ಭ್ರಷ್ಟಾಚಾರ ಪ್ರಕರಣಗಳ ಸಂಬಂಧ ಹಿಂದಿನ ಸರ್ಕಾರದ ಜೊತೆಗೆ ಹೋಲಿಕೆ ಮಾಡಿ ನೋಡಿದಾಗ  ಕೆಳಗಿನಂತೆ ಜನತೆಯು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು(ಡಿ.7): 2008ರಿಂದ ಆಳ್ವಿಕೆ ನಡೆಸಿದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕಡು ಭ್ರಷ್ಟ ಎಂದು ಸಿದ್ದರಾಮಯ್ಯ ಹೋದಲ್ಲಿ ಬಂದಲ್ಲೆಲ್ಲಾ ಹೇಳುತ್ತಿದ್ದಾರೆ. ಆದರೆ ಜನರಲ್ಲಿ ಅದಕ್ಕಿಂತ ಭಿನ್ನವಾದ ಭಾವನೆ ಇದೆ ಎಂಬ ಅಂಶ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಈ ಹಿಂದಿನ ಯಡಿಯೂರಪ್ಪ ಸರ್ಕಾರ ಹಾಗೂ ಈಗಿನ ಸಿದ್ದರಾಮಯ್ಯ ಸರ್ಕಾರ ಎರಡೂ ಭ್ರಷ್ಟ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಹೆಚ್ಚಿನ ಸಂಖ್ಯೆಯ ಜನರು ಹೇಳಿದ್ದಾರೆ. ವಿಶೇಷ ಎಂದರೆ, ಯಡಿಯೂರಪ್ಪ ಸರ್ಕಾರಕ್ಕಿಂತ ಸಿದ್ದರಾಮಯ್ಯ ಸರ್ಕಾರವೇ ಅತಿ ಹೆಚ್ಚು ಭ್ರಷ್ಟ ಎಂದು ಹೇಳಿರುವವರೇ ಅಧಿಕ ಪ್ರಮಾಣದಲ್ಲಿರುವುದು ಕಾಂಗ್ರೆಸ್ಸಿಗರು ಚಿಂತೆ ಮಾಡಬೇಕಾದ ವಿಷಯ.

ಎರಡೂ ಸರ್ಕಾರಗಳು ಭ್ರಷ್ಟ ಎಂಬ ಅಭಿಪ್ರಾಯ ಗ್ರಾಮೀಣ ಭಾಗದಲ್ಲಿದ್ದರೆ, ಸಿದ್ದರಾಮಯ್ಯ ಸರ್ಕಾರವೇ ಅತಿ ಹೆಚ್ಚು ಭ್ರಷ್ಟ ಎಂಬ ಭಾವನೆ ನಗರಗಳಲ್ಲಿ ಇದೆ. ಲಿಂಗಾಯತರ ಪೈಕಿ `ಎರಡೂ ಸರ್ಕಾರ ಭ್ರಷ್ಟ' ಹಾಗೂ `ಸಿದ್ದು ಸರ್ಕಾರ ಅತಿ ಹೆಚ್ಚು ಭ್ರಷ್ಟ' ಎಂಬ ಅಭಿಪ್ರಾಯ ಹೆಚ್ಚೂಕಡಿಮೆ ಒಂದೇ ಪ್ರಮಾಣದಲ್ಲಿರುವುದರಿಂದ ಬಿಜೆಪಿ ಕೊಂಚ ಖುಷಿಪಡಬಹುದು. ಒಕ್ಕಲಿಗರಲ್ಲಿ ಸಿದ್ದರಾಮಯ್ಯ ಸರ್ಕಾರವೇ ಭ್ರಷ್ಟ ಎಂಬ ಅಭಿಪ್ರಾಯವಿದೆ. ಕರಾವಳಿ, ಕೇಂದ್ರ ಕರ್ನಾಟಕ,ಬೆಂಗಳೂರು, ಮೈಸೂರು ಭಾಗದಲ್ಲಿ ಈ ಅಭಿಪ್ರಾಯವೇ ಬಲವಾಗಿ ಕಂಡುಬಂದಿದೆ.