ನೋಡೋದಕ್ಕೆ ಇದೊಂದು ಆತ್ಮಹತ್ಯೆ, ಆದರೆ ಅಲ್ಲಿ ಸಿಕ್ಕ ಸಾಕ್ಷಿ ನೋಡಿದ್ರೆ ಇದು ಕೊಲೆಯೋ ಇಲ್ಲಾ ಮೌಢ್ಯಕ್ಕೆ ನಡೆದ ಬಲಿಯೋ ಎನ್ನುವ ಅನುಮಾನ ಹುಟ್ಟುಹಾಕಿದೆ. 13ರ ಬಾಲೆಯೊಬ್ಬಳ ನಿಗೂಢ ಸಾವಿನ ಸುತ್ತ ಹಲವು ಅನುಮಾನಗಳು ಕಾಡತೊಡಗಿದ್ದು ಈ ಕುರಿತ ಒಂದು ವರದಿ.  

ಬೆಂಗಳೂರು(ಸೆ.26): ಈ ಫೋಟೋದಲ್ಲಿ ಮುದ್ದಾಗಿ ಕಾಣ್ತಿರುವ ಬಾಲಕಿ ಹೆಸರು ಚಂದನಾ, 13 ವರ್ಷ. ಬೆಂಗಳೂರು ಹೊರವಲಯ ಬನ್ನೇರುಘಟ್ಟ ರಸ್ತೆಯ ಬಿಲವಾರದಹಳ್ಳಿ ನಿವಾಸಿ ವಾಸುದೇವ್ ಎಂಬುವರ ಪುತ್ರಿ. ಎಬಿಎನ್ ಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದ ಬಾಲಕಿ ನಿನ್ನೆ ಮೆನಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಏಕಾಏಕಿ ಇಷ್ಟು ಚಿಕ್ಕ ವಯಸ್ಸಿನ ಹುಡುಗಿ ನೇಣಿಗೆ ಶರಣಾಗಿದ್ಯಾಕೆ ಎಂದು ಯೋಚಿಸುತ್ತಿರುವಾಗಲೇ ಸಿಕ್ಕಿದ್ದು ಅನಾಮದೇಯ ಪತ್ರ.

ಅನಾಮದೇಯ ಪತ್ರದಲ್ಲಿ ಏನಿದೆ..?

Mr. ವಾಸುದೇವ, ನನ್ನ ಮಂತ್ರದ ಬಗ್ಗೆ ನಿನಗೆ ಗೊತ್ತಿರಲಿಲ್ಲ ಅಲ್ವಾ..? ಹೆಂಗೆ ನಿನ್ನ ಮಗಳನ್ನು ನೇಣುಹಾಕಿಕೊಳ್ಳೋ ಹಾಗೆ ಮಾಡಿದೆ. ನೋಡಿದ್ಯಾ ನನ್ನ ಮಂತ್ರದ ಪವರ್. ನನಗೆ ಎಷ್ಟು ಕಷ್ಟ ಕೊಟ್ಟೆ..? ಇಷ್ಟಕ್ಕೆ ನಿನಗೆ ಜ್ಞಾಪಕ ಆಗಲ್ಲ. ನಿನಗೆ ಇನ್ನೂ ಇಬ್ಬರು ಮಕ್ಕಳು ಇದ್ದಾರೆ. ಜ್ಞಾಪಕ ಇರಲಿ. ನಾನು ಅವರನ್ನೂ ಬಿಡಲ್ಲ. ನಿನ್ನ ಒಬ್ಬ ಮಗ ನನ್ನ ಕೈಗೆ ಸಿಕ್ಕಿದ್ದ. ಆತ ಹೇಗೆ ಮಿಸ್ ಆದ ಗೊತ್ತಿಲ್ಲ. ಅವರನ್ನೂ ನಾನು ಬಿಡಲ್ಲ. ನನ್ನ ಕುಟುಂಬ ಹಾಳು ಮಾಡಿದಂತೆ ನಿನ್ನ ಕುಟುಂಬವನ್ನೂ ಹಾಳು ಮಾಡ್ತೀನಿ ಮರೀಬೇಡ..

ಹೀಗೆ ವಾಸುದೇವ್ ಮನೆಯಲ್ಲಿ ಸಿಕ್ಕ ಅನಾಮದೇಯ ಪತ್ರದಲ್ಲಿ ಬರೆಯಲಾಗಿದೆ. ಹಾಗಿದ್ದರೆ ನಿಜಕ್ಕೂ ಬಾಲಕಿಯದ್ದು ಆತ್ಮಹತ್ಯೆಯಾ..? ಇಲ್ಲಾ ದ್ವೇಷಕ್ಕೆ ನಡೆದ ಕೊಲೆಯಾ.? ಪತ್ರದಲ್ಲಿ ಬರೆದಂತೆ ಇದು ಮಾಟ, ಮಂತ್ರವೆಂಬ ಮೌಢ್ಯತೆಗೆ ನಡೆದ ಬಲಿಯಾ..? ಈ ನಿಗೂಢ ಸತ್ಯವನ್ನು ಬನ್ನೇರುಘಟ್ಟ ಠಾಣೆ ಪೊಲೀಸರೇ ಬೇಧಿಸಬೇಕಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಂದನ ಶವಪರೀಕ್ಷೆ ನಡೆಸಿದ್ದು, ಬನ್ನೇರುಘಟ್ಟ ಪೋಲೀಸರು ತನಿಖೆ ಆರಂಭಿಸಿದ್ದಾರೆ.