳುಹಿಸಿದ ಪ್ರಸಂಗವೂ ನಡೆಯಿತು. ಸಚಿವರು, ಶಾಸಕರೊಂದಿಗೆ ರಹಸ್ಯ ಸಭೆ ನಡೆದ ಬಳಿಕ ಜಯಚಂದ್ರ ಆಗಮಿಸಿದ್ದರು. ಇದರಿಂದ ಅಸಮಾಧಾನಕ್ಕೊಳಗಾದ ಸಿದ್ದರಾಮಯ್ಯ ಅಲ್ಲಿಂದಲೇ ಅವರನ್ನು ವಾಪಸ್‌ ಕಳುಹಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಯಚಂದ್ರ, ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಅವರನ್ನು ಕಡೆಗಣಿಸಲಾಗಿಲ್ಲ. ಸರ್ಕಾರದಲ್ಲಿ ಏನೇ ವಿಚಾರಗಳಿದ್ದರೂ ಅವುಗಳನ್ನು ಚರ್ಚಿಸಿ ಇತ್ಯರ್ಥಗೊಳಿಸುತ್ತೇವೆ. ಅತೃಪ್ತಿ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿದರು.

ಭೇಟಿಯಾದವರಿವರು

ಸಚಿವರಾದ ರಮೇಶ್‌ ಜಾರಕಿಹೊಳಿ, ಶಿವಾನಂದ ಪಾಟೀಲ್‌, ಅಥಣಿ ಶಾಸಕ ಮಹೇಶ್‌ ಕಮಟಹಳ್ಳಿ, ಕಾಗವಾಡದ ಶ್ರೀಮಂತ ಪಾಟೀಲ್‌, ಬಸವಕಲ್ಯಾಣ ಶಾಸಕ ಬಿ.ನಾರಾಯಣ ರಾವ್‌, ಬಳ್ಳಾರಿ ಶಾಸಕ ನಾಗೇಂದ್ರ, ರಾಯಚೂರು ಸಂಸದ ಬಿ.ವಿ.ನಾಯಕ್‌, ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್‌, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ ವಿವೇಕರಾವ್‌ ಪಾಟೀಲ್‌, ಮಾಜಿ ಸಚಿವ ಆಂಜನೇಯ, ಮಾಜಿ ಶಾಸಕ ವಸಂತ ಬಂಗೇರ ಸಿದ್ದರಾಮಯ್ಯ.


ಸಿದ್ದು ಕಡೆಗಣಿಸಿ ಸರ್ಕಾರ ಉಳಿಯಲು ಸಾಧ್ಯವೇ?

ಸಿದ್ದರಾಮಯ್ಯ ಅವರನ್ನು ಕಡೆಗಣಿಸಿ ಸಮ್ಮಿಶ್ರ ಸರ್ಕಾರ ಉಳಿಯಲು ಸಾಧ್ಯವೇ ಎಂದು ಬಸವಕಲ್ಯಾಣ ಶಾಸಕ ನಾರಾಯಣ ರಾವ್‌ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.  ಧರ್ಮಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರೊಬ್ಬ ಮಾಸ್‌ ಲೀಡರ್‌, ಅವರನ್ನು ಕಡೆಗಣಿಸುವುದೆಲ್ಲ ಮಾಧ್ಯಮ ಸೃಷ್ಟಿ ಎಂದು ಅಭಿಪ್ರಾಯಪಟ್ಟರು. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲು ಬಂದಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಅವರು ನಮ್ಮ ನಾಯಕರು, ಮಾಜಿ ಮುಖ್ಯಮಂತ್ರಿಗಳು, ಸಮನ್ವಯ ಸಮಿತಿ ಅಧ್ಯಕ್ಷರು. ಹೀಗಾಗಿ ಅವರನ್ನು ಭೇಟಿಯಾಗದೇ ಇನ್ಯಾರನ್ನು ನಾವು ಭೇಟಿಯಾಗಬೇಕು? ಅವರನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ಕಡೆಗಣಿಸಿದರೆ ಸರ್ಕಾರ ಉಳಿಯಲು ಸಾಧ್ಯವಿಲ್ಲ. ಸಮ್ಮಿಶ್ರ ಸರ್ಕಾರ ಅವರ ನೇತೃತ್ವದಲ್ಲೇ ನಡೆಯುತ್ತಿದೆ. ಅವರನ್ನು ಬಿಟ್ಟು ಸರ್ಕಾರ ನಡೆಸಲು ಸಾಧ್ಯವೇ? ಎಂದರು.


ಇಂದು ಸಿದ್ದು ಮಂಜುನಾಥ ದರ್ಶನ

ಗುರುವಾರ ಬೆಳಗ್ಗೆ 10 ಗಂಟೆ ವೇಳೆಗೆ ಶಾಂತಿವನ ಪ್ರಕೃತಿ ಚಿಕಿತ್ಸಾಲಯದಿಂದ ಡಿಸ್ಚಾಜ್‌ರ್‍ ಆಗಲಿರುವ ಸಿದ್ದರಾಮಯ್ಯ ಬಳಿಕ ಅಲ್ಲಿಂದ ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯಕ್ಕೆ ತೆರಳಿ ದೇವರ ದರ್ಶನ ಮಾಡಲಿದ್ದಾರೆ. ಬಿಡುಗಡೆಯಾಗುವ ಹಿಂದಿನ ದಿನವಾದ ಬುಧವಾರ ಸಂಜೆ ಶಾಂತಿವನದ ಹೊರಗೆ ಆಗಮಿಸಿ ಅಭಿಮಾನಿಗಳನ್ನು ಭೇಟಿಯಾದರು. ಸಿದ್ದರಾಮಯ್ಯ ಸೂಚಿಸದ ಹೊರತು ಶಾಂತಿವನಕ್ಕೆ ಯಾರ ಪ್ರವೇಶಕ್ಕೂ ಭದ್ರತಾ ಸಿಬ್ಬಂದಿ ಬಿಡುತ್ತಿಲ್ಲ.


ನಾವು ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಲು ಬಂದಿರುವುದೇ ಹೊರತು ರಾಜಕೀಯಕ್ಕಲ್ಲ. ಆಯಷ್‌ ವಿಭಾಗ ನನ್ನ ಸಚಿವಾಲಯದೊಳಗೆ ಬರುತ್ತದೆ. ಅದನ್ನು ಇನ್ನಷ್ಟುಸಮೃದ್ಧಗೊಳಿಸುವ ಉದ್ದೇಶದಿಂದ ಇಲ್ಲಿನ ವಿಚಾರಗಳನ್ನು ತಿಳಿದುಕೊಳ್ಳಲು ಬಂದಿರುವೆ. ಸಚಿವರ, ನಿಗಮ ಮಂಡಳಿಯ ಬಗ್ಗೆ ಯಾರಿಗೂ ಅತೃಪ್ತಿ ಇಲ್ಲ. ಇದರ ಬಗ್ಗೆ ಮಾತನಾಡಲೇ ಇಲ್ಲ. ಸಿದ್ದರಾಮಯ್ಯ ಅವರೇ ನಮ್ಮ ನಾಯಕರು.

-ಶಿವಾನಂದ ಪಾಟೀಲ್‌, ಸಚಿವರು

ಸಿದ್ದರಾಮಯ್ಯ ಅವರೊಂದಿಗೆ ರಾಜಕೀಯದ ಬಗ್ಗೆ ಏನೂ ಚರ್ಚೆ ಆಗಿಲ್ಲ. ಅವರು ನಾಯಕರು, ಆರೋಗ್ಯ ವಿಚಾರಿಸಲು ಬಂದಿದ್ದೇನೆ.

-ರಮೇಶ್‌ ಜಾರಕಿಹೊಳಿ, ಸಚಿವರು

ವಿಧಾನಸಭೆ ಚುನಾವಣೆ ಕಳೆದ ಮೇಲೆ ಧರ್ಮಸ್ಥಳಕ್ಕೆ ಬರಬೇಕೂಂತ ಇದ್ದೆ. ಈಗ ಸಿದ್ದರಾಮಯ್ಯ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಅನುಭವವನ್ನು ಆಧರಿಸಿ ನಾನೂ ಮುಂದಿನ ತಿಂಗಳು ಚಿಕಿತ್ಸೆ ಪಡೆಯುವವನಿದ್ದೇನೆ. ಬಜೆಟ್‌ ಮಂಡನೆ ಮಾಡಬೇಕೋ, ಬೇಡವೋ ಎಂಬುದು ಸಮನ್ವಯ ಸಮಿತಿ ಸಭೆಯ ತೀರ್ಮಾನವನ್ನು ಆಧರಿಸಿ ಮಾಡಬೇಕಾಗುತ್ತದೆ. ಸಮನ್ವಯ ಸಮಿತಿ ಅಧ್ಯಕ್ಷರು ಸಿದ್ದರಾಮಯ್ಯ ಅವರಾಗಿರುವುದರಿಂದ ನಿಗಮ, ಮಂಡಳಿಗೆ ಯಾರನ್ನೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ರೈತರ ಸಾಲಮನ್ನಾ ಬಜೆಟ್‌ನಲ್ಲಿ ಇಟ್ಟತಕ್ಷಣ ಮಾಡಲಾಗುವುದಿಲ್ಲ. ಈ ಬಗ್ಗೆ ಪೂರ್ತಿ ಚರ್ಚೆ ಮಾಡಬೇಕಾಗುತ್ತದೆ.

Follow Us:
Download App:
  • android
  • ios