ರಾಜ್ಯದಲ್ಲಿ 2008ರಿಂದ ವಿದ್ಯುತ್‌ ಖರೀದಿಯಲ್ಲಿ ರೂ.17 ಸಾವಿರ ಕೋಟಿ ನಷ್ಟವಾಗಿದ್ದು, ಈ ಬಗ್ಗೆ ವರದಿ ಸಿದ್ಧವಾಗಿ ವರ್ಷವೇ ಕಳೆದರೂ ಮಂಡಿಸಲಾಗಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಶಿವ ಕುಮಾರ್‌ ವರದಿ ಮಂಡಿಸಲು ನಿರ್ಧರಿಸಿದ್ದಾರೆ. ಜೂ.14ರವರೆಗೂ ಅವರು ಸಮಿತಿಯ ಅವಧಿ ವಿಸ್ತರಿಸಿ ಕೊಂಡಿದ್ದಾರೆ.

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್‌ ಖರೀದಿ ಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ತನಿಖೆ ನಡೆಸಿದ ಸದನ ಸಮಿತಿಯ ಕರಡು ವರದಿ ಸಿದ್ಧವಾಗಿದ್ದು, ಅಕ್ರಮ ನಡೆದಿರುವ ಅಂಶಗಳು ಗೋಚರವಾಗಿವೆ ಎಂದು ತಿಳಿದುಬಂದಿದೆ.

ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ನೇತೃತ್ವದ ಸದನ ಸಮಿತಿಯ ವರದಿಯಲ್ಲಿ ಅಂದಿನ ಇಂಧನ ಸಚಿವರಾದ ಶೋಭಾ ಕರಂದ್ಲಾಜೆ ಅವರ ತಪ್ಪುಗಳು ಅನೇಕ ಕಡೆ ಕಾಣಿಸಿಕೊಂಡಿರುವುದೂ ಇದೆ ಎಂದು ಗೊತ್ತಾಗಿದೆ. ಅಂದಿನ ಸಮಯದಲ್ಲಿ ಕಡಿಮೆ ದರಕ್ಕೆ ವಿದ್ಯುತ್‌ ಲಭ್ಯ ಇತ್ತಾದರೂ ಹೆಚ್ಚಿನ ದರ ನೀಡಿ ಖರೀದಿಸಿರುವುದು ಗೊತ್ತಾಗಿದ್ದು, ಅದಕ್ಕೆ ಅಂದಿನ ಇಂಧನ ಸಚಿವರ ಆದೇಶ, ಸೂಚನೆಗಳು ಇರುವುದು ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಈ ಎಲ್ಲಾ ಅಂಶಗಳು ಕರಡು ವರದಿಯಲ್ಲಿ ಕಾಣಸಿಕ್ಕಿದ್ದು, ಜೂ.5ರಂದು ಸದನ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಚರ್ಚೆಯಾಗಲಿದೆ. ಆ ಸಂದರ್ಭದಲ್ಲಿ ಸಮಿತಿಯ ಸದಸ್ಯರೆಲ್ಲಾ ಒಪ್ಪಿದರೆ ತಪ್ಪಿತಸ್ಥರ ಹೆಸರಿನ ಸಹಿತ ಅಂತಿಮ ವರದಿ ವಿಧಾನಸಭೆಯಲ್ಲೇ ಮಂಡನೆಯಾಗಲಿದೆ.

ಇಂಧನ ಇಲಾಖೆ ಯಲ್ಲಿ ವಿದ್ಯುತ್‌ ಖರೀದಿಗೆ ಸಂಬಂಧಿಸಿದ ಅಕ್ರಮಗಳ ತನಿಖೆಗೆ ರಚಿಸಿದ್ದ ಸಮಿತಿಯ ವರದಿ ಸಿದ್ಧವಾಗಿದೆ. ಅದನ್ನು ಈ ಬಾರಿ ಅಧಿವೇಶನದಲ್ಲಿ ಮಂಡಿಸುವವರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸದಸ್ಯರಿಗೆ ಮಾಹಿತಿ ಯನ್ನೂ ನೀಡಲಾಗಿದೆ. ಹಾಗೆಯೇ ಸಮಿತಿಗೆ ನಿಗದಿಯಾಗಿದ್ದ ಅವಧಿಯನ್ನೂ ಜೂನ್‌ 14ರವರೆಗೆ ವಿಸ್ತರಿಸಲಾಗಿದೆ.

ಕೆ.ಬಿ.ಕೋಳಿವಾಡ ವಿಧಾನಸಭೆ ಸ್ಪೀಕರ್‌

ರಾಜ್ಯದಲ್ಲಿ 2008ರಿಂದ ವಿದ್ಯುತ್‌ ಖರೀದಿಯಲ್ಲಿ ರೂ.17 ಸಾವಿರ ಕೋಟಿ ನಷ್ಟವಾಗಿದ್ದು, ಈ ಬಗ್ಗೆ ವರದಿ ಸಿದ್ಧವಾಗಿ ವರ್ಷವೇ ಕಳೆದರೂ ಮಂಡಿಸಲಾಗಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಶಿವ ಕುಮಾರ್‌ ವರದಿ ಮಂಡಿಸಲು ನಿರ್ಧರಿಸಿದ್ದಾರೆ. ಜೂ.14ರವರೆಗೂ ಅವರು ಸಮಿತಿಯ ಅವಧಿ ವಿಸ್ತರಿಸಿ ಕೊಂಡಿದ್ದಾರೆ. ವರದಿ ವಿಚಾರವಾಗಿ ಸಚಿವರು ಸಮಿತಿಯ ಸಭೆಯನ್ನೇ ಕರೆಯುತ್ತಿಲ್ಲ ಎಂಬ ಸದಸ್ಯರ ಆರೋಪ ಮತ್ತು ಸದಸ್ಯರು ಸಭೆಗೇ ಬರುತ್ತಿಲ್ಲ ಎಂಬ ಪ್ರತಿ ಆರೋಪಗಳ ಮಧ್ಯೆ ಜೂನ್‌ 5ರಂದು ಸಭೆ ನಡೆಯಲಿದೆ. ಆದರೆ ಸಭೆಯಲ್ಲಿ ಸಮಿತಿಯ ಸದಸ್ಯರು ಭಾಗವಹಿಸಿ ವರದಿ ಅನುಮೋದಿಸುವರೇ ಅಥವಾ ಮತ್ತೆ ಸಭೆ ಮುಂದೂಡುವಂತೆ ಮಾಡಿ ಅವಧಿ ವಿಸ್ತರಣೆಯಾಗುವಂತೆ ಮಾಡುವರೇ ಎನ್ನುವುದು ಇನ್ನೂ ಸ್ಪಷ್ಟವಿಲ್ಲ. ಏಕೆಂದರೆ ಪತ್ತೆಯಾಗಿರುವ ಅಕ್ರಮಗಳು ಹಿಂದಿನ ಸರ್ಕಾರದ ಇಂಧನ ಸಚಿವರನ್ನೇ ಗುರಿಯಾಗಿಸುವ ಸಾಧ್ಯತೆ ಇದೆ. ಇದನ್ನು ಸಮಿತಿ ಸದಸ್ಯರು ಮತ್ತು ಅಧ್ಯಕ್ಷರು ಯಾವ ರೀತಿ ಪರಿಗಣಿಸುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ.

ಸದನದಲ್ಲಿ ಏನಾಗಿತ್ತು?: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್‌ ಖರೀದಿಯಲ್ಲಿ ವ್ಯಾಪಕ ಕ್ರಮ ನಡೆದಿರುವ ಬಗ್ಗೆ ವಿಧಾನಸಭೆಯಲ್ಲಿ ಗಂಭೀರ ಆರೋಪ ಕೇಳಿಬಂದು ತೀವ್ರ ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ 2004ರಿಂದ ಈ ಸರ್ಕಾರದ ಅವಧಿಯ (2014)ವರೆಗೂ ನಡೆದಿರುವ ವಿದ್ಯುತ್‌ ಖರೀದಿ ಬಗ್ಗೆ ತನಿಖೆ ನಡೆಸಲು 2014ರ ಸೆ.9ರಂದು ಸರ್ಕಾರ ಸದನ ಸಮಿತಿ ರಚಿಸಿತ್ತು. ವಿಚಿತ್ರವೆಂದರೆ, ಸದನ ಸಮಿತಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿತ್ತು. ಇದಕ್ಕೆ ಆಕ್ಷೇಪಿ ಸಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಸಚಿವರೇ ಸದನ ಸಮಿತಿ ಅಧ್ಯಕ್ಷರಾಗಿರುವ ಕಾರಣ ನಿಷ್ಪಕ್ಷಪಾತ ತನಿಖೆ ನಿರೀಕ್ಷಿಸಲಾಗದು ಎಂದಿದ್ದರು. ಆದರೂ ಸಚಿವರೇ ಅಧ್ಯಕ್ಷರಾಗಿ ಮುಂದುವರಿದರು.

ಸಮಿತಿ ತ್ವರಿತವಾಗಿ ವರದಿ ಸಲ್ಲಿಸಬೇಕೆಂದು ಪ್ರತಿ ಪಕ್ಷಗಳು ಒತ್ತಾಯಿಸಿದ್ದವು. ಆದರೆ ಸಚಿವ ಡಿ.ಕೆ.ಶಿವಕುಮಾರ್‌, ಜೆಡಿಎಸ್‌ ಮತ್ತು ಬಿಜೆಪಿ ಸದಸ್ಯರ ಅಸಹಕಾರದಿಂದ ವರದಿ ಅಂತಿಮಗೊಳಿಸಲಾಗುತ್ತಿಲ್ಲ ಎಂದು ಆಪಾದಿಸಿದ್ದರು. ಈ ವಿಚಾರ ಸದನದಲ್ಲೂ ಸಾಕಷ್ಟುಬಾರಿ ಚರ್ಚೆಯಾಗಿ, ಶಾಸಕ ಬಸವರಾಜ ಬೊಮ್ಮಾಯಿ ಮತ್ತು ಎಚ್‌.ಡಿ.ರೇವಣ್ಣ ಅವರು ಸಮಿತಿಯು ಸಭೆಯನ್ನೇ ಕರೆಯುತ್ತಿಲ್ಲ ಎಂದಿದ್ದರು. ಸ್ಪೀಕರ್‌ ಕೆ.ಬಿ.ಕೋಳಿವಾಡ ಅವರು ಸದನ ಸಮಿತಿ ರಚಿಸಿ ಮೂರು ವರ್ಷಗಳೇ ಕಳೆದಿವೆ, ಆದ್ದರಿಂದ ತ್ವರಿತವಾಗಿ ವರದಿ ಸಲ್ಲಿಸಿ ಎಂದು ಸೂಚಿಸಿದ್ದರು.

ಶೋಭಾ ಹೆಸರು ಕೈಬಿಡ್ತಾರಾ?

ರಾಜ್ಯದಲ್ಲಿ 2008ರಿಂದ 2014ರ ವರೆಗೂ ಸರ್ಕಾರ ವಿವಿಧ ಮೂಲಗಳಿಂದ ವಿದ್ಯುತ್‌ ಖರೀದಿಸಿದ ಬಗ್ಗೆ ಸಂಪೂರ್ಣ ವಿವರಗಳನ್ನು ಪಡೆದು ಕರಡು ವರದಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಇಲಾಖೆ ಅಧಿಕಾರಿಗಳು ಕಡಿಮೆ ದರಕ್ಕೆ ವಿದ್ಯುತ್‌ ಲಭ್ಯವಿದ್ದರೂ ಹೆಚ್ಚಿನ ಹಣ ಪಾವತಿಸಿ ವಿದ್ಯುತ್‌ ಖರೀದಿಸಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ರಾಜ್ಯದ ಸಕ್ಕರೆ ಕಾರ್ಖಾನೆಗಳಲ್ಲಿ ಕಡಿಮೆ ದರದಲ್ಲಿ ವಿದ್ಯುತ್‌ ಲಭ್ಯವಿತ್ತಾದರೂ ಅದಕ್ಕೆ ಆದ್ಯತೆ ನೀಡದೆ ಖಾಸಗಿ ಕಂಪನಿ ಗಳಿಂದ ಖರೀದಿಸಲಾಗಿದೆ. ಅದಕ್ಕಾಗಿ ಹೆಚ್ಚಿನ ದರ ನೀಡಲಾಗಿದೆ. ಹಾಗೆಯೇ ಹೊರ ರಾಜ್ಯಗಳಿಂದಲೂ ವಿದ್ಯುತ್‌ ಖರೀದಿಸಲಾಗಿದೆ. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಅನೇಕ ಖರೀದಿಯಲ್ಲಿ ಟೆಂಡರ್‌ ಪ್ರಕ್ರಿಯೆಗಳನ್ನೇ ನಡೆಸದೆ ವಿದ್ಯುತ್‌ ಪಡೆಯಲಾಗಿದೆ. ಇದೆಲ್ಲದಕ್ಕೂ ಇಂಧನ ಇಲಾಖೆ ಮುಖ್ಯಸ್ಥರು ಮತ್ತು ಸರ್ಕಾರದಿಂದಲೇ ಮೌಖಿಕ ಆದೇಶಗಳು ಹೋಗಿರುವುದು ಪತ್ತೆಯಾಗಿದೆ. ಈ ಎಲ್ಲಾ ಮಾಹಿತಿಗಳು ಇರುವ ಕರಡು ವರದಿ ಸಿದ್ಧವಾಗಿದೆ. ಇದನ್ನು ಜೂನ್‌ 5ರಂದು ನಡೆಸುವ ಸಭೆಯಲ್ಲಿ ಸದಸ್ಯರಿಗೆ ವಿತರಿಸಲಾಗುತ್ತದೆ. ಇದಕ್ಕೆ ಸದಸ್ಯರು ಒಪ್ಪಿಗೆ ನೀಡಿದರೆ ಅನುಮೋದಿಸಲಾಗುತ್ತದೆ. ಒಂದು ವೇಳೆ ಸಮಿತಿಯ ಸದಸ್ಯರು ಬದಲಾವಣೆ ಬಯಸಿದರೆ ಮಾರ್ಪಾಡು ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಅಂದಿನ ಇಂಧನ ಸಚಿವರನ್ನು ಆರೋಪದಿಂದ ಕೈಬಿಟ್ಟರೂ ಅಚ್ಚರಿ ಇಲ್ಲ ಎಂದೂ ಹೇಳಲಾಗಿದೆ. (ಕನ್ನಡಪ್ರಭ ವರದಿ)