ಬೆಂಗಳೂರು[ಸೆ.09]: ಡಿಕೆಶಿ ಬಂಧನದ ಹಿಂದೆ ಸಿದ್ದರಾಮಯ್ಯ ಕೈವಾಡವಿದೆ ಎಂದು ಆರೋಪಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಮಾಜಿ ಸಿಎಂ ಟ್ವಿಟರ್ ನ್ಲಲೇ ಛಾಟಿ ಬೀಸಿದ್ದಾರೆ. ರಾಜ್ಯ ಬಿಜೆಪಿಗೆ ಒಂದು ಕಾಮಿಡಿ ಪಾತ್ರದ ಅಗತ್ಯವಿತ್ತು. ಹೀಗಾಗಿ ನಾಟಕ ಮಂಡಳಿಗೆ ಕಟೀಲ್ ರನ್ನು ಅಧ್ಯಕ್ಷರಾಗಿ ಮಾಡಿದ್ದಾರೆ ಎನ್ನುವ ಮೂಲಕ ವ್ಯಂಗ್ಯವಾಡಿದ್ದಾರೆ.

ಡಿಕೆಶಿ ಬಂಧನ ಹಿಂದೆ ಸಿದ್ದು ಕೈವಾಡ ಶಂಕೆ: ಕಟೀಲ್ ಗಂಭೀರ ಆರೋಪ!

ಹೌದು ಭಾನುವಾರದಂದು ನಳಿನ್ ಕುಮಾರ್ ಮಾತನಾಡುತ್ತಾ ಡಿ.ಕೆ.ಶಿವಕುಮಾರ್‌ ವಿಚಾರದಲ್ಲಿ ನಮಗೆ ಸಿದ್ದರಾಮಯ್ಯ ಮೇಲೆ ಸಂಶಯವಿದೆ. ಅವರ ಮೇಲೆ ಕೇಸ್‌ ಹಾಕುವುದಕ್ಕೂ ಸಿದ್ದರಾಮಯ್ಯ ಅವರೇ ಕಾರಣ ಎಂಬ ಅನುಮಾನವಿದೆ ಎಂದಿದ್ದರು. ಇವರ ಆರೋಪದ ಬೆನ್ನಲ್ಲೇ ಟ್ವೀಟ್ ಮಾಡಿರುವ ಸಿದ್ದರಾಮಯ್ಯ 'ಒಬ್ಬ ಸಂಸದರಿಗೆ, ಅದರಲ್ಲೂ ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಿಗೆ ಇ.ಡಿ, ಐ.ಟಿ ಇಲಾಖೆ ಯಾರ ಅಧೀನದಲ್ಲಿ ಬರುತ್ತದೆ ಎಂಬ ಕನಿಷ್ಠ ಜ್ಞಾನವಾದರೂ ಬೇಡವೇ? ಇದುವರೆಗೂ ಬಿಜೆಪಿ ಬೇರೆ ಬೇರೆ ಕೋಮುಗಳ ನಡುವೆ ಬೆಂಕಿಹಚ್ಚಿ ತನ್ನ ಸ್ವಾರ್ಥ ಸಾಧಿಸಿಕೊಳ್ಳುತ್ತಿತ್ತು, ಈಗ ತನ್ನ ಎದುರಾಳಿ ನಾಯಕರ ನಡುವೆ ಹುಳಿ ಹಿಂಡುವ ಹೀನ ಕಾರ್ಯಕ್ಕೆ ಇಳಿದಿದೆ' ಎಂದು ಕಿಡಿ ಕಾರಿದ್ದಾರೆ.

ಅಲ್ಲದೇ 'ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ದಿನದಿಂದ ವರ್ಗಾವಣೆ ಮತ್ತು ದ್ವೇಷ ರಾಜಕಾರಣ ಬಿಟ್ಟು ಬೇರೇನು ಮಾಡುತ್ತಿಲ್ಲ. ಪ್ರವಾಹದಿಂದ ಎಲ್ಲವನ್ನೂ ಕಳೆದುಕೊಂಡವರ ಬದುಕು ಬೀದಿಗೆ ಬಂದಿದೆ, ಈಶ್ವರಪ್ಪನವರು ಈ ನಿರಾಶ್ರಿತರಿಗೆ ಹತ್ತು ಸಾವಿರ ರೂಪಾಯಿ ಕೊಟ್ಟಿರುವುದೇ ಹೆಚ್ಚು ಎನ್ನುತ್ತಾರೆ. ಇಂಥವರಿಗೆ ಜನರ ಬಗ್ಗೆ ಕಾಳಜಿ, ಕರುಣೆ ಏನಾದರೂ ಇದೆಯೇ?' ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಬಿಜೆಪಿಗೆ ಒಂದು ಕಾಮಿಡಿ ಪಾತ್ರದ ಅಗತ್ಯವಿತ್ತು

ಈ ಸ್ಪಷ್ಟನೆ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ 'ರಾಜ್ಯದ ನಾಟಕ‌ ಮಂಡಳಿಗೆ ಕಾಮಿಡಿ ಪಾತ್ರದ ಅಗತ್ಯ ಇತ್ತು, ಅದಕ್ಕಾಗಿ ನಳಿನ್ ಕುಮಾರ್ ಕಟೀಲ್ ಅವರನ್ನು ಪಕ್ಷಕ್ಕೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರನ್ನು ಅವರ ಪಕ್ಷದವರೂ ಸೇರಿದಂತೆ ಯಾರೂ ಸೀರಿಯಸ್ಸಾಗಿ ತಗೊಳ್ತಿಲ್ಲ, ಅದಕ್ಕಾಗಿ ಬಾಯಿಗೆ ಬಂದ ಹಾಗೆ ಮಾತಾಡ್ತಿದ್ದಾರೆ' ಎನ್ನುವ ಮೂಲಕ ಛಾಟಿ ಬೀಡಿದ್ದಾರೆ.

ಸದ್ಯ ಸಿದ್ದರಾಮಯ್ಯ ಈ ಸರಣಿ ಟ್ವೀಟ್ ಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುವುದನ್ನು ಕಾದು ನೋಡಬೇಕಷ್ಟೇ