ನವದೆಹಲಿ[ಆ.21]: ಫೇಸ್‌ಬುಕ್‌, ಟ್ವಿಟರ್‌, ವಾಟ್ಸಪ್‌ ಸೇರಿದಂತೆ ಇನ್ನಿತರ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ತಮ್ಮ ಪ್ರೊಫೈಲ್‌ಗಳಿಗೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಬೇಕೆಂಬ ವಿಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸಬೇಕೆಂಬ ಫೇಸ್‌ಬುಕ್‌ ಕೋರಿಕೆಗೆ ಸರ್ವೋಚ್ಚ ನ್ಯಾಯಾಲಯ ಸಮ್ಮತಿ ನೀಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ವ್ಯಾಜ್ಯಗಳು ಈಗಾಗಲೇ ಮದ್ರಾಸ್‌, ಬಾಂಬೆ ಹಾಗೂ ಮಧ್ಯಪ್ರದೇಶದ ಹೈಕೋರ್ಟ್‌ಗಳಿಂದ ಸುಪ್ರೀಂ ಕೋರ್ಟ್‌ಗೆ ವರ್ಗಾವಣೆಯಾಗಲಿವೆ. ಅಲ್ಲದೆ, ಈ ಸಂಬಂಧ ಕೇಂದ್ರ ಸರ್ಕಾರ, ಗೂಗಲ್‌, ಟ್ವಿಟರ್‌, ಯೂಟ್ಯೂಬ್‌ ಹಾಗೂ ಇತರ ಸಾಮಾಜಿಕ ಮಾಧ್ಯಮಗಳಿಗೆ ನೋಟಿಸ್‌ ನೀಡಿರುವ ಸುಪ್ರೀಂ ಕೋರ್ಟ್‌, ಸೆ.23ರ ಒಳಗೆ ಉತ್ತರಿಸುವಂತೆ ಸೂಚನೆ ನೀಡಿದೆ.

ನಕಲಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆಗೆದು ಅದರಲ್ಲಿ ದೇಶ ವಿರೋಧಿ, ಸಮಾಜ ವಿರೋಧಿ ಕೃತ್ಯಗಳಿಗೆ ಪ್ರಚೋದನೆ ನೀಡುವ ಕೆಲಸ ಮಾಡಲಾಗುತ್ತಿದೆ. ಇದನ್ನು ತಡೆಯಲು ಸಾಮಾಜಿಕ ಜಾಲತಾಣಗಳ ಖಾತೆಗೆ ಆಧಾರ್‌ ಕಡ್ಡಾಯ ಮಾಡಬೇಕೆಂದು ವಿವಿಧ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.