ಬಳ್ಳಾರಿ(ಸೆ.16): ಮಳೆಗಾಗಿ ದೇವರಿಗೆ ಪ್ರಾರ್ಥನೆ ಹರಕೆ, ಅಭಿಷೇಕ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಗಣಿನಾಡಿನಲ್ಲಿ ಮಳೆಗಾಗಿ ಜೀವಂತವಾಗಿರುವ ವ್ಯಕ್ತಿಯನ್ನ ಶವ ಸಂಸ್ಕಾರದ ವಿಧಿವಿಧಾನಗಳ ರೀತಿಯಲ್ಲಿ ಸಿದ್ಧಗೊಳಿಸಿ ಶವದಂತೆ ಊರು ತುಂಬಾ ಮೆರವಣಿಗೆ ಮಾಡಿ, ಸ್ಮಶಾನದಲ್ಲಿಟ್ಟು ಬರುವ ವಿಚಿತ್ರ ಸಂಪ್ರದಾಯ ಬೆಳಕಿಗೆ ಬಂದಿದೆ.

ಬಳ್ಳಾರಿ ಕೂಡ್ಲಿಗಿ ತಾಲೂಕಿನ ಭೀಮಸಮುದ್ರ ಎಂಬ ಗ್ರಾಮದಲ್ಲಿ ಇಂತಹ ವಿಚಿತ್ರ ಸಂಪ್ರದಾಯವಿದ್ದು, ಗ್ರಾಮದಲ್ಲೇ ಒಬ್ಬ ವೃದ್ಧರನ್ನ ಆಯ್ಕೆ ಮಾಡಿಕೊಂಡು ಶವದ ರೀತಿ ಸಿದ್ಧಗೊಳಿಸಿ ಗ್ರಾಮದಲ್ಲೆಲ್ಲಾ ಮೆರವಣಿಗೆ ಮಾಡಿ ಸ್ಮಶಾನದಲ್ಲಿಟ್ಟು ತಿರುಗಿ ನೋಡದಂತೆ ಹಿಂತಿರುಗಿ ಗ್ರಾಮಕ್ಕೆ ಬರುತ್ತಾರೆ.

ನಂತರ ಸ್ನಾನ ಮಾಡಿ ದೇವರ ದೀಪ ಹಚ್ಚಿ ಪೂಜೆ ಮಾಡುತ್ತಾರೆ. ಇದರಿಂದ ಮಳೆಯಾಗುತ್ತದೆ, ಹಾಗೂ ಬರಗಾಲ ದೂರವಾಗತ್ತದೆ ಎನ್ನುವುದು ಈ ಗ್ರಾಮಸ್ಥರ ನಂಬಿಕೆಯಾಗಿದೆ.