ಇದುವರೆಗೂ ಸುಮಾರು 1 ಲಕ್ಷಕ್ಕೂ ಹೆಚ್ಚು ಬಾರಿ ಶಿವಪೂಜೆ ಮಾಡಿರುವ ಸಿದ್ಧಗಂಗಾ ಶ್ರೀಗಳಾದ ಡಾ. ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ಗಿನ್ನೆಸ್ ಬುಕ್ ಆಫ್ ರೆಕಾರ್ಡ್‌ಗೆ ಸೇರಿಸಲು ಸಿದ್ಧತೆ ನಡೆಸಲಾಗಿದೆ.
ತುಮಕೂರು : ಇದುವರೆಗೂ ಸುಮಾರು 1 ಲಕ್ಷಕ್ಕೂ ಹೆಚ್ಚು ಬಾರಿ ಶಿವಪೂಜೆ ಮಾಡಿರುವ ಸಿದ್ಧಗಂಗಾ ಶ್ರೀಗಳಾದ ಡಾ. ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ಗಿನ್ನೆಸ್ ಬುಕ್ ಆಫ್ ರೆಕಾರ್ಡ್‌ಗೆ ಸೇರಿಸಲು ಸಿದ್ಧತೆ ನಡೆಸಲಾಗಿದೆ.
ಡಾ. ಶಿವಕುಮಾರ ಸ್ವಾಮೀಜಿ ಅವರು ಶ್ರೀಮಠದ ಚುಕ್ಕಾಣಿ ಹಿಡಿದು 89 ವರ್ಷಗಳು ಕಳೆದಿದೆ. ಇದುವರೆಗೂ ಪ್ರತಿ ದಿನ 3 ಬಾರಿಯಂತೆ ಈ 89 ವರ್ಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಬಾರಿ ಶಿವಪೂಜೆ ಮಾಡಿರುವುದು ದಾಖಲೆಯೇ ಸರಿ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಗಳ ಹೆಸರನ್ನು ಗಿನ್ನೆಸ್ ಬುಕ್ ಆಫ್ ರೆಕಾರ್ಡ್‌ಗೆ ಸಲ್ಲಿಸಲು ಶ್ರೀಮಠದ ನಿವೃತ್ತ ಪ್ರಾಂಶುಪಾಲ ಚಂದ್ರಶೇಖರಯ್ಯ ಅವರು ಸಿದ್ಧತೆ ನಡೆಸಿದ್ದಾರೆ.
ಈಗಾಗಲೇ ಈ ಸಂಬಂಧ ಕನ್ನಡದಲ್ಲಿ ಮಾಹಿತಿ ಕಲೆ ಹಾಕಿದ್ದು ಅದನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡುವ ಕೆಲಸ ಬಾಕಿ ಇದೆ. ನಿತ್ಯ ಮುಂಜಾನೆ 3 ಗಂಟೆಗೆ ಏಳುವ ಶ್ರೀಗಳು, 1.90 ಲಕ್ಷ ಗಂಟೆಗಳ ಕಾಲ ಧ್ಯಾನ ಮತ್ತು ಪೂಜೆ ಮಾಡಿದ್ದಾರೆ. ಅಲ್ಲದೆ ಪ್ರತಿ ದಿನ 14 ಗಂಟೆಯಂತೆ ಇಲ್ಲಿಯವರೆಗೆ 4.50 ಲಕ್ಷ ಗಂಟೆಗಳ ಕಾಲ ಸಮಾಜ ಸೇವೆ ಮಾಡಿರುವುದು ಕೂಡ ದಾಖಲೆಯೇ ಸರಿ ಎಂದು ಚಂದ್ರಶೇಖರಯ್ಯ ಹೇಳಿದ್ದಾರೆ. 1935ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡ ಡಾ. ಶಿವಕುಮಾರ ಸ್ವಾಮೀಜಿ ಅವರು 2.68 ಲಕ್ಷ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಕಾರಣಕರ್ತರಾಗಿದ್ದಾರೆ.
ಕನ್ನಡಪ್ರಭ ದೊಂದಿಗೆ ಮಾತನಾಡಿದ ಚಂದ್ರಶೇಖರಯ್ಯ, ಈಗಾಗಲೇ ಶ್ರೀಗಳ ದಿನಚರಿಗಳನ್ನೊಳಗೊಂಡ ಮಾಹಿತಿಯನ್ನು ಬರೆದು ಇಂಗ್ಲಿಷ್‌ಗೆ ತರ್ಜುಮೆ ಮಾಡಲು ಕೊಟ್ಟಿದ್ದೇನೆ. ಆದರೆ, ಸಣ್ಣ ಅಪಘಾತದಿಂದ ನಾನು ಚೇತರಿಸಿಕೊಳ್ಳುತ್ತಿದ್ದು, ಬಳಿಕ ಗಿನ್ನೆಸ್ ಬುಕ್ ಆಫ್ ರೆಕಾರ್ಡ್‌ಗೆ ಇದನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
