2 ಕಡೆ ಸಿದ್ದು ಸ್ಪರ್ಧೆ: ಆಪ್ತರಿಂದಲೇ ಸುಳಿವು

First Published 7, Apr 2018, 7:49 AM IST
Siddaramaiah Contest From 2 Constituency
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರವೊಂದರಲ್ಲೇ ಸ್ಪರ್ಧಿಸುವರೋ ಅಥವಾ ರಿಸ್ಕ್‌ ಇದೆ ಎಂಬ ಕಾರಣಕ್ಕೆ ಮತ್ತೊಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವರೋ ಎಂಬ ಪ್ರಶ್ನೆ ರಾಜ್ಯ ರಾಜಕಾರಣದಲ್ಲಿ ತೀವ್ರವಾಗಿ ಕೇಳಿಬರುತ್ತಿದೆ.

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರವೊಂದರಲ್ಲೇ ಸ್ಪರ್ಧಿಸುವರೋ ಅಥವಾ ರಿಸ್ಕ್‌ ಇದೆ ಎಂಬ ಕಾರಣಕ್ಕೆ ಮತ್ತೊಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವರೋ ಎಂಬ ಪ್ರಶ್ನೆ ರಾಜ್ಯ ರಾಜಕಾರಣದಲ್ಲಿ ತೀವ್ರವಾಗಿ ಕೇಳಿಬರುತ್ತಿದೆ.

ಸತತವಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಣದಲ್ಲಿ ತಮಗೆ ಎದುರಾಗಿರುವ ಸವಾಲನ್ನು ಅರ್ಥಮಾಡಿಕೊಂಡಿದ್ದಾರೆ ಎಂಬುದು ಸ್ವಯಂವೇದ್ಯ. ಆದರೆ, ರಿಸ್ಕ್‌ ಇದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಕ್ಷೇತ್ರ ಬದಲಿಸುವರೇ ಎಂಬ ಪ್ರಶ್ನೆಗೆ ಎರಡು ರೀತಿಯ ಸಮಜಾಯಿಷಿ ಸಿದ್ದರಾಮಯ್ಯ ಅವರ ಆಪ್ತ ಬಣದಿಂದ ಕೇಳಿ ಬರುತ್ತಿದೆ.

ಸಿದ್ದರಾಮಯ್ಯ ಸ್ಪರ್ಧೆಯ ಸಾಧ್ಯಾಸಾಧ್ಯತೆಗಳ ಬಗ್ಗೆ ಅವರ ಆಪ್ತ ಬಣದ ಬಳಿ ಸಮಜಾಯಿಷಿಗಳಿವೆ. ಅವು- ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿಯಿಂದಲೇ ಸ್ಪರ್ಧಿಸಬೇಕು ಎಂಬ ಬಲವಾದ ಇರಾದೆಯಿದೆ. ಈ ಹಂತದಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ತಮ್ಮ ಕಾಲು ಹಿಂತೆಗೆದರೆ ಅದು ತಮ್ಮ ಇಮೇಜ್‌ಗೆ ಮಾತ್ರವಲ್ಲದೆ ಇಡೀ ಪಕ್ಷಕ್ಕೆ ಹಾನಿಯುಂಟು ಮಾಡುತ್ತದೆ. ಅಲ್ಲದೆ, ಕ್ಷೇತ್ರದಲ್ಲಿ ತಮಗೆ ವಿರೋಧವಿದೆ ಎಂದು ಬಿಂಬಿಸಲಾಗುತ್ತಿರುವುದು ಒಕ್ಕಲಿಗರು ಹಾಗೂ ಲಿಂಗಾಯತರು ಮಾತ್ರ. ಆದರೆ, ಉಳಿದ ಜನಾಂಗಗಳು ತಮ್ಮೊಂದಿಗೆ ನಿಂತಿವೆ. ಮೇಲ್ವರ್ಗ ಎಷ್ಟುಪ್ರಬಲವಾಗಿ ವಿರೋಧಿಸುತ್ತದೆಯೋ ಅಷ್ಟೇ ಪ್ರಬಲವಾಗಿ ಉಳಿದ ವರ್ಗಗಳು ತಮ್ಮ ಪರ ನಿಲ್ಲುತ್ತವೆ. ಇನ್ನು ಒಕ್ಕಲಿಗರಲ್ಲೂ ಎಲ್ಲರೂ ಜೆಡಿಎಸ್‌ ಅಥವಾ ಬಿಜೆಪಿಗೆ ಮತ ಹಾಕುವುದಿಲ್ಲ. ಕ್ಷೇತ್ರದಲ್ಲಿರುವ ಆ ಸಮುದಾಯದ ನಾಯಕರಲ್ಲೂ ತಮ್ಮ ಹಿಂಬಾಲಕರಿದ್ದಾರೆ. ಅವರಿಂದಲೂ ತಮಗೆ ಮತ ಬರುತ್ತದೆ ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರ.

ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್‌ ಎರಡೂ ಪಕ್ಷಗಳು ಒಗ್ಗೂಡಿ ಒಬ್ಬನೇ ಅಭ್ಯರ್ಥಿಯನ್ನು ತಮ್ಮ ವಿರುದ್ಧ ಕಣದಲ್ಲಿ ನಿಲ್ಲಿಸಿದ್ದಾಗಲೂ ತಾವು ಗೆದ್ದಿದ್ದು ಇದೆ. ಈಗ ಎರಡೂ ಪಕ್ಷಗಳು ಪತ್ಯೇಕವಾಗಿ ಅಭ್ಯರ್ಥಿಯನ್ನು ಹಾಕಲಿವೆ. ಹೀಗಿರುವಾಗ ಸೋಲುವ ನಿರೀಕ್ಷೆ ಸಿದ್ದರಾಮಯ್ಯ ಅವರಿಗೆ ಇಲ್ಲ ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ. ಆದರೆ, ಕ್ಷೇತ್ರದ ಬಗ್ಗೆ ಸಿದ್ದರಾಮಯ್ಯ ಹಾಗೂ ಪಕ್ಷ ನಡೆಸಿದ ಸಮೀಕ್ಷೆಯಲ್ಲಿ ಈ ಬಾರಿ ಅವರಿಗೆ ಸಂಕಷ್ಟವಿದೆ ಎಂದೇ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸುತ್ತಲಿರುವ ಚಿಂತಕರ ಚಾವಡಿ ಮತ್ತೊಂದು ಕ್ಷೇತ್ರದಲ್ಲೂ ಸ್ಪರ್ಧಿಸುವಂತೆ ಅವರ ಮೇಲೆ ಒತ್ತಡ ನಿರ್ಮಾಣ ಮಾಡುತ್ತಿದೆ ಎನ್ನಲಾಗಿದೆ.

ಇಂತಹ ಅನಿವಾರ್ಯ ಸೃಷ್ಟಿಯಾದರೆ ಆಗ ಸಿದ್ದರಾಮಯ್ಯ ಚಾಮುಂಡೇಶ್ವರಿಯಿಂದ ಸ್ಪರ್ಧಿಸಿ, ಎರಡನೇ ಕ್ಷೇತ್ರವಾಗಿ ಮತ್ತೊಂದು ಸುರಕ್ಷಿತ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ ಬೀದರ್‌ನಂತಹ ಜಿಲ್ಲೆಗಳಿಂದ ತಮ್ಮ ಜಿಲ್ಲೆಯ ಒಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಬಂದಿದೆ. ನೀವು ನಮ್ಮ ಜಿಲ್ಲೆಯಲ್ಲಿ ಸ್ಪರ್ಧಿಸಿದರೆ ಇದರಿಂದ ಸುತ್ತಮುತ್ತಲಿನ ಹಲವು ಕ್ಷೇತ್ರಗಳಿಗೆ ನೆರವಾಗುತ್ತದೆ. ಇದು ಪಕ್ಷಕ್ಕೆ ಪ್ರಯೋಜನಕಾರಿ ಎಂದು ಒತ್ತಡ ನಿರ್ಮಾಣ ಮಾಡುತ್ತಿದ್ದಾರೆ ಎನ್ನುತ್ತವೆ ಸಿದ್ದು ಆಪ್ತ ಮೂಲಗಳು.

ಇಂತಹ ಏನೇ ವಿವರಣೆಯನ್ನು ಸಿದ್ದರಾಮಯ್ಯ ಅವರ ಆಪ್ತ ಬಣ ನೀಡಿದರೂ ಅವರು ಚಾಮುಂಡೇಶ್ವರಿ ಜತೆಗೆ ಮತ್ತೊಂದು ಸುರಕ್ಷಿತ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾದರೆ ಅದು ಖಚಿತವಾಗಿ ರಿಸ್ಕ್‌ ಬೇಡ ಎಂಬ ಕಾರಣಕ್ಕಾಗಿ ಕೈಗೊಂಡ ತೀರ್ಮಾನವೇ ಆಗುತ್ತದೆ. ಆದರೆ, ಪ್ರತಿಪಕ್ಷಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಪ್ರಯೋಗಿಸಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರನ್ನು ಹಣಿಯಲು ಮುಂದಾಗಿರುವ ಕಾರಣ ಸಿದ್ದರಾಮಯ್ಯ ಮತ್ತೊಂದು ಸುರಕ್ಷಿತ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದೇ ಅವರ ಆಪ್ತ ಮೂಲಗಳು ಹೇಳುತ್ತವೆ.

1. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಾರೋ, ತೀವ್ರ ಒತ್ತಡ ನಿರ್ಮಾಣವಾದರೆ ಮೈಸೂರಿನಲ್ಲೇ ಮತ್ತೊಂದು ಕ್ಷೇತ್ರವನ್ನು (ಬಹುತೇಕ ವರುಣ) ಪರ್ಯಾಯವಾಗಿ ಆಯ್ಕೆ ಮಾಡಿಕೊಳ್ಳಬಹುದೇ ಹೊರತು ಜಿಲ್ಲೆಯಿಂದ ಹೊರಗೆ ಹೋಗುವುದಿಲ್ಲ.

2. ಅನಿವಾರ್ಯ ನಿರ್ಮಾಣವಾದರೆ ಆಗ ಚಾಮುಂಡೇಶ್ವರಿಯಿಂದಲೂ ಸ್ಪರ್ಧಿಸಿ ಎರಡನೇ ಕ್ಷೇತ್ರವಾಗಿ ಉತ್ತರ ಕರ್ನಾಟಕದ ಒಂದು ಕ್ಷೇತ್ರ (ಬಸವಕಲ್ಯಾಣ ಅಥವಾ ಬಾದಾಮಿ)ದಿಂದ ಅವರು ಸ್ಪರ್ಧೆ ಮಾಡಬಹುದು.

ಎರಡನೇ ಕ್ಷೇತ್ರ ಏಕೆ?

1. ‘ಚಾಮುಂಡೇಶ್ವರಿಯಲ್ಲಿ ಸ್ವಲ್ಪ ರಿಸ್ಕ್‌ ಇದೆ’ ಎಂದು ಆಂತರಿಕ ಸಮೀಕ್ಷೆ ಹೇಳಿದೆ ಎನ್ನಲಾಗುತ್ತಿದೆ.

2. ಹಾಗಾಗಿ, ಮತ್ತೊಂದು ‘ಸುರಕ್ಷಿತ ಕ್ಷೇತ್ರ’ದಲ್ಲಿ ಸ್ಪರ್ಧಿಸಲು ಚಿಂತಕರ ಚಾವಡಿ ಒತ್ತಡ ಹೇರುತ್ತಿದೆ.

3. ಅಲ್ಲದೆ, ಬಸವ ಕಲ್ಯಾಣ, ಬಾದಾಮಿಯಿಂದ ಸ್ಪರ್ಧಿಸಲು ಸಿದ್ದು ಮೇಲೆ ಅಲ್ಲಿನವರ ಒತ್ತಡವಿದೆ

4. ಸಿದ್ದು ಸ್ಪರ್ಧಿಸಿದರೆ ಸುತ್ತಲಿನ ಐದಾರು ಕ್ಷೇತ್ರಕ್ಕೆ ಅನುಕೂಲ ಎಂಬುದು ಅಲ್ಲಿನ ನಾಯಕರ ಲೆಕ್ಕಾಚಾರ

loader