ಕ್ಯಾಮಿಯೋ ಕ್ಲಬ್'ನಲ್ಲಿ ಈ ಶೂಟೌಟ್ ಯಾರು ನಡೆಸಿದರೆಂಬ ಬಗ್ಗೆ ಪೊಲೀಸರಿಗೆ ಇನ್ನೂ ಸುಳಿವು ಸಿಕ್ಕಿಲ್ಲ.

ನವದೆಹಲಿ(ಮಾ. 26): ಅಮೆರಿಕದಲ್ಲಿ ಮತ್ತೊಂದು ಶೂಟೌಟ್ ಪ್ರಕರಣ ನಡೆದಿದೆ. ಓಹಿಯೋದ ಸಿನ್ಸಿನಾಟಿಯ ನೈಟ್'ಕ್ಲಬ್'ವೊಂದರಲ್ಲಿ ಭಾನುವಾರ ಮುಂಜಾವಿನ ವೇಳೆ ಈ ಘಟನೆ ಸಂಭವಿಸಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಕ್ಯಾಮಿಯೋ ಕ್ಲಬ್'ನಲ್ಲಿ ಈ ಶೂಟೌಟ್ ಯಾರು ನಡೆಸಿದರೆಂಬ ಬಗ್ಗೆ ಪೊಲೀಸರಿಗೆ ಇನ್ನೂ ಸುಳಿವು ಸಿಕ್ಕಿಲ್ಲ. ಕ್ಲಬ್'ನಲ್ಲಿ ಗುಂಡಿನ ಸದ್ದು ಕೇಳಿಬಂದಿದೆ ಎಂಬ ಮಾಹಿತಿ ಸಿಕ್ಕಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದರಾದರೂ ಜನರು ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದರೆನ್ನಲಾಗಿದೆ. ಪೊಲೀಸರಿಗೆ ಸಿಕ್ಕ ಕೆಲ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ ಇಬ್ಬರು ವ್ಯಕ್ತಿಗಳಿಂದ ಶೂಟೌಟ್ ನಡೆದಿದೆ. ಆದರೆ, ಯಾವ ಕಾರಣಕ್ಕೆ ಅವರು ಗುಂಡಿನ ದಾಳಿ ನಡೆಸಿದರೆಂಬುದು ಗೊತ್ತಾಗಿಲ್ಲ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲು ಸರಿಯಾದ ವ್ಯವಸ್ಥೆ ಇಲ್ಲದಿದ್ದರಿಂದ ಅನೇಕ ಗಾಯಾಳುಗಳು ತಾವಾಗೇ ಆಸ್ಪತ್ರೆಗೆ ಹೋಗಿ ದಾಖಲಾದರಂತೆ.

ಕ್ಯಾಮಿಯೋ ಕ್ಲಬ್'ನಲ್ಲಿ ಈ ಹಿಂದೆಯೂ ಅನೇಕ ಬಾರಿ ಜಗಳಗಳು ಮತ್ತು ದುರ್ಘಟನೆಗಳು ನಡೆದಿದ್ದವಾದರೂ ಈ ಪ್ರಮಾಣದಲ್ಲಿ ಹಿಂಸಾಚಾರ ಸಂಭವಿಸಿರಲಿಲ್ಲವೆನ್ನಲಾಗಿದೆ.

ಕಳೆದ ವರ್ಷದಂದು ಫ್ಲೋರಿಡಾ ರಾಜ್ಯದ ಓರ್ಲಾಂಡೋದಲ್ಲಿನ ನೈಟ್'ಕ್ಲಬ್'ನಲ್ಲಿ ಉಗ್ರಗಾಮಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ಬರೋಬ್ಬರಿ 49 ಮಂದಿ ಬಲಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.