ರಾಜ್ಯದ ಮುಖ್ಯಮಂತ್ರಿಗಳಿಗೆ ಅದ್ಯಾಕೋ ಏನೋ ಕಾಗೆ ಕಾಟ ತಪ್ಪುತ್ತಿಲ್ಲ. ತಾನು ನಾಸ್ತಿಕನಲ್ಲ ಎಂದು ಹೇಳುವ ಸಿಎಂ ಇದನ್ನ ಯಾವ ರೀತಿ ಪರಿಗಣಿಸ್ತಾರೆ ಅನ್ನೋದು ಸದ್ಯಕ್ಕಿರೋ ಕುತೂಹಲ.
ಬೆಂಗಳೂರು(ಜ. 19): ರಾಜ್ಯದ ಮುಖ್ಯಮಂತ್ರಿಗಳಿಗೆ ಅದ್ಯಾಕೋ ಕಾಗೆ ಕಾಟ ತಪ್ಪುತ್ತಿಲ್ಲ.. ಬೆಂಗಳೂರಿನಲ್ಲಿ ಕಾರು ಮೇಲೆ ಕೂತು ಸುದ್ದಿ ಮಾಡಿದ್ದ ಕಾಗೆ ಸಿದ್ದರಾಮಯ್ಯ ಕೇರಳಕ್ಕೆ ಹೋದರೂ ಬಿಡಲಿಲ್ಲ.
ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮರಣಾರ್ಥ ಗಿಳಿವಿಂಡು ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಿದ್ದರು. ಶ್ವೇತವಸ್ತ್ರಧಾರಿ ಸಿಎಂ ಸಿದ್ದರಾಮಯ್ಯ ಅವರ ಎಡ ತೊಡೆ ಮೇಲೆ ಕಾಗೆ ಹಿಕ್ಕೆ ಹಾಕಿತು. ಸಿಎಂ ಬಲಗಡೆ ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ, ಎಡಗಡೆ ಸಚಿವ ರಮಾನಾಥ ರೈ ಕೂತಿದ್ದರು.. ಆದ್ರೆ ಕಾಗೆ ಹಿಕ್ಕೆ ಹಾಕಿದ್ದು ಮಾತ್ರ ಸಿಎಂ ಮೇಲೆಯೇ. ಇದು ಶನಿಕಾಟ ಅನ್ನೋದು ಜ್ಯೋತಿಷಿಗಳ ಅಭಿಪ್ರಾಯ.
ಸಿಎಂ ಕಾರ್ ಮೇಲೆ ಕಾಗೆ:
ಕಳೆದ ವರ್ಷ ಜೂನ್ 2ರಂದು ಸಿಎಂ ಅಧಿಕೃತ ನಿವಾಸ ಕೃಷ್ಣಾದಲ್ಲಿ ಕಾರಿನ ಮೇಲೆಯೇ ಕಾಗೆಯೊಂದು ಕೂತಿತ್ತು. ಎಷ್ಟೇ ಬೆದರಿಸಿದರೂ ಕಾಗೆ ಹಾರಿಹೋಗಲಿಲ್ಲ. ಕಾರನ್ನು ಹಿಂದಕ್ಕೆ ಮುಂದಕ್ಕೆ ಚಲಿಸಿದರೂ ಕಾಗೆ ಕದಲಲಿಲ್ಲ. ಕೊನೆಗೆ ಸಿಬ್ಬಂದಿ ಕಾಗೆ ಮರಿಯನ್ನ ಕೈಯಲ್ಲಿ ಹಿಡಿದುಕೊಂಡು ಬೇರೆಡೆ ಬಿಟ್ಟಿದ್ದರು. ಆಗಲೂ ಜ್ಯೋತಿಷಿಗಳು ಸಿದ್ದರಾಮಯ್ಯಗೆ ಇದು ಎಚ್ಚರಿಕೆಯ ಸಂದೇಶ ಎಂಬಂತೆ ಹೇಳಿದರು. ಕಾಕತಾಳೀಯವೆಂಬಂತೆ, ಸಿದ್ದರಾಮಯ್ಯನವರ ಪುತ್ರ ರಾಕೇಶ್ ಹಾಗೂ ಅವರ ಆಪ್ತ ಮಹದೇವ್ ಪ್ರಸಾದ್ ಸಾವನ್ನಪಿದ್ದರು. ಬಹಳ ಗಟ್ಟಿ ಮನಸ್ಸಿನ ಸಿದ್ದರಾಮಯ್ಯ, ಅವರಿಬ್ಬರು ಸತ್ತಾಗ ಕಣ್ಣೀರು ಹಾಕಿದ್ದರು.
ಒಟ್ಟಿನಲ್ಲಿ, ರಾಜ್ಯದ ಮುಖ್ಯಮಂತ್ರಿಗಳಿಗೆ ಅದ್ಯಾಕೋ ಏನೋ ಕಾಗೆ ಕಾಟ ತಪ್ಪುತ್ತಿಲ್ಲ. ತಾನು ನಾಸ್ತಿಕನಲ್ಲ ಎಂದು ಹೇಳುವ ಸಿಎಂ ಇದನ್ನ ಯಾವ ರೀತಿ ಪರಿಗಣಿಸ್ತಾರೆ ಅನ್ನೋದು ಸದ್ಯಕ್ಕಿರೋ ಕುತೂಹಲ.
- ಬ್ಯೂರೋ ರಿಪೋರ್ಟ್, ಸುವರ್ಣ ನ್ಯೂಸ್
