ಬೆಂಗಳೂರು [ಆ.26]:  ‘ಬಿಜೆಪಿಗಿಂತ ಸಿದ್ದರಾಮಯ್ಯ ಅವರೇ ನನಗೆ ಮೊದಲ ಶತ್ರು’ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ  ಹೇಳಿಕೆಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಕುಮಾರಸ್ವಾಮಿ ನನ್ನನ್ನು ಶತ್ರುವಿನಂತೆ ನೋಡಿದ್ದೇ ಸಮಸ್ಯೆಗೆ ಕಾರಣ, ಮಿತ್ರನಂತೆ ಅಥವಾ ಮೈತ್ರಿ ಪಕ್ಷದವನಂತೆ ನೋಡಿದ್ದರೆ ಏನೂ ಆಗುತ್ತಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಅವರು ನನ್ನನ್ನು ಶತ್ರು ಅಂದುಕೊಂಡು ದ್ವೇಷ ಸಾಧಿಸುತ್ತಲೇ ಬಂದರು. ಪ್ರೀತಿಯಿಂದ, ಸ್ನೇಹಿತನಂತೆ, ಕನಿಷ್ಠ ಮೈತ್ರಿ ಪಕ್ಷದ ನಾಯಕನಂತೆ ಕಾಣದೆ ಹೋದದ್ದೇ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಯಿತು ಎಂದು ತಿಳಿಸಿದರು ಇದೇ ವೇಳೆ, ಸಮ್ಮಿಶ್ರ ಸರ್ಕಾರದಲ್ಲಿ ‘ನನ್ನನ್ನು ಕ್ಲರ್ಕ್ ರೀತಿ ನಡೆಸಿಕೊಂಡರು’ ಎಂಬ ಕುಮಾರಸ್ವಾಮಿ ಹೇಳಿಕೆಗೂ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಧಿಕಾರ ನಡೆಸಲು ಬಾರದವರು ಹೀಗೆಯೇ ಹೇಳೋದು.

ಅದಕ್ಕೆ ನಾವೇನು ಮಾಡಲು ಆಗುತ್ತೆ ಹೇಳಿ ಎಂದು ಕಿಡಿಕಿಡಿಯಾದರು.