* ಬಿಜೆಪಿ ಆಯ್ಕೆಯ ರಾಷ್ಟ್ರಪತಿಗಳಿಂದ ಟಿಪ್ಪು ಸುಲ್ತಾನ್ ಹೊಗಳಿಕೆ* ಬಿಜೆಪಿ ಕೈಕಟ್ಟಲು ಕಾಂಗ್ರೆಸ ಸರಕಾರದಿಂದ ರಾಷ್ಟ್ರಪತಿಗಳ ಬಳಕೆ* ವಿಧಾನಸೌಧ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ರಾಜಕೀಯದ ರಾಡಿ

ಬೆಂಗಳೂರು(ಅ. 25): ವಿಧಾನಸೌಧದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಟಿಪ್ಪು ಸುಲ್ತಾನ್'ರನ್ನು ಹೊಗಳಿದ್ದಾರೆ. ಭಾಷಣ ಕೇಳಿಸಿಕೊಳ್ಳುತ್ತಿದ್ದ ಬಿಜೆಪಿ ಮುಖಂಡರು ಪೆಚ್ಚುಮೋರೆ ಹಾಕಿಕೊಂಡಿದ್ದು ಕಂಡುಬಂದಿತು. ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವಿರುದ್ಧ ದೊಡ್ಡ ಹೋರಾಟ ಮಾಡಲು ಅಣಿಯಾಗುತ್ತಿರುವ ಬಿಜೆಪಿಗೆ ಇದು ಮುಜುಗರವಾಗುವ ಸಂದರ್ಭವಾಗಿದೆ. ಬಿಜೆಪಿಯ ಕೈಕಟ್ಟಿಹಾಕಲು ಮತ್ತು ಬಾಯಿ ಮುಚ್ಚಿಸಲು ರಾಜ್ಯ ಸರಕಾರ ರಾಷ್ಟ್ರಪತಿಗಳನ್ನೇ ಬಳಸಿಕೊಂಡಿದೆ. ಬಿಜೆಪಿಯೇ ಆಯ್ಕೆ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಬಾಯಿಂದಲೇ ಟಿಪ್ಪುವನ್ನು ಹೊಗಳಿಸಿ ಸರಕಾರವು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಿದೆ.

ರಾಜ್ಯ ಸರಕಾರವು ವಿಧಾನಸೌಧದ ವಜ್ರಮಹೋತ್ಸವದಂಥ ಕಾರ್ಯಕ್ರಮದಲ್ಲೂ ರಾಜಕೀಯ ಮಾಡುತ್ತಿದೆ ಎಂಬ ಟೀಕೆ ಕೇಳಿಬರುತ್ತಿದೆ. ಸರಕಾರವು ಭಾಷಣ ಸಿದ್ಧಪಡಿಸಿ ರಾಷ್ಟ್ರಪತಿಗಳ ಬಾಯಿಂದ ಟಿಪ್ಪುವನ್ನು ಹೊಗಳಿಸುವಂಥ ಕೀಳು ಮಟ್ಟಕ್ಕೆ ಇಳಿದಿದೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಸರಕಾರ ಏನೇ ಮಾಡಿದರೂ ಟಿಪ್ಪು ಸುಲ್ತಾನ್ ಜಯಂತಿ ವಿರುದ್ಧ ಬಿಜೆಪಿ ಹೋರಾಟ ಕೈಬಿಡುವುದಿಲ್ಲ ಎಂದು ಈ ನಾಯಕರು ಹೇಳಿದ್ದಾರೆ.

ಟಿಪ್ಪು ಬಗ್ಗೆ ರಾಷ್ಟ್ರಪತಿ ಹೇಳಿದ್ದೇನು?
ಟಿಪ್ಪು ಒಬ್ಬ ಹೀರೋ. ಕರ್ನಾಟಕ ರಾಜ್ಯದ ಅಭಿವೃದ್ಧಿಯಲ್ಲಿ ಟಿಪ್ಪು ಪಾತ್ರ ಮಹತ್ವದ್ದೆಂದು ರಾಷ್ಟ್ರಪತಿ ಕೋವಿಂದ್ ಹೇಳಿದರು. "ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಟಿಪ್ಪು ಸುಲ್ತಾನ್ ಮುಂಚೂಣಿಯಲ್ಲಿದ್ದರು. ರಾಜ್ಯವನ್ನು ಅವರು ಅಭಿವೃದ್ಧಿಯ ಪಥದತ್ತ ಕೊಂಡೊಯ್ದಿದ್ದರು. ಯುದ್ಧದಲ್ಲಿ ಟಿಪ್ಪು ಸುಲ್ತಾನ್ ರಾಕೆಟ್'ಗಳನ್ನು ಬಳಕೆ ಮಾಡಿದ್ದರು. ಟಿಪ್ಪುವಿನ ರಾಕೆಟ್ ತಂತ್ರಜ್ಞಾನವನ್ನು ಯೂರೋಪಿಯನ್ನರು ಅಳವಡಿಸಿಕೊಂಡರು" ಎಂದು ರಾಮನಾಥ್ ಕೋವಿಂದ್ ತಮ್ಮ ಭಾಷಣದಲ್ಲಿ ಟಿಪ್ಪುವನ್ನು ಕೊಂಡಾಡಿದರು.

ರಾಷ್ಟ್ರಪತಿಯವರು ಟಿಪ್ಪುವನ್ನು ಹೊಗಳುತ್ತಿದ್ದಂತೆಯೇ ಸಭೆಯಲ್ಲಿದ್ದ ಕಾಂಗ್ರೆಸ್ಸಿಗರು ಮೇಜು ಕುಟ್ಟಿ ಸಂತೋಷ ವ್ಯಕ್ತಪಡಿಸಿದರು. ಬಿಜೆಪಿ ಸದಸ್ಯರು ಪೆಚ್ಚುಮೋರೆ ಹಾಕಿ ಕೂರಬೇಕಾಯಿತು.

ನ. 10ಕ್ಕೆ ರಾಜ್ಯ ಸರಕಾರವು ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ. ಟಿಪ್ಪು ಸುಲ್ತಾನ್ ಹಿಂದೂ ವಿರೋಧಿಯಾಗಿದ್ದ; ಬಲವಂತವಾಗಿ ಮತಾಂತರ ಮಾಡಿದ್ದ; ಹಿಂದೂ ದೇಗುಲಗಳನ್ನ ಧ್ವಂಸ ಮಾಡಿದ್ದ ಎಂಬುದು ಬಲಪಂಥೀಯರ ಆರೋಪವಾಗಿದ್ದು, ಆ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತವಾಗುತ್ತಿದೆ.