ಬಾಗಲಕೋಟೆ[ಸೆ.09]: ಮಾಜಿ ಸಚಿವ ಡಿ.ಕೆ.ಶಿವಕುಮಾರ ಬಂಧನದ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈವಾಡವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ ಕಟೀಲ್‌ ಗಂಭೀರ ಆರೋಪ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್‌ ಬೆಳೆಯುತ್ತಾರೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ನಳಿನ್‌ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ.ಶಿವಕುಮಾರ್‌ ವಿಚಾರದಲ್ಲಿ ನಮಗೆ ಸಿದ್ದರಾಮಯ್ಯ ಮೇಲೆ ಸಂಶಯವಿದೆ. ಅವರ ಮೇಲೆ ಕೇಸ್‌ ಹಾಕುವುದಕ್ಕೂ ಸಿದ್ದರಾಮಯ್ಯ ಅವರೇ ಕಾರಣ ಎಂಬ ಅನುಮಾನವಿದೆ. ಅವರನ್ನು ಲೋಕಾಯುಕ್ತ ಅಧಿಕಾರಿಗಳಾಗಲಿ, ಕರ್ನಾಟಕ ಸರ್ಕಾರವಾಗಲಿ ಜೈಲಿಗೆæ ಹಾಕಿಲ್ಲ. 2017ರಲ್ಲಿ ಆದಾಯ ತೆರಿಗೆ ಇಲಾಖೆ ದಾಳಿಯಾದಾಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವೇ ಇತ್ತು. ಸಿದ್ದರಾಮಯ್ಯನವರೇ ಆಗ ಮುಖ್ಯಮಂತ್ರಿಯಾಗಿದ್ದರು. ಅವರು ಈ ದಾಳಿಯನ್ನು ತಡೆಯಬಹುದಿತ್ತು. ಯಾಕೆ ಹಾಗೆ ಮಾಡಲಿಲ್ಲ? ಎಂದು ಪ್ರಶ್ನಿಸಿದರು.

ಸಿಎಂ ಮತ್ತು ಕಟೀಲ್ ನಡುವೆ ಭಿನ್ನಾಭಿಪ್ರಾಯ..ಎಲ್ಲಾ ಪ್ಲ್ಯಾಂಟರ್‌ಗಳ ಕೆಲ್ಸ!

ಇದೇ ವೇಳೆ, ಬಿಜೆಪಿಯವರು ಯಾವುದೇ ರಾಜಕೀಯ ದ್ವೇಷ ಇಟ್ಟುಕೊಂಡಿಲ್ಲ. ದ್ವೇಷ ಸಾಧಿಸುವುದೇ ಇದ್ದರೆ ಚುನಾವಣೆಗೂ ಮುನ್ನವೇ ಡಿ.ಕೆ.ಶಿವಕುಮಾರ್‌ರನ್ನು ಜೈಲಿಗೆ ಹಾಕಿಸಬಹುದಿತ್ತು. ಕಾಂಗ್ರೆಸ್‌ನವರು ಈಗ ಮುಖ ಉಳಿಸಿಕೊಳ್ಳಲು ವಿನಾಕಾರಣ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ನಳಿನ್‌ ತಿಳಿಸಿದರು.

ಆದಾಯ ತೆರಿಗೆ ಇಲಾಖೆಯಾಗಲಿ, ಜಾರಿ ನಿರ್ದೇಶನಾಲಯವಾಗಲಿ ದಾಖಲೆಗಳನ್ನು ನೋಡಿಕೊಂಡೇ ಕೇಸ್‌ ದಾಖಲಿಸುತ್ತದೆ. ಕೇಸ್‌ ದಾಖಲಿಸಿದ ನಂತರ ಪ್ರಕರಣದ ಗಂಭೀರತೆ ಅರಿತು ಆರೋಪಿಯನ್ನು ಬಂಧನ ಮಾಡಲಾಗುತ್ತದೆ. ಡಿಕೆಶಿ ಪ್ರಕರಣದಲ್ಲೂ ಇದೇ ಆಗಿದೆ ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿ ರಾಜಕೀಯ ದ್ವೇಷ: ಕಾಂಗ್ರೆಸ್‌ ಆರೋಪಕ್ಕೆ ಕಟೀಲ್‌ ತಿರುಗೇಟು