ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಹಲವು ಶಾಸಕರು  ವಿವಿಧ ದೇಶಗಳ ಪ್ರವಾಸಕ್ಕೆ ಮುಂದಾಗಿರುವುದು ರಾಜಕೀಯ ವಲಯದಲ್ಲಿ ಹಲವು ವದಂತಿಗಳಿಗೆ ಜನ್ಮ ನೀಡಿದೆ.

ಬೆಂಗಳೂರು : ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಹಲವು ಶಾಸಕರು ಹೆಚ್ಚು ಕಡಿಮೆ ಒಂದೇ ಅವಧಿಯಲ್ಲಿ ವಿವಿಧ ದೇಶಗಳ ಪ್ರವಾಸಕ್ಕೆ ಮುಂದಾಗಿರುವುದು ರಾಜಕೀಯ ವಲಯದಲ್ಲಿ ಹಲವು ವದಂತಿಗಳಿಗೆ ಜನ್ಮ ನೀಡಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್‌.ವಿ. ದೇಶಪಾಂಡೆ ಹಾಗೂ ವಿಧಾನಪರಿಷತ್‌ ಸದಸ್ಯ ಗೋವಿಂದರಾಜು ಹಾಗೂ ತಮ್ಮ ಕುಟುಂಬದ ಸಮೇತ ಸೆ. 3ರಿಂದ ಯುರೋಪ್‌ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸದಲ್ಲಿ ಸಚಿವ ಕೆ.ಜೆ. ಜಾರ್ಜ್ ಕೂಡ ಅವರನ್ನು ಸೇರಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಜ್‌ರ್‍ ಈಗಾಗಲೇ ವಿದೇಶದಲ್ಲಿದ್ದಾರೆ.

ಇನ್ನು ಸಿದ್ದರಾಮಯ್ಯ ಅವರೊಂದಿಗೆ ಗುರುತಿಸಿಕೊಂಡಿರುವ ಶಾಸಕ ಡಾ. ಸುಧಾಕರ್‌ ಅವರು ಈಗಾಗಲೇ ಜರ್ಮನಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. 

‘ಅಕ್ಕ’ಗೆ ದೊಡ್ಡ ದಂಡು: ಇನ್ನು ಅಮೆರಿಕದಲ್ಲಿ ನಡೆಯಲಿರುವ ಅಕ್ಕ ಸಮ್ಮೇಳನಕ್ಕೆ ಕಾಂಗ್ರೆಸ್‌ನ ಶಾಸಕರ ದೊಡ್ಡ ದಂಡೇ ಹೊರಡಲಿದೆ ಎನ್ನಲಾಗುತ್ತಿದೆ. 

ಈವರೆಗೆ ಶಾಸಕರಾದ ಎಸ್‌.ಟಿ. ಸೋಮಶೇಖರ್‌, ಮುನಿರತ್ನ, ಬೈರತಿ ಬಸವರಾಜು ಹಾಗೂ ಬೈರತಿ ಸುರೇಶ್‌ ಅವರು ಅಮೆರಿಕಕ್ಕೆ ತೆರಳಲಿರುವುದು ಖಚಿತಗೊಂಡಿದೆ. ಇವರಲ್ಲದೆ ಸಚಿವ ಜಮೀರ್‌ ಅಹಮದ್‌ ಸೇರಿದಂತೆ ಇನ್ನು ಕೆಲ ಶಾಸಕರು ಅಮೆರಿಕ ಪ್ರವಾಸಕ್ಕೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಖಚಿತಗೊಂಡಿಲ್ಲ.

ಸಿದ್ದರಾಮಯ್ಯ ಅವರು ವಿದೇಶಕ್ಕೆ ತೆರಳಲಿರುವ ಈ ಹಂತದಲ್ಲೇ ಹಲವು ಶಾಸಕರು ವಿವಿಧ ದೇಶಗಳಿಗೆ ತೆರಳಲು ಮುಂದಾಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಲಾಗುತ್ತಿದ್ದು, ಇದು ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆ ತರುವ ಯತ್ನ ಎಂದೇ ಬಿಂಬಿಸಲಾಗುತ್ತಿದೆ.

ಆದರೆ, ‘ಕನ್ನಡಪ್ರಭ’ದೊಂದಿಗೆ ಮಾನತಾಡಿದ ವಿದೇಶಕ್ಕೆ ತೆರಳಲಿರುವ ಶಾಸಕರೊಬ್ಬರು, ಪೂರ್ವ ನಿರ್ಧರಿತ ಪ್ರವಾಸವಿದು. ನಾವು ವಿದೇಶಕ್ಕೆ ತೆರಳಲು ಸಿದ್ದತೆ ಮಾಡಿಕೊಂಡಾಗ ಸಿದ್ದರಾಮಯ್ಯ ಅವರ ವಿದೇಶ ಯಾತ್ರೆ ಯೋಜನೆಯೇ ರೂಪುಗೊಂಡಿರಲಿಲ್ಲ. ಇಷ್ಟಕ್ಕೂ ಸಿದ್ದರಾಮಯ್ಯ ಅವರು ಕುಟುಂಬ ಸಮೇತ ವಿದೇಶಕ್ಕೆ ತೆರಳುತ್ತಿದ್ದಾರೆ. ವಿನಾಕಾರಣ ರಾಜಕೀಯ ಬಣ್ಣ ಕಟ್ಟಲಾಗುತ್ತಿದೆ ಎಂದು ತಿಳಿಸಿದರು.

ಚೆಲುವರಾಯಸ್ವಾಮಿ, ಬಾಲಕೃಷ್ಣರಿಂದ ಸಿದ್ದರಾಮಯ್ಯ ಭೇಟಿ

 ಮಾಜಿ ಶಾಸಕರಾದ ಎನ್‌. ಚೆಲುವರಾಯಸ್ವಾಮಿ ಹಾಗೂ ಮಾಗಡಿ ಬಾಲಕೃಷ್ಣ ಅವರು ಸೋಮವಾರ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಂಡ್ಯ ಜಿಲ್ಲೆ ಹಾಗೂ ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬುದು ಸೇರಿದಂತೆ ಹಲವು ವಿಷಯ ಚರ್ಚೆ ನಡೆಸಿದರು.

ಜೆಡಿಎಸ್‌ ತೊರೆದು ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಸೋತಿದ್ದ ಶಾಸಕರು ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ನಾಗಮಂಗಲ ಹಾಗೂ ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಚರ್ಚೆ ನಡೆಸಿದರು ಎನ್ನಲಾಗಿದೆ. ಇದೇ ವೇಳೆ ಲೋಕಸಭೆ ಚುನಾವಣೆ ಬಗ್ಗೆಯೂ ಮಾತುಕತೆ ನಡೆಸಿದರು ಎಂದು ತಿಳಿದುಬಂದಿದೆ.

ದಬ್ಬಾಳಿಕೆ ಸತ್ಯ- ಚೆಲುವರಾಯಸ್ವಾಮಿ: ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಮಾಜಿ ಶಾಸಕ ಎನ್‌. ಚೆಲುವರಾಯಸ್ವಾಮಿ, ಮಂಡ್ಯದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಜೆಡಿಎಸ್‌ನವರು ಟಾರ್ಗೆಟ್‌ ಮಾಡಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇದು ಎಲ್ಲ ನಾಯಕರಿಗೂ ಗೊತ್ತಿರುವ ವಿಚಾರ. ಆದರೂ ನಾವು ಪಕ್ಷ ಹಾಗೂ ಸರ್ಕಾರಕ್ಕಾಗಿ ಸಹಿಸಿಕೊಂಡು ಇರಬೇಕಾಗಿದೆ. ಕಾಲಚಕ್ರ ಉರುಳುತ್ತದೆ ಎಂಬುದನ್ನು ಪ್ರತಿಯೊಬ್ಬರೂ ನೆನಪಿಡಬೇಕು ಎಂದು ಎಚ್ಚರಿಕೆ ನೀಡಿದರು.

ನಾಲ್ಕು ಬಾರಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದೇನೆ. ಈ ಬಾರಿ ಸೋತಿರಬಹುದು ಆದರೆ, ಗೆದ್ದವರು ಸೋಲುತ್ತಾರೆ ಸೋತವರು ಗೆಲ್ಲುತ್ತಾರೆ ಎಂಬ ಮಾತು ಸತ್ಯ. ನನಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಯಕೆ ಇಲ್ಲ. ಆದರೆ, ಮುಂದಿನ ದಿನಗಳಲ್ಲಿ ಕಾಲ ಚಕ್ರ ಉರುಳುತ್ತದೆ ಇದೇ ಪರಿಸ್ಥಿತಿ ಇರುವುದಿಲ್ಲ ಎಂದು ಹೇಳಿದರು.

ಮಾಗಡಿಯ ಮಾಜಿ ಶಾಸಕ ಬಾಲಕೃಷ್ಣ ಮಾತನಾಡಿ, ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದೇವೆ. ಜೆಡಿಎಸ್‌ ಅಭ್ಯರ್ಥಿ ಗೆದ್ದಿದ್ದಾರೆ. ಮುಂದೆ ನಾವು ಗೆಲ್ಲುತ್ತೇವೆ. ಅವರು ಸೋಲುತ್ತಾರೆ ನೋಡಿ ಎಂದು ಸವಾಲು ಎಸೆದರು.

 ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಚೆಲುವರಾಯಸ್ವಾಮಿ, ಅವರು ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡು ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂಟಿ ಎಂದು ಭಾವಿಸಬಾರದು. ಆ ರೀತಿ ಭಾವಿಸಿದರೆ ಅವರಷ್ಟುದಡ್ಡರು ಮತ್ತೊಬ್ಬರಿಲ್ಲ. ಸಿದ್ದರಾಮಯ್ಯ ಅವರೊಂದಿಗೆ ಶಾಸಕರು, ಮಾಜಿ ಶಾಸಕರು, ಸಚಿವರು, ಸಂಸದರು ಇದ್ದಾರೆ. ಅವರು ನಮ್ಮ ನಾಯಕ ಎಂದರು.