Asianet Suvarna News Asianet Suvarna News

ಪರಪ್ಪನ ಅಗ್ರಹಾರ ಕಾರಾಗೃಹ ಅಕ್ರಮಗಳ ಬಗ್ಗೆ ಗೊತ್ತಿದ್ದೂ ಸುಮ್ಮನಿತ್ತಾ ಸರ್ಕಾರ?

ಪರಪ್ಪನ ಅಗ್ರಹಾರ ಕಾರಾಗೃಹದ ಬಗ್ಗೆ ಡಿಐಜಿ ರೂಪಾ ಅವರ ವರದಿ ದೊಡ್ಡ ವಿವಾದವನ್ನೇ ಹುಟ್ಟುಹಾಕಿದೆ. ವರದಿಯ ಪರಿಣಾಮವಾಗಿ ಹಲವಾರು ಕಟು ಸತ್ಯಗಳು ಹೊರಬಿದ್ದಿವೆ. ದುರಂತವೆಂದರೆ, ರೂಪಾ ಅವರಿಗಿಂತಲೂ ಮೊದಲೇ ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದ ಎಲ್ಲಾ ಕಾರಾಗೃಹಗಳಲ್ಲಿನ ಅಕ್ರಮಗಳ ಬಗ್ಗೆ ಒಂದು ವರ್ಷದ ಹಿಂದೆಯೇ ಸಲ್ಲಿಕೆಯಾಗಿದ್ದ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ-ಪರಿಶೋಧಕರು(ಸಿಎಜಿ) ವರದಿ ಮೂಲೆ ಗುಂಪಾಗಿತ್ತು. ರಾಜ್ಯದ ಜೈಲುಗಳಲ್ಲಿ ನಡೆಯುತ್ತಿರುವ ಅವ್ಯವಹಾರದ ಕುರಿತು ಸಿಎಜಿ 2016 ರಲ್ಲೇ ಪ್ರಸ್ತಾಪಿಸಿ ಎಲ್ಲ ಅಕ್ರಮಗಳ ಕುರಿತು ಗಮನ ಸೆಳೆದಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ವರದಿಯನ್ನು ಮೂಲೆಗುಂಪು ಮಾಡಿತ್ತು.  2015 ರ ಸಾಲಿಗೆ ಸಂಬಂಧಪಟ್ಟಂತೆ ಸಲ್ಲಿಸಲಾಗಿದ್ದ ವರದಿಯಲ್ಲಿ  ಜೈಲು ಅಕ್ರಮಗಳ ಕುರಿತು ಬಹುತೇಕ ಎಲ್ಲ ವಿಚಾರಗಳನ್ನೂ ಪ್ರಸ್ತಾಪಿಸಿತ್ತು. ಡಿಐಜಿ ಆಗಿ ನೇಮಕಗೊಂಡ ರೂಪಾ ನೀಡಿದ್ದ  ವರದಿಯಲ್ಲಿದ್ದ ಅಕ್ರಮಗಳ ವಿವರಗಳಲ್ಲಿ ಬಹುತೇಕ ಅಂಶಗಳು ಸಿಎಜಿ ವರದಿಯಲ್ಲೇ ಇರುವುದು ವಿಶೇಷ.

Siddaramaiah government knew irregularities in Parappana Agrahara one year ago

ಬೆಂಗಳೂರು (ಜು.21): ಪರಪ್ಪನ ಅಗ್ರಹಾರ ಕಾರಾಗೃಹದ ಬಗ್ಗೆ ಡಿಐಜಿ ರೂಪಾ ಅವರ ವರದಿ ದೊಡ್ಡ ವಿವಾದವನ್ನೇ ಹುಟ್ಟುಹಾಕಿದೆ. ವರದಿಯ ಪರಿಣಾಮವಾಗಿ ಹಲವಾರು ಕಟು ಸತ್ಯಗಳು ಹೊರಬಿದ್ದಿವೆ. ದುರಂತವೆಂದರೆ, ರೂಪಾ ಅವರಿಗಿಂತಲೂ ಮೊದಲೇ ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದ ಎಲ್ಲಾ ಕಾರಾಗೃಹಗಳಲ್ಲಿನ ಅಕ್ರಮಗಳ ಬಗ್ಗೆ ಒಂದು ವರ್ಷದ ಹಿಂದೆಯೇ ಸಲ್ಲಿಕೆಯಾಗಿದ್ದ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ-ಪರಿಶೋಧಕರು(ಸಿಎಜಿ) ವರದಿ ಮೂಲೆ ಗುಂಪಾಗಿತ್ತು. ರಾಜ್ಯದ ಜೈಲುಗಳಲ್ಲಿ ನಡೆಯುತ್ತಿರುವ ಅವ್ಯವಹಾರದ ಕುರಿತು ಸಿಎಜಿ 2016 ರಲ್ಲೇ ಪ್ರಸ್ತಾಪಿಸಿ ಎಲ್ಲ ಅಕ್ರಮಗಳ ಕುರಿತು ಗಮನ ಸೆಳೆದಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ವರದಿಯನ್ನು ಮೂಲೆಗುಂಪು ಮಾಡಿತ್ತು.  2015 ರ ಸಾಲಿಗೆ ಸಂಬಂಧಪಟ್ಟಂತೆ ಸಲ್ಲಿಸಲಾಗಿದ್ದ ವರದಿಯಲ್ಲಿ  ಜೈಲು ಅಕ್ರಮಗಳ ಕುರಿತು ಬಹುತೇಕ ಎಲ್ಲ ವಿಚಾರಗಳನ್ನೂ ಪ್ರಸ್ತಾಪಿಸಿತ್ತು. ಡಿಐಜಿ ಆಗಿ ನೇಮಕಗೊಂಡ ರೂಪಾ ನೀಡಿದ್ದ  ವರದಿಯಲ್ಲಿದ್ದ ಅಕ್ರಮಗಳ ವಿವರಗಳಲ್ಲಿ ಬಹುತೇಕ ಅಂಶಗಳು ಸಿಎಜಿ ವರದಿಯಲ್ಲೇ ಇರುವುದು ವಿಶೇಷ.
 

ಸಿಎಜಿ ವರದಿಯಲ್ಲೇನಿತ್ತು?
ರಾಜ್ಯದ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳಾದ ಮೊಬೈಲ್ ಸೇರಿದಂತೆ ಗಾಂಜಾ ಇನ್ನಿತರ ಮಾದಕ ದ್ರವ್ಯಗಳು, ಆಧುನಿಕ ಎಲೆಕ್ಟ್ರಾನಿಕ್ ಸಾಧನಗಳು ಎಗ್ಗಿಲ್ಲದೇ ಬಳಕೆಯಾಗುತ್ತಿವೆ. ಜೈಲು ಕೈಪಿಡಿಯಂತೆ ಮುಖ್ಯದ್ವಾರದಲ್ಲಿ ಸೂಕ್ತ ತಪಾಸಣೆ ನಡೆಸದೇ ಇರುವುದು, ಖೈದಿಗಳ ಭೇಟಿಗೆ ಇರುವ ನಿಯಮಗಳ ಪರಿಪಾಲನೆ ಆಗದೇ ಇರುತ್ತಿರುವುದು, ಸುರಕ್ಷತಾ ವ್ಯವಸ್ಥೆ ಸಡಿಲಿಕೆ, ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುತ್ತಿಲ್ಲ.  ನಿಷೇಧಿತ ವಸ್ತುಗಳ ಪತ್ತೆಗೆ ಲೋಹ ಪತ್ತೆ ಯಂತ್ರಗಳೂ ಸೇರಿದಂತೆ ಬ್ಯಾಗೇಜ್ ಶೋಧಕ ಯಂತ್ರಗಳು ಇನ್ನಿತರ ಉಪಕರಣಗಳು ಲಭ್ಯವಿದ್ದರೂ ಇವುಗಳ ಬಳಕೆಗೆ ಸರ್ಕಾರ ಮಾರ್ಗದರ್ಶಿ ಸೂತ್ರಗಳನ್ನೇ ಮಾಡದೇ ಸಡಿಲವಾಗಿ ಬಿಟ್ಟಿರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. 
ಜೈಲುಗಳಲ್ಲಿ ಅನಿರೀಕ್ಷಿತ ತಪಾಸಣೆಗಳನ್ನು ನಡೆಸಬೇಕು, ಶ್ವಾನ ದಳಗಳಿಂದ ಕಟ್ಟಡಗಳ ತಪಾಸಣೆ ನಡೆಸಬೇಕೆಂಬ ನಿಯಮಗಳನ್ನೂ ಪಾಲಿಸುತ್ತಿಲ್ಲ. ಬೇಕಾಬಿಟ್ಟಿ  ತಪಾಸಣೆ ಮಾಡಲಾಗುತ್ತಿದೆ. ೨೦೧೫ರಲ್ಲಿ  ಒಟ್ಟು ೭೬೮ ಬಾರಿ ಶ್ವಾನದಳ ತಪಾಸಣೆ ನಡೆಸಬೇಕಿದ್ದರೂ ಕೇವಲ ೧೩೮ ತಪಾಸಣೆ,  ಇದೇ ವೇಳೆ ೧೨೪೮ ಅನಿರೀಕ್ಷಿತ ತಪಾಸಣೆ ಮಾಡಬೇಕೆಂದಿದ್ದರೂ ಕೇವಲ ೧೩೦ ತಪಾಸಣೆಗಳನ್ನು ಮಾತ್ರ ನಡೆಸಲಾಗಿತ್ತು ಎಂದು ಸಿಎಜಿ ವರದಿಯಲ್ಲಿ  ವಿವರಿಸಲಾಗಿದೆ.
ಕೈದಿಗಳ ಬಳಿ ನಿಷೇಧಿತ ವಸ್ತುಗಳು ಹೊಂದಿರುವುದನ್ನು ನೋಡಿದರೆ ಜೈಲಿಗೆ ಭೇಟಿ ನೀಡುವವರ  ದೈಹಿಕ ತಪಾಸಣೆ ವಿಧಾನ ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಹೇಳಿದ್ದ ವರದಿ ಸಿಸಿ ಟಿವಿ ಕ್ಯಾಮರಾ, ಮೊಬೈಲ್ ಜಾಮರ್‌ಗಳ ನಿಷ್ಕ್ರಿಯತೆ, ಅವುಗಳಿಗೆ ಮಾಡಲಾದ ವೆಚ್ಚದಲ್ಲಿನ ನ್ಯೂನ್ಯತೆಗಳತ್ತಲೂ ಬೆಳಕು ಚೆಲ್ಲಿತ್ತು. 
 

ಕೋಟ್ಯಂತರ ರು. ವ್ಯರ್ಥ
ಜೈಲುಗಳಲ್ಲಿ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಮಾಡಿರುವ ಖರ್ಚು ಬಹುಪಾಲು ವ್ಯರ್ಥವಾಗಿದೆ. ಕಾರಾಗೃಹಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ಕೆಮರಾಗಳಲ್ಲಿ ಹೆಚ್ಚಿನ ಕೆಮರಾಗಳು ಕಾರ್ಯ ನಿರ್ವಹಿಸದೇ ಇರುವುದು (₹17.87ಕೋಟಿ ವೆಚ್ಚ), ₹28.28ಕೋಟಿ ವೆಚ್ಚದಲ್ಲಿ ಅಳವಡಿಸಲಾಗಿದ್ದ ಮೊಬೈಲ್ ಜಾಮರ್‌ಗಳು ಮೊಬೈಲ್ ಸಂಕೇತಗಳನ್ನು ನಿರ್ಬಂಧಿಸದೇ ಜೈಲುಗಳಲ್ಲಿ ಎರ‌್ರಾಬಿರ‌್ರಿ ಮೊಬೈಲ್ ಬಳಕೆ ಆಗಲು ಅನುವು ಮಾಡಿಕೊಟ್ಟಂತಾಗಿದೆ. ಮಾತ್ರವಲ್ಲ ಕೆಲವೊಂದು ಜೈಲುಗಳಲ್ಲಿ ಅಂತರ್ಜಾಲ ಸಂಪರ್ಕವೂ ಇರುವುದನ್ನು ವರದಿಯಲ್ಲಿ ತಿಳಿಸಲಾಗಿದೆ. ರೂಪಾ ಅವರ ವರದಿಯಲ್ಲೂ ಈ ಪೈಕಿ ಕೆಲ ಅಂಶಗಳು ಇವೆ. ಒಟ್ಟಾರೆ, ರಾಜ್ಯದ ಜೈಲುಗಳ ಪರಿಸ್ಥಿತಿ ಸರಿಯಿಲ್ಲ ಎಂಬುದನ್ನು ಈ ಎರಡು ವರದಿಗಳು ಬಿಂಬಿಸುತ್ತವೆ. ಒಂದು ವರ್ಷದ ಹಿಂದೆ ಸಲ್ಲಿಕೆಯಾದ ಸಿಎಜಿ ವರದಿ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳದಿರುವುದು ಜೈಲಿನ ಸಮಸ್ಯೆಗಳ ಪರಿಹರಿಸುವ ಮನಸ್ಥಿತಿಯೇ ಇಲ್ಲ ಎಂಬುದನ್ನು ಸಾಬೀತು ಪಡಿಸುತ್ತದೆ. ಒಂದು ವೇಳೆ ರೂಪಾ ಅವರು ಎರಡು ವರದಿ ಸಲ್ಲಿಕೆ ಮಾಡದಿದ್ದರೆ, ಕಾರಾಗೃಹದೊಳಗಿನ ಸಮಸ್ಯೆಗಳು ಬಹಿರಂಗಗೊಳ್ಳುತ್ತಲೇ ಇರಲಿಲ್ಲ ಎಂದು ಹೇಳಬಹುದು.

ಸಿಎಜಿ ಮಾಡಿದ್ದ ಪ್ರಮುಖ ಶಿಫಾರಸುಗಳು 


-ಕಾರಾಗೃಹ ಪ್ರವೇಶಿಸುವ ವ್ಯಕ್ತಿಗಳು, ವಾಹನಗಳ ತಪಾಸಣೆಗೆ ಮಾರ್ಗದರ್ಶಿ ಸೂತ್ರ ರಚನೆ ಮಾಡುವುದು.
-ಕಾರಾಗೃಹ ಸುರಕ್ಷತೆಗೆ ಬಳಸಲಾಗುತ್ತಿರುವ ಉಪಕರಣಗಳ ಕುರಿತು ನಿಬಂಧನೆ ರೂಪಿಸುವುದು. 
-ಸಿಸಿಟಿವಿ ಕೆಮರಾಗಳನ್ನು ಎಲ್ಲ ಕಾರಾಗೃಹಗಳಿಗೂ ವಿಸ್ತರಿಸುವುದು.
- ಸಿಸಿಟಿವಿ ಕೆಮರಾಗಳ ಸಮರ್ಪಕ ನಿರ್ವಹಣೆ ಖಚಿತಪಡಿಸಿಕೊಳ್ಳುವುದು. 
-ಮೊಬೈಲ್ ಜಾಮರ್‌ಗಳು ಕಾರ್ಯ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುವುದು. 
-ಗೋಡೆ ಎತ್ತರಿಸಲು ಮಾಡಿದ್ದ ಶಿಫಾರಸ್ಸು ಅನುಷ್ಟಾನ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು.

ಪ್ರಶಾಂತ್‌ಕುಮಾರ್ ಎಂ.ಎನ್. ಬೆಂಗಳೂರು 

Follow Us:
Download App:
  • android
  • ios