Asianet Suvarna News Asianet Suvarna News

ಭಾರತದ ಬಿಟ್ ಕಾಯಿನ್ ದಂಧೆಗೆ ಬೆಂಗಳೂರೇ ರಾಜಧಾನಿ!

2013ರಲ್ಲೇ ದೇಶದ ಮೊದಲ ಬಿಟ್‌ ಕಾಯಿನ್‌ ಕಂಪನಿ ತುಮಕೂರಲ್ಲಿ ಶುರು | 1.5 ಲಕ್ಷ ಜನರಿಂದ .35 ಕೋಟಿ ವಹಿವಾಟು | ಏನಿದು ಬಿಟ್‌ ಕಾಯಿನ್‌?

Shocking Bengaluru Capital For Bit Coin Deals

ಬೆಂಗಳೂರು (ಫೆ.19):  ನಗದುರಹಿತ ವಹಿವಾಟಿನ ಡಿಜಿಟಲ್‌ ಕರೆನ್ಸಿಯೇ ಬಿಟ್‌ ಕಾಯಿನ್‌. ಹೆಸರಿಗಷ್ಟೇ ಇದು ಕಾಯಿನ್‌, ಆದರೆ ಕಾಯಿನ್‌ ಅಲ್ಲ. ವ್ಯವಹಾರ ಇಂಟರ್ನೆಟ್ಟಲ್ಲೇ ನಡೆಯುತ್ತದೆ. ಬಿಟ್‌ ಕಾಯಿನ್‌ ಪೂರೈಸುವ ಕಂಪನಿಗೆ ಹಣ ನೀಡಿದರೆ ಆ ಕಂಪನಿಗಳು ಗ್ರಾಹಕನಿಗೆ ಅದರ ಮೌಲ್ಯದ ಬಿಟ್‌ ಕಾಯಿನ್‌ ನೀಡುತ್ತವೆ. ಅದನ್ನು ಯಾರಿಗೆ ಪಾವತಿ ಮಾಡಿದರೂ ಯಾವುದೇ ದಾಖಲೆ ತೆರಿಗೆ ಇಲಾಖೆ ಇತ್ಯಾದಿ ಸರ್ಕಾರಿ ಸಂಸ್ಥೆಗಳಿಗೆ ತಿಳಿಯುವುದಿಲ್ಲ. ಅಕ್ರಮ ವ್ಯವಹಾರಕ್ಕೆ ಇದರ ಬಳಕೆ ಹೆಚ್ಚು.

ಅದು ಕಳ್ಳ ದಂಧೆ ಅಂತ ಗೊತ್ತು. ಈ ದಂಧೆ ಅಕ್ರಮ ಮತ್ತು ದೇಶದ ಅರ್ಥ ವ್ಯವಸ್ಥೆಗೆ ಪೆಟ್ಟು ನೀಡುತ್ತದೆ, ಕ್ರಮ ಕೈಗೊಳ್ಳಿ ಎಂದು ಖುದ್ದು ಆರ್‌ಬಿಐ ತಾಕೀತು ಮಾಡಿದೆ. ಆದರೆ, ಈ ದಂಧೆಯನ್ನು ನಿಯಂತ್ರಿಸುವ ಮಾರ್ಗ ಅಥವಾ ಅದರಲ್ಲಿ ತೊಡಗಿರುವವರ ವಿರುದ್ಧ ಯಾವ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂಬುದೇ ನಮ್ಮ ಪೊಲೀಸರಿಗೆ ಗೊತ್ತಾಗುತ್ತಿಲ್ಲ.

ಕರುನಾಡಿನ ಸೈಬರ್‌ ಪೊಲೀಸರಿಗೆ ಸಂದಿಗ್ಧ ಹುಟ್ಟುಹಾಕಿರುವ ಈ ದಂಧೆಯ ಹೆಸರು- ಬಿಟ್‌ ಕಾಯಿನ್‌ ವಹಿವಾಟು.
ಭವಿಷ್ಯದ ಕರೆನ್ಸಿ ಎಂಬ ಹೆಗ್ಗಳಿಕೆ ಪಡೆದ ಈ ಅಂತರ್ಜಾಲ ಆಧಾರಿತ ಬಿಟ್‌ ಕಾಯಿನ್‌ ವಹಿವಾಟಿಗೆ ಕರುನಾಡು ಹೆದ್ದಾರಿಯಾಗಿದೆ. ಅಷ್ಟೇ ಅಲ್ಲ, ಈ ವ್ಯವಹಾರ ನಡೆಸಲು ಭಾರತದ ಮೊತ್ತಮೊದಲ ಕಂಪನಿ ಕರ್ನಾಟಕದ ತುಮಕೂರಿನಲ್ಲಿ ಆರಂಭ​ಗೊಂಡು ಕಳೆದ ಐದು ವರ್ಷಗಳಿಂದ ಯಾವುದೇ ಅಂಕೆ-ಶಂಕೆಯಿಲ್ಲದೆ ಕಾರ್ಯ​ನಿರ್ವಹಿ​ಸುತ್ತಿದೆ. ಈ ಕಂಪನಿ ತನ್ನ ವೆಬ್‌ಸೈಟ್‌ನಲ್ಲಿ ಘೋಷಿಸಿಕೊಂಡಿ​ರುವಂತೆ ಇದುವರೆಗೂ 1.5 ಲಕ್ಷ ಜನರಿಗೆ ತನ್ನ ‘ಸೇವೆ' ಒದಗಿಸಿದ್ದು, ಸುಮಾರು 35 ಕೋಟಿ ರು. ವಹಿವಾಟು ನಡೆಸಿದೆ.

ಏನಿದು ಬಿಟ್ ಕಾಯಿನ್?

ನಗದು ರಹಿತ ವಹಿವಾಟಿನ ಡಿಜಿಟಲ್ ಕರೆನ್ಸಿಯೇ ಬಿಟ್ ಕಾಯಿನ್. ಹೆಸರಿಗಷ್ಟೇ ಇದು ಕಾಯಿನ್, ಆದರೆ ಕಾಯಿನ್ ಅಲ್ಲ. ವ್ಯವಹಾರ ಇಂಟರ್ನೆಟ್'ನಲ್ಲೇ ನಡೆಯುತ್ತದೆ. ಬಿಟ್ ಕಾಯಿನ್ ಪೂರೈಸುವ ಕಂಪನಿಗೆ ಹಣ ನೀಡಿದರೆ ಆ ಕಂಪನಿಗಳು ಗ್ರಾಹಕನಿಗೆ ಅದರ ಮೌಲ್ಯದ ಕಾಯಿನ್ ನೀಡುತ್ತವೆ.  ಅದನ್ನು ಯಾರಿಗೆ ಪಾವತಿ ಮಾಡಿದರೂ ಯಾವುದೇ ದಾಖಲೆ ತೆರಿಗೆ ಇಲಾಖೆ ಇತ್ಯಾದಿ ಸರ್ಕಾರಿ ಸಂಸ್ಥೆಗಳಿಗೆ ತಿಳಿಯುವದಿಲ್ಲ. ಅಕ್ರಮ ವ್ಯವಹಾರಕ್ಕೆ ಇದರ ಬಳಕೆ ಹೆಚ್ಚು.

ಬಿಟ್‌ ಕಾಯಿನ್‌ ದಂಧೆ ಕರ್ನಾಟಕದ ಮೂಲಕ ನಡೆಯುತ್ತಿದೆ ಎಂಬ ಸುಳಿವು ನಮ್ಮ ಪೊಲೀಸರಿಗೆ ಡ್ರಗ್‌ ಮಾಫಿಯಾ ಬಗ್ಗೆ ತನಿಖೆ ನಡೆಸಿದಾಗ ಅರಿವಿಗೆ ಬಂದಿತ್ತು. ಇದರಿಂದ ಎಚ್ಚೆತ್ತ ಸೈಬರ್‌ ಕ್ರೈಂ ಅಧಿಕಾರಿಗಳು, ಬಿಟ್‌ ಕಾಯಿನ್‌ ದಂಧೆಕೋರರ ಕುರಿತು ಭಾರತೀಯ ರಿಸವ್‌ರ್‍ ಬ್ಯಾಂಕ್‌ನಿಂದ ಮಾಹಿತಿ ಕೋರಿದ್ದರು. ಆಗ ಭಾರತದ ಮೊದಲ ಬಿಟ್‌ ಕಾಯಿನ್‌ ಕಂಪನಿಯು ತುಮಕೂರಿನಲ್ಲಿ ಸ್ಥಾಪನೆಗೊಂಡಿದೆ ಎಂಬ ಮಾಹಿತಿಯನ್ನು ಆರ್‌ಬಿಐ ನೀಡಿತು. ಕೂಡಲೇ ಕಾರ್ಯಪ್ರವೃತ್ತರಾದ ರಾಜ್ಯ ಪೊಲೀಸರು ಈ ಕಂಪನಿಗೆ ನೋಟಿಸ್‌ ನೀಡಿದ್ದಾರೆ.

ಆದರೆ, ಯಾವ ಕಾಯ್ದೆ ಅಡಿ ಈ ಕಂಪನಿ ವಿರುದ್ಧ ಪ್ರಕರಣ ದಾಖಲಿಸಬೇಕು ಎಂಬ ಗೊಂದಲ ಅವರನ್ನು ಕಾಡುತ್ತಿದೆ. ಏಕೆಂದರೆ, ಬಿಟ್‌ ಕಾಯಿನ್‌ ದಂಧೆಯನ್ನು ಅಕ್ರಮ ಎನ್ನುವ ಹಾಗೂ ಅದರಲ್ಲಿ ತೊಡಗಿಕೊಳ್ಳುವವರ ಮೇಲೆ ಕ್ರಮ ಕೈಗೊಳ್ಳಬಹುದಾದ ಯಾವುದೇ ಕಾನೂನು ಇದುವರೆಗೂ ರೂಪಿತವಾಗಿಲ್ಲ!

ಅಂದ ಹಾಗೆ ರಾಜ್ಯದಲ್ಲಿ ಬಿಟ್‌ ಕಾಯಿನ್‌ ವಹಿವಾಟು ನಡೆಸಲು ಆರಂಭಗೊಂಡಿರುವ ಕಂಪನಿಯ ಹೆಸರು ‘ಯೂನೊಕಾಯಿನ್‌ ಟೆಕ್ನಾಲಜೀಸ್‌ ಕಂಪನಿ.' 2013ರಲ್ಲಿ ಸ್ಥಾಪನೆಗೊಂಡ ಈ ಕಂಪನಿ ಈಗ ಬೆಂಗಳೂರಿನ ರಾಜಾಜಿನಗರದಲ್ಲಿ ಕಚೇರಿ ತೆರೆದಿದೆ. ಆದರೆ ಈ ಕಂಪನಿಯ ಬಿಟ್‌ ಕಾಯಿನ್‌ ವಹಿವಾಟಿನ ಕುರಿತು ಸ್ಪಷ್ಟಮಾಹಿತಿಯಿಲ್ಲ. ಬಿಟ್‌ ಕಾಯಿನ್‌ ಚಲಾವಣೆಯೇ ಭಾರತದಲ್ಲಿ ಕಾನೂನುಬಾಹಿರ. ಹಾಗಾಗಿ, ಆ ಕಂಪನಿಗೆ ನೋಟಿಸ್‌ ನೀಡಲಾಗಿದೆ ಎಂದು ಸೈಬರ್‌ ಕ್ರೈಂ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಭಾರತದಲ್ಲಿ ಬಿಟ್‌ ಕಾಯಿನ್‌ ಚಲಾವಣೆ ಕಾನೂನು ಬಾಹಿರ ವ್ಯವಹಾರವಾಗಿದೆ. ಆದರೆ ಈ ದಂಧೆಕೋರರನ್ನು ಶಿಕ್ಷಿಸುವ ಕಾನೂನು ನಮ್ಮಲಿಲ್ಲ. ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುವ ಮಟ್ಟಿಗೆ ಬಿಟ್‌ ಕಾಯಿನ್‌ ವಹಿವಾಟು ಪ್ರಗತಿ ಕಾಣುತ್ತಿದೆ. ಇನ್ನು ಅಕ್ರಮ ಚಟುವಟಿಕೆಗಳಿಗೆ ಇದು ಹೆಚ್ಚು ಬಳಕೆಯಾಗುತ್ತಿದ್ದು, ಈಗಾಗಲಾದರೂ ಎಚ್ಚೆತ್ತು ಕಡಿವಾಣ ಹಾಕಬೇಕಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದೇವೆ.
ಶುಭಮಂಗಳ ಖಾಸಗಿ ಮಹಿಳಾ ಸೈಬರ್‌ ಸೆಕ್ಯೂರಿಟಿ ಸೆಲ್‌ ಸದಸ್ಯೆ

ವಿಚಾರಣೆಗೆ ಬರಲು ಸಿಐಡಿ ನೋಟಿಸ್‌: ಭಾರತದಲ್ಲಿ ಬಿಟ್‌ ಕಾಯಿನ್‌ ವ್ಯವಹಾರವು ಕಾನೂನು ಬಾಹಿರವಾಗಿದೆ. ಹೀಗಾಗಿ ಅಂತರ್ಜಾಲದಲ್ಲಿನ ಈ ಹಣಕಾಸು ವಹಿವಾಟಿನ ಬಗ್ಗೆ ವಿವರಣೆ ನೀಡುವಂತೆ ಯೂನೊಕಾಯಿನ್‌ ಸಂಸ್ಥೆಗೆ ಜ.23ರಂದು ಮೊದಲ ನೋಟಿಸ್‌ ಜಾರಿಗೊಳಿಸಲಾಗಿತ್ತು. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆ ಸಂಸ್ಥೆಗೆ ಫೆ.16ರಂದು ಎರಡನೇ ಬಾರಿ ನೋಟಿಸ್‌ ನೀಡಲಾಗಿದೆ.

ಫೆ.16ರ ಗುರುವಾರ ಸಂಸ್ಥೆಯ ದೂರವಾಣಿಗೆ ಕರೆ ಮಾಡಿದಾಗ ಸಾತ್ವಿಕ್‌ ಎಂಬಾತ ಕರೆ ಸ್ವೀಕರಿಸಿದ್ದ. ಇದೇ ತಿಂಗಳ 24ನೇ ತಾರೀಖಿನೊಳಗೆ ವಿಚಾರಣೆಗೆ ಹಾಜರಾಗುವಂತೆ ಆತನಿಗೆ ಸೂಚಿಸಲಾಗಿದೆ. ಈಗಲೂ ಅವರು ಪ್ರತಿಕ್ರಿಯೆ ನೀಡಿದೆ ಹೋದರೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಿಐಡಿ ಸೈಬರ್‌ ಕ್ರೈಂ ಅಧಿಕಾರಿಗಳು ಹೇಳಿದ್ದಾರೆ.

ಹೇಗೆ ಬಿಟ್‌ ಕಾಯಿನ್‌ ವ್ಯವಹಾರ?: ಬಿಟ್‌ ಕಾಯಿನ್‌ ವ್ಯವಹಾರವನ್ನು ಅಂತರ್ಜಾಲದ ಹವಾಲಾ ದಂಧೆ ಎಂದೇ ಕರೆಯಲಾಗುತ್ತದೆ. ಇಲ್ಲಿ ಹಣಕಾಸು ವರ್ಗಾವಣೆಯು ಸಾಮಾನ್ಯ ಬ್ಯಾಂಕಿಂಗ್‌ ರೀತಿಯಲ್ಲಿ ನಡೆಯುವುದಿಲ್ಲ. ನಗದು ರೂಪವಲ್ಲದ ಸಂಪೂರ್ಣ ಡಿಜಿಟಲ್‌ ವ್ಯವಹಾರವಿದು. ಕೊಳ್ಳುವ ಮತ್ತು ಖರೀದಿಸುವ ವ್ಯಕ್ತಿಗಳ ನಡುವೆ ಮುಖತಃ ಪರಿಚಯ ಇರಬೇಕು ಎಂದೇನೂ ಇಲ್ಲ.

ಅಂತರ್ಜಾಲದಲ್ಲಿ ಬಿಟ್‌ ಕಾಯಿನ್‌ ವ್ಯವಹಾರ ನಡೆಸಲು ಹತ್ತಾರು ಸಾಫ್ಟ್‌ವೇರ್‌ಗಳಿವೆ. ಈ ಸಾಫ್ಟ್‌ ವೇರ್‌ ಡೌನ್‌ಲೋಡ್‌ ಮಾಡಿಕೊಂಡು ವ್ಯಾಲೆಟ್‌ ತೆರೆಯಬೇಕು. ಆನಂತರ ಬಿಟ್‌ ಕಾಯಿನ್‌ ಸಂಸ್ಥೆಗೆ ಗ್ರಾಹಕರ ಬ್ಯಾಂಕ್‌ ಖಾತೆಯನ್ನು ಲಿಂಕ್‌ ಮಾಡಬೇಕು.

ಬಿಟ್‌ ಕಾಯಿನ್‌ ಖರೀದಿಸಿದಾಗ ಅವರಿಗೆ ಗ್ರಾಹಕರ ಖಾತೆಯಿಂದ ಹಣ ವರ್ಗಾವಣೆಯಾಗುತ್ತದೆ. ಕೆಲವು ಬ್ಯಾಂಕ್‌ಗಳು ಬಿಟ್‌ ಕಾಯಿನ್‌ಗೆ ಹಣಕಾಸು ವರ್ಗಾವಣೆಗೊಂಡ ಕೂಡಲೇ ಖಾತೆ ಸ್ಥಗಿತಗೊಳಿಸುತ್ತವೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ದಂಧೆಯಲ್ಲಿ ತೊಡಗುವವರು, ವಿದೇಶದ ಬ್ಯಾಂಕ್‌ಗಳಲ್ಲಿ ತಮ್ಮ ಅಥವಾ ಬೇನಾಮಿ ಹೆಸರಿನಲ್ಲಿ ಖಾತೆ ತೆರೆದು ವ್ಯವಹಾರ ನಡೆಸುತ್ತಾರೆ ಎಂದು ಸೈಬರ್‌ ತಜ್ಞೆ ಶುಭಮಂಗಳ ಕನ್ನಡಪ್ರಭಕ್ಕೆ ತಿಳಿಸಿದರು.

ಗರಿಷ್ಠ ಮೌಲ್ಯದ ನೋಟುಗಳ ಚಲಾವಣೆ ಅಮಾನ್ಯಗೊಂಡ ನಂತರ ಭಾರತದಲ್ಲಿ ಬಿಟ್‌ ಕಾಯಿನ್‌ ಮೌಲ್ಯ ಹೆಚ್ಚಿದೆ. ಕಳೆದ ಅಕ್ಟೋಬರ್‌ನಲ್ಲಿ ಒಂದು ಬಿಟ್‌ ಕಾಯಿನ್‌ಗೆ .31,872 ಇತ್ತು. ಆನಂತರ . 21,872ಕ್ಕೆ ಇಳಿದಿತ್ತು. ನೋಟು ರದ್ದತಿ ಬಳಿಕ ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಒಂದು ಬಿಟ್‌ ಕಾಯಿನ್‌ ಮೌಲ್ಯ . 57 ಸಾವಿರಕ್ಕೆ ಏರಿದೆ. ಇದು ಆಯಾ ದೇಶದ ಕರೆನ್ಸಿಗೆ ತಕ್ಕಂತೆ ವ್ಯತ್ಯಾಸವಾಗುತ್ತದೆ. ಅಮೆರಿಕದಲ್ಲಿ ಒಂದು ಬಿಟ್‌ ಕಾಯಿನ್‌ ಮೌಲ್ಯ 120 ಡಾಲರ್‌ಗಳಿದೆ ಎಂದು ಸೈಬರ್‌ ತಜ್ಞರು ವಿವರಿಸುತ್ತಾರೆ.
ಬ್ಲಾಕ್‌ ಮಾರ್ಕೆಟ್‌ಗೆ ಬಿಟ್‌ ಕಾಯಿನ್‌: ಬೆಂಗಳೂರಿನ ನ್ಯಾಷನಲ್‌ ಮಾಕೆÜರ್‍ಟ್‌, ಕಲಾಸಿಪಾಳ್ಯ, ಬರ್ಮಾ ಬಜಾರ್‌, ದುಬೈ ಪ್ಲಾಜಾ, ಸಂಡೇ ಬಜಾರ್‌, ಬ್ರಿಗೇಡ್‌ ರಸ್ತೆಯಲ್ಲಿ ನಡೆಯುವ ಬ್ಲಾಕ್‌ ಮಾರ್ಕೆಟ್‌ನಂತೆ ಅಂತರ್ಜಾಲದಲ್ಲೂ ಬ್ಲಾಕ್‌ ಮಾರ್ಕೆಟ್‌ ಇದೆ. ಈ ದಂಧೆಯಲ್ಲಿ ಬಿಟ್‌ ಕಾಯಿನ್‌ ಅತಿ ಹೆಚ್ಚು ಚಲಾವಣೆಯಾಗುತ್ತದೆ.

ಇತ್ತೀಚೆಗೆ ಬೆಂಗಳೂರಿನ ಡ್ರಗ್ಸ್‌ ದಂಧೆಗೆ ಬಿಟ್‌ ಕಾಯಿನ್‌ ಕಾಲಿಟ್ಟಿದ್ದು, ಡ್ರಗ್ಸ್‌ ಜಾಲದ ಮೇಲೆ ಹಿಡಿತ ಸಾಧಿಸುತ್ತಿದೆ. ಜಾಗತಿಕ ಮಟ್ಟದಲ್ಲೂ ಕೂಡ ಎಲ್ಲಾ ರೀತಿಯ ಅಕ್ರಮ ವ್ಯವಹಾರಗಳಿಗೆ ಬಿಟ್‌ ಕಾಯಿನ್‌ ಚಲಾವಣೆಗೆ ಬಂದಿದೆ. ಹೀಗಾಗಿ ಭಾರತ ಸೇರಿದಂತೆ ಹಲವು ದೇಶಗಳ ಆರ್ಥಿಕ ವ್ಯವಸ್ಥೆ ಮೇಲೆ ಇದು ಪರಿಣಾಮ ಬೀರುತ್ತಿದ್ದು, ಈಗಾಗಲೇ ಅಮೆರಿಕದಲ್ಲಿ ಬಿಟ್‌ ಕಾಯಿನ್‌ ದಂಧೆ ಬಗ್ಗು ಬಡಿಯಲು ಕಾನೂನು ರೂಪಿಸಲಾಗುತ್ತಿದೆ ಎಂದು ಸೈಬರ್‌ ತಜ್ಞರು ಹೇಳುತ್ತಾರೆ.

2013ರಿಂದಲೇ ವಹಿವಾಟು!

ಯೂನೊಕಾಯಿನ್‌ ಪ್ರೈವೇಟ್‌ ಲಿ. ತುಮಕೂರು ನಗರದಲ್ಲಿ 2013ರ ಜುಲೈನಲ್ಲೇ ಸ್ಥಾಪನೆಯಾಗಿದೆ. ನಂತರ ಬೆಂಗಳೂರಿಗೆ ಅದು ಸ್ಥಳಾಂತರಗೊಂಡಿದೆ. ಭಾರತದ ಮೊದಲ ಬಿಟ್‌ ಕಾಯಿನ್‌ ಕಂಪನಿ ತಮ್ಮದು ಎಂದು ಆ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ. ಇದು 1.5 ಲಕ್ಷ ಗ್ರಾಹಕರನ್ನು ಹೊಂದಿದ್ದು, .35 ಕೋಟಿ ಆದಾಯ ಗಳಿಸಿದೆ. 5 ರಾಷ್ಟ್ರಗಳ 30 ಹೂಡಿಕೆದಾರರು ಹಣ ಹೂಡಿಕೆ ಮಾಡಿದ್ದು, ಡಿಜಿಟಲ್‌ ಕರೆನ್ಸಿ ವಹಿವಾಟಿನಲ್ಲಿ ಅತಿ ಹೆಚ್ಚು ಆದಾಯ ಬಂದಿದೆ ಎಂದು ಕಂಪನಿ ಹೇಳಿದೆ.

ಕಂಪನಿಯ ವಿಳಾಸ:

ಯೂನೊಕಾಯಿನ್‌ ಟೆಕ್ನಾಲಜೀಸ್‌ ಪ್ರೈ.ಲಿ.
104/12, ಮೊದಲ ಹಂತ, ಮೊದಲ ಮುಖ್ಯರಸ್ತೆ, ನಾಲ್ಕನೇ ಹಂತ, ರಾಜಾಜಿನಗರ, ಡಾ.ರಾಜಕುಮಾರ್‌ ರಸ್ತೆ, ಎಸ್‌ಬಿಎಂ ಬ್ಯಾಂಕ್‌ ಹತ್ತಿರ, ಬೆಂಗಳೂರು-560010, ದೂ.1800-103-2646 

ವರದಿ: ಗಿರೀಶ್ ಮಾದೇನಹಳ್ಳಿ, ಕನ್ನಡಪ್ರಭ

Follow Us:
Download App:
  • android
  • ios