ಪ್ರಕರಣ ಸಂಬಂಧ ಆರೋಪಿ ಪತ್ನಿ ಹಂಸವೇಣಿ (38)ಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂರ್ಯ ಸಿಟಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಬೆಂಗಳೂರು/ಆನೇಕಲ್(ಮೇ.05): ಕುಡಿದ ಅಮಲಿನಲ್ಲಿ ಆರಂಭವಾದ ಜಗಳ ವಿಕೋಪಕ್ಕೆ ಹೋಗಿ ಪತ್ನಿಯೇ ತನ್ನ ಪತಿಯ ಮೇಲೆ ಗುಂಡು ಹಾರಿಸಿರುವ ಘಟನೆ ಹೊಸೂರು ಮುಖ್ಯ ರಸ್ತೆಯಲ್ಲಿರುವ ಉಸ್ಗುರು ಗೇಟ್ ಬಳಿ ಶುಕ್ರವಾರ ಸಂಜೆ ನಡೆದಿದೆ.

ಪತ್ನಿ ಹಾರಿಸಿದ ಗುಂಡೇಟಿನಿಂದ ಗಾಯಗೊಂಡಿರುವ ಎಚ್‌ಎಸ್‌ಆರ್ ಲೇಔಟ್‌ನ ಹರಳೂರಿನ ಸಾಯಿರಾಮ್ (44) ಅವರನ್ನು ಆನೇಕಲ್‌ನ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಯಿರಾಮ್ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣ ಸಂಬಂಧ ಆರೋಪಿ ಪತ್ನಿ ಹಂಸವೇಣಿ (38)ಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂರ್ಯ ಸಿಟಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ದಂಪತಿ ಎಚ್‌ಎಸ್‌ಆರ್ ಲೇಔಟ್‌ನ ಹರಳೂರಿನಲ್ಲಿರುವ ‘ರಾಯಲ್ ಪ್ಯಾರಡೇಸ್’ ಅಪಾರ್ಟ್‌ಮೆಂಟ್ ನಿವಾಸಿಗಳಾಗಿದ್ದು, ‘ಏಸ್ ಸ್ಪಲಿಟಿಸ್ ಮ್ಯಾನೇಜ್‌ಮೆಂಟ್ ಅಂಡ್ ಪ್ರಾಪರ್ಟಿಸ್’ ಎಂಬ ಖಾಸಗಿ ಸೆಕ್ಯೂರಿಟಿ ಏಜೆನ್ಸಿ ಹೊಂದಿದ್ದಾರೆ.

ಶುಕ್ರವಾರ ಮಧ್ಯಾಹ್ನ ಇಬ್ಬರು ಚಂದಾಪುರ ಬಳಿಯ ಯಡವನಹಳ್ಳಿ ಸಮೀಪವಿರುವ ‘ಮ್ಯಾಕ್ಸ್’ ಹೋಟೆಲ್‌ಗೆ ಊಟಕ್ಕೆ ತೆರಳಿ ಮದ್ಯ ಸೇವಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಹೋಟೆಲ್‌ನಲ್ಲಿಯೇ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾದಾಗ ಹೋಟೆಲ್‌ನ ಸಿಬ್ಬಂದಿ ಇಬ್ಬರ ಜಗಳ ಬಿಡಿಸಿ ಕಳುಹಿಸಿದ್ದರು. ಊಟ ಮಾಡಿದ ನಂತರ ದಂಪತಿ ಫಾರ್ಚೂನರ್ ಕಾರಿನಲ್ಲಿ ಮನೆಗೆ ಹೊರಟಿದ್ದರು. ಮಾರ್ಗ ಮಧ್ಯೆ ಕೂಡ ಇಬ್ಬರ ನಡುವೆ ಜಗಳ ಮುಂದುವರೆದಿದೆ. ಕೋಪದಲ್ಲಿ ಪತಿ ಸಾಯಿರಾಮ್ ಪತ್ನಿಗೆ ಹೊಡೆದು ಹೆಬ್ಬಗೋಡಿಯಲ್ಲಿರುವ ವೀರಸಂದ್ರದ ಬಳಿ ಕಾರು ಇಳಿದು ಬಿಎಂಟಿಸಿ ಬಸ್ ಹತ್ತಿಕೊಂಡಿದ್ದ. ಪತಿಯ ಹಲ್ಲೆಯಿಂದ ಕೆರಳಿದ್ದ ಹಂಸವೇಣಿ ಕಾರಿನಲ್ಲಿಯೇ ಬಸ್‌ನ್ನು ಹಿಂಬಾಲಿಸಿ ಉಸ್ಗುರು ಗೇಟ್ ಬಳಿ ಬಸ್‌ಗೆ ಕಾರನ್ನು ಅಡ್ಡವಾಗಿ ನಿಲ್ಲಿಸಿ ಬಸ್ ಹತ್ತಿ ಪತಿಯ ಹೊಟ್ಟೆ ಭಾಗಕ್ಕೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ.

ಈ ಸಂದರ್ಭದಲ್ಲಿ ಪತಿಯ ಸಹಾಯಕ್ಕೆ ಬಸ್ ಪ್ರಯಾಣಿಕರು ಮುಂದಾದಾಗ ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ. ಹಲ್ಲೆ ನಡೆಸಿದರಿಂದಾಗಿ ಹಂಸವೇಣಿ ಅವರ ಬಾಯಿಯಿಂದಲೂ ರಕ್ತ ಬರ ತೊಡಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ಆಕೆ ಬಳಿ ಇದ್ದ ಪಿಸ್ತೂಲ್ ವಶಪಡಿಸಿಕೊಂಡರೆಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆರೋಪಿ ಹಂಸವೇಣಿ ಎಷ್ಟು ಬಾರಿ ಗುಂಡು ಹಾರಿಸಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇಬ್ಬರು ಮದ್ಯ ಸೇವನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಾಯಿರಾಮ್‌ನ ಹೊಟ್ಟೆ ಭಾಗಕ್ಕೆ ಗುಂಡು ಹೊಕ್ಕಿದ್ದು, ಶಸ್ತ್ರ ಚಿಕಿತ್ಸೆ ನಡೆಸಿ ಗುಂಡು ಹೊರ ತೆಗೆಯಲಾಗಿದೆ. ಸಾಯಿರಾಮ್ ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ್ಯಂಬುಲೆನ್ಸ್‌ಗೆ ಅಡ್ಡಿ!

ಆ್ಯಂಬುಲೆನ್ಸ್ ಬಂದ ಮೇಲೆ ಗಂಡನನ್ನು ಕರೆದೊಯ್ಯಲು ಹಂಸವೇಣಿ ತೀವ್ರ ಪ್ರತಿರೋಧ ತೋರಿಸಿದರು, ಕೊನೆಗೆ ಪೊಲೀಸರು ಆಕೆಯನ್ನು ಮನ ಒಲಿಸಿ ಆ್ಯಂಬುಲೆನ್ಸ್‌ನಲ್ಲಿ ಸಾಯಿರಾಂ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

(ಕನ್ನಡಪ್ರಭ ವಾರ್ತೆ)