ಚಿಕ್ಕಮಗಳೂರು[ಅ.02]: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯದ ಹಣಕಾಸಿನ ಪರಿಸ್ಥಿತಿ ಹದಗೆಡಿಸಿ ಹೋಗಿದ್ದಾರೆ. ಅದನ್ನು ಮೇಲಕ್ಕೆತ್ತಿ ಕೆಲಸ ಮಾಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಕಷ್ಟವಾಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಣಕಾಸಿನ ಸ್ಥಿತಿ ಇಂದು ಪಾತಾಳಕ್ಕೆ ಹೋಗಲು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರೇ ಕಾರಣ. ಇಂತಹ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟದ ಕೆಲಸವಾಗಿದೆ. ಆದರೂ, ಯಡಿಯೂರಪ್ಪ ಅವರು ರೈತರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ತಂತಿ ಮೇಲಿನ ನಡಿಗೆ: ಸಿಎಂ ಹೇಳಿಕೆಗೆ ಸಂಸದೆ ಸಮರ್ಥನೆ

ನೆರೆಯಿಂದ ಆಗಿರುವ ನಷ್ಟದ ಬಗ್ಗೆ ಅಂದಾಜು ಮಾಡಿ ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಇನ್ನು 10 ದಿನಗಳೊಳಗೆ ಕೇಂದ್ರದಿಂದ ಪರಿಹಾರಧನ ಬರಲಿದೆ. ಕೇಂದ್ರದ ಸಚಿವರಾದ ನಿರ್ಮಲಾ ಸೀತಾರಾಮನ್‌ ಹಾಗೂ ಅಮಿತ್‌ ಶಾ ಅವರು ಆಗಮಿಸಿ ಇಲ್ಲಿನ ಪರಿಸ್ಥಿತಿಯನ್ನು ನೋಡಿ ಹೋಗಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯಲ್ಲಿ ಗುಂಪುಗಾರಿಕೆ, ಬಣ ಇಲ್ಲ. ಸರ್ಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ. ಪಕ್ಷ ತನ್ನದೇ ಆದ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಿದ್ದಂತೆ ಬರಗಾಲ ಇತ್ತು. ಕೆಲವೇ ದಿನಗಳಲ್ಲಿ ಅತಿವೃಷ್ಟಿಬಂದಿತು. ಒಂದು ದಿನವೂ ಸುಮ್ಮನೆ ಕುಳಿತುಕೊಳ್ಳದೇ ಸಿಎಂ ಅವರು ರಾಜ್ಯವನ್ನು ಸುತ್ತಿ ನೆರೆಪೀಡಿತ ಪ್ರದೇಶದ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಕಾಶ್ಮೀರಿ ಮಕ್ಕಳು ಶಾಲೆಗೆ ಹೋಗಲಿ ಎಂದ ಮಲಾಲ: ಶೋಭಾ ಸವಾಲಿಗೆ ವಿಲವಿಲ!