ಬೆಂಗಳೂರು (ಸೆ.30): ಸಿಎಂ ಬಿ.ಎಸ್. ಯಡಿಯೂರಪ್ಪರ ತಂತಿ ಮೇಲೆ ನಡೆಯುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಯಡಿಯೂರಪ್ಪ ಹೇಳಿಕೆಯು ವಿರೋಧಪಕ್ಷ ನಾಯಕರಿಗೆ ಸರ್ಕಾರದ ವಿರುದ್ಧ ಟೀಕಿಸಲು ಹೊಸ ಅಸ್ತ್ರವನ್ನು ಕೊಟ್ಟಂತಾಗಿದೆ.

ಯಡಿಯೂರಪ್ಪ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಅಯ್ಯೋ, ಪಾಪ.... ಎಂದು ವ್ಯಂಗ್ಯವಾಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ...

ಮೋದಿ ಬಳಿ ಮಾತನಾಡುವ ಧೈರ್ಯವಿಲ್ಲ:

ಚಂದ್ರಯಾನ-2 ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ದಿನ ಬೆಂಗಳೂರಿಗೆ ಆಗಮಿಸಿದ್ದ ನರೇಂದ್ರ ಮೋದಿಯವರನ್ನು ಭೇಟಿಯಾಗಲು ಅವಕಾಶ ನೀಡುವಂತೆ ಕಾಂಗ್ರೆಸ್ ಪಕ್ಷದ ವತಿಯಿಂದ ಪತ್ರ ಬರೆದಿದ್ದೆವು, ಆದರೆ ಭೇಟಿಗೆ ಅವಕಾಶ ನೀಡಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಮೋದಿಯವರ ಬಳಿ ಮಾತನಾಡುವ ಧೈರ್ಯವಿಲ್ಲ. ಹೀಗಾದರೆ ರಾಜ್ಯದ ಸಮಸ್ಯೆ ಬಗೆಹರಿಯುವುದು ಹೇಗೆ

ಯಡಿಯೂರಪ್ಪ ದುಸ್ಥಿತಿ:

ಯಡಿಯೂರಪ್ಪನವರ ರೆಕ್ಕೆ ಪುಕ್ಕವನ್ನು ಬಿಜೆಪಿ ಹೈಕಮಾಂಡ್ ಕತ್ತರಿಸಿ ಬಿಟ್ಟಿದೆ. ಪ್ರತಿ ದಿನವೂ ಅವರಿಗೆ ಸ್ವಪಕ್ಷದವರೇ ಕಿರುಕುಳ ನೀಡುತ್ತಿದ್ದಾರೆ. ರಾಜ್ಯದ ಸಮಸ್ಯೆ ಬಗ್ಗೆ ಮಾತನಾಡಲು ಅವರಿಗೆ ಅವಕಾಶವನ್ನು ಸಹ ನೀಡುತ್ತಿಲ್ಲ. ಪಾಪ, ಯಡಿಯೂರಪ್ಪನವರನ್ನು ನೋಡಿದರೆ ನನಗೆ ಅಯ್ಯೋ ಅನಿಸುತ್ತದೆ.  

ನೆರೆ ಪರಿಹಾರ:
ಪ್ರವಾಹದಿಂದ ಅತಿ ಹೆಚ್ಚು ಹಾನಿಗೀಡಾಗಿರುವುದು ಬೆಳಗಾವಿ ಜಿಲ್ಲೆ, ನಂತರ ಬಾಗಲಕೋಟೆ, ರಾಯಚೂರು, ಗದಗ ಹೀಗೆ ಸಾಕಷ್ಟು ನಷ್ಟಕ್ಕೆ ಈಡಾಗಿವೆ ಪ್ರತಿ ತಿಂಗಳು ಸಂತ್ರಸ್ತರಿಗೆ ಮನೆ ಬಾಡಿಗೆ ರೂಪದಲ್ಲಿ ರೂ.5000 ಕೊಡಲಾಗುತ್ತಿದೆ. ಹಳ್ಳಿಗಳಲ್ಲಿ ಮನೆ ಬಾಡಿಗೆಗೆ ಸಿಗುತ್ತದೆಯೇ? ಮನೆ ಕಳೆದುಕೊಂಡವರು ಮುಂದಿನ ಹತ್ತು ತಿಂಗಳು ಎಲ್ಲಿ ವಾಸಿಸಬೇಕು? ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ನೀಡಿದ್ದ ಅನುದಾನವನ್ನು ಯಡಿಯೂರಪ್ಪ ಅವರು ಕಡಿತ ಮಾಡಿದ್ದಾರೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ನಿಗದಿ ಮಾಡಿದ್ದ ಅನುದಾನವನ್ನೂ ವಾಪಸ್ ಪಡೆದಿದ್ದಾರೆ. ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಇಂತಹ ದ್ವೇಷದ ರಾಜಕೀಯ ಸರಿಯಲ್ಲ.

ಬಳ್ಳಾರಿ ವಿಭಜನೆ:
ಆನಂದ್ ಸಿಂಗ್ ಅವರಿಗೆ ಅನುಕೂಲವಾಗಲಿ ಎಂದು ಬಳ್ಳಾರಿ ಜಿಲ್ಲೆಯನ್ನು ವಿಭಜಿಸಲು ಹೊರಟಿದ್ದಾರೆ, ಇದು ಸರಿಯಲ್ಲ. ಬಳ್ಳಾರಿಗೆ ಹೋಲಿಸಿದರೆ ಬೆಳಗಾವಿ ತೀರಾ ದೊಡ್ಡದು. ಬೆಳಗಾವಿಯಲ್ಲಿ ಹದಿನೆಂಟು ವಿಧಾನಸಭಾ ಕ್ಷೇತ್ರಗಳಿವೆ. ಅಷ್ಟು ದೊಡ್ಡ ಜಿಲ್ಲೆಯನ್ನೇ ವಿಭಜಿಸದೆ ಇರುವಾಗ ಬರೀ ಹತ್ತು ವಿಧಾನಸಭಾ ಕ್ಷೇತ್ರವಿರುವ ಬಳ್ಳಾರಿಯ ವಿಭಜನೆಯ ಅಗತ್ಯವಿದೆಯೇ?