ಜೂನ್ 20, ಅಂದರೆ ನಿನ್ನೆಯವರೆಗೆ ರೈತರು ಮಾಡಿರುವ ಸಾಲಕ್ಕೆ ಇದು ಅನ್ವಯವಾಗಲಿದೆ. ಸರಕಾರದ ಈ ನಿರ್ಧಾರದಿಂದ 22 ಲಕ್ಷಕ್ಕೂ ಅಧಿಕ ರೈತರಿಗೆ ಸಹಾಯವಾಗಲಿದೆ. ಸರಕಾರದ ಬೊಕ್ಕಸಕ್ಕೆ 8,165 ಕೋಟಿ ರೂ ಹೊರೆಯಾಗುವ ನಿರೀಕ್ಷೆ ಇದೆ.

ಬೆಂಗಳೂರು(ಜೂನ್ 21): ಬರ ಹಾಗೂ ಸಾಲದ ಹೊರೆಯಿಂದ ಬಳಲುತ್ತಿರುವ ರಾಜ್ಯದ ರೈತರಿಗೆ ಸ್ವಲ್ಪ ಸಿಹಿ ಸುದ್ದಿ. ರೈತರ 8 ಸಾವಿರ ಕೋಟಿಗೂ ಅಧಿಕ ಸಾಲವನ್ನು ಸರಕಾರ ಮನ್ನಾ ಮಾಡಲು ನಿರ್ಧರಿಸಿದೆ. ಸಹಕಾರ ಬ್ಯಾಂಕ್'ಗಳಲ್ಲಿ ರೈತರು ಪಡೆದಿರುವ ಅಲ್ಪಾವಧಿ, ಮಧ್ಯಮಾವಧಿ ಸಾಲದಲ್ಲಿ 50 ಸಾವಿರ ರೂಪಾಯಿ ಮನ್ನಾ ಆಗಲಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದಿರುವ ಸಾಲಗಳಿಗೆ ಇದು ಅನ್ವಯವಾಗುವುದಿಲ್ಲ. ಸಿಎಂ ಸಿದ್ದರಾಮಯ್ಯ ನಾಳೆ ಗುರುವಾರ ಅಧಿಕೃತ ಘೋಷಣೆ ಮಾಡಲಿದ್ದಾರೆ.

ಜೂನ್ 20, ಅಂದರೆ ನಿನ್ನೆಯವರೆಗೆ ರೈತರು ಮಾಡಿರುವ ಸಾಲಕ್ಕೆ ಇದು ಅನ್ವಯವಾಗಲಿದೆ. ಸರಕಾರದ ಈ ನಿರ್ಧಾರದಿಂದ 22 ಲಕ್ಷಕ್ಕೂ ಅಧಿಕ ರೈತರಿಗೆ ಸಹಾಯವಾಗಲಿದೆ. ಸರಕಾರದ ಬೊಕ್ಕಸಕ್ಕೆ 8,165 ಕೋಟಿ ರೂ ಹೊರೆಯಾಗುವ ನಿರೀಕ್ಷೆ ಇದೆ.

ಚುನಾವಣೆ ಗಿಮಿಕ್?
ರೈತರ 50 ಸಾವಿರ ರೂ ಸಾಲ ಮನ್ನಾ ಮಾಡುವ ರಾಜ್ಯ ಸರಕಾರದ ನಿರ್ಧಾರವನ್ನು ಕೇವಲ ಕಣ್ಣೊರೆಸುವ ನಾಟಕ ಎಂದು ವಿಪಕ್ಷಗಳು ಬಣ್ಣಿಸಿವೆ. ಸರಕಾರಕ್ಕೆ ರೈತರ ಮೇಲಿನ ಕಾಳಜಿ ಇಲ್ಲ. ಚುನಾವಣೆ ಸಮೀಪಿಸಿರುವುದರಿಂದ ಜನಪ್ರಿಯತೆ ಗಳಿಸಲು ಸರಕಾರ ಇಂತಹ ತಂತ್ರ ಅನುಸರಿಸಿದೆ ಎಂದು ವಿಪಕ್ಷ ಮುಖಂಡರು ಟೀಕಿಸಿದ್ದಾರೆ. ಹಸಿವಿನಿಂದ ಅಳುತ್ತಿರುವ ಮಗುವಿಗೆ ಚಾಕೊಲೇಟ್ ಕೊಟ್ಟು ಸಮಾಧಾನ ಮಾಡಿದಂಥ ಸ್ಥಿತಿಯಾಗಿದೆ. ರೈತರ ಬಗ್ಗೆ ಸರಕಾರಕ್ಕೆ ನಿಜವಾದ ಹಾಗೂ ಪ್ರಾಮಾಣಿಕವಾದ ಕಾಳಜಿ ಇದ್ದಿದ್ದರೆ 2 ವರ್ಷದ ಹಿಂದೆಯೇ ಸಾಲ ಮನ್ನಾ ಆಗಬೇಕಿತ್ತು ಎಂದು ವಿಪಕ್ಷ ಮುಖಂಡ ಜಗದೀಶ್ ಶೆಟ್ಟರ್ ಸುವರ್ಣನ್ಯೂಸ್'ಗೆ ರಿಯಾಕ್ಷನ್ ಕೊಟ್ಟಿದ್ದಾರೆ. ಬಹಳ ದಿನಗಳಿಂದ ರೈತರ ಸಾಲ ಮನ್ನಾಗೆ ಆಗ್ರಹಿಸುತ್ತಾ ಬಂದಿದ್ದ ವಿಪಕ್ಷಗಳು, ಸರಕಾರ ಇನ್ನೂ ಹೆಚ್ಚು ಸಾಲ ಮನ್ನಾ ಮಾಡಬಹುದಿತ್ತು ಎಂದು ಅಭಿಪ್ರಾಯಪಟ್ಟಿವೆ.

ಪುಟ್ಟಣ್ಣಯ್ಯ ಸ್ವಾಗತ:
ರೈತರ ಸಾಲ ಮನ್ನಾ ಮಾಡುವ ಸರಕಾರದ ನಿರ್ಧಾರವನ್ನು ರೈತ ಮುಖಂಡ ಪುಟ್ಟಣ್ಣಯ್ಯ ಸ್ವಾಗತಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಸರಕಾರ ಇದನ್ನು ಘೋಷಿಸಿದ್ದರೂ ರೈತರಿಗೆ ಸ್ವಲ್ಪ ಮಟ್ಟಿಗಾದರೂ ನಿರಾಳ ತರುವುದರಿಂದ ಇದು ಸ್ವಾಗತಾರ್ಹ ಎಂದು ಸುವರ್ಣನ್ಯೂಸ್'ಗೆ ಪುಟ್ಟಣ್ಣಯ್ಯ ತಿಳಿಸಿದ್ದಾರೆ.

ಬೇರೆ ಕೆಲ ರಾಜ್ಯಗಳಲ್ಲೂ ಸರಕಾರಗಳು ರೈತರ ಸಾಲ ಮನ್ನಾ ಮಾಡಲು ನಿರ್ಧರಿಸಿವೆ. ತಮಿಳುನಾಡು, ಪಂಜಾಬ್ ಮತ್ತು ಮಹಾರಾಷ್ಟ್ರ ಸರಕಾರಗಳು 2 ಲಕ್ಷ ರೂವರೆಗೆ ಸಾಲ ಮನ್ನಾ ಮಾಡಿವೆ. ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ರೈತರ 1 ಲಕ್ಷ ರೂ ಸಾಲ ಮನ್ನಾ ಮಾಡಿದೆ.