ಕಾಂಗ್ರೆಸ್ಸಿಗರ ಕ್ಷೇತ್ರಕ್ಕೆ ಮಾತ್ರ ಶ್ರಮಶಕ್ತಿ ಸಾಲ

First Published 4, Apr 2018, 7:45 AM IST
Shobha Karandlaje Slams Karnataka Govt
Highlights

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ‘ಶ್ರಮಶಕ್ತಿ’ ಯೋಜನೆಯಡಿ ಕೇವಲ ಕಾಂಗ್ರೆಸ್‌ ಶಾಸಕರಿರುವ ಕ್ಷೇತ್ರಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡಿದ್ದು, ಇದರ ಹಿಂದೆ ಮತದಾರ ಓಲೈಕೆಯ ಯತ್ನ ಅಡಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಬೆಂಗಳೂರು : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ‘ಶ್ರಮಶಕ್ತಿ’ ಯೋಜನೆಯಡಿ ಕೇವಲ ಕಾಂಗ್ರೆಸ್‌ ಶಾಸಕರಿರುವ ಕ್ಷೇತ್ರಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡಿದ್ದು, ಇದರ ಹಿಂದೆ ಮತದಾರ ಓಲೈಕೆಯ ಯತ್ನ ಅಡಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಮಂಗಳವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಕಾಂಗ್ರೆಸ್‌ನ 94 ಶಾಸಕರ ಕ್ಷೇತ್ರಗಳಿಗೆ ಪ್ರತಿ ಕ್ಷೇತ್ರಕ್ಕೆ ತಲಾ .18.75 ಲಕ್ಷದಂತೆ ಅನುದಾನ ಬಿಡುಗಡೆ ಮಾಡಲಾಗಿದೆ. ಇದರ ಹಿಂದೆ ಚುನಾವಣೆಯ ಲಾಭ ಪಡೆಯುವ ಉದ್ದೇಶವಿದೆ. ಕೂಡಲೇ ಆಯೋಗ ಸೂಕ್ತ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.

‘ಶ್ರಮಶಕ್ತಿ’ ಯೋಜನೆಯಡಿ ಅರ್ಜಿದಾರರಿಂದ ನಿಯಮಾನುಸಾರ ದಾಖಲಾತಿ ಪಡೆದು ಅರ್ಹರ ಹೆಸರನ್ನು ನಿಗಮವೇ ಶಿಫಾರಸು ಮಾಡಬೇಕು. ಶಿಫಾರಸ್ಸಿನ ಪಟ್ಟಿಗೆ ಅನುಮೋದನೆ ನೀಡುವುದಷ್ಟೆಶಾಸಕರ ಕೆಲಸ. ಆದರೆ, ನಿಗಮದ ಜಿಲ್ಲಾ ವ್ಯವಸ್ಥಾಪಕರು ಮಾಡಬೇಕಾದ ಫಲಾನುಭವಿಗಳ ಆಯ್ಕೆಯನ್ನು ಶಾಸಕರಿಗೆ ಬಿಡಲಾಗಿದೆ. ಮುಂದಿನ ಚುನಾವಣೆಯಲ್ಲಿ ಲಾಭ ದೊರೆಯುವಂತಹ ವ್ಯಕ್ತಿಗಳನ್ನು ಫಲಾನುಭವಿಗಳಾಗಿ ಆಯ್ಕೆ ಮಾಡುವುದೇ ಇದರ ಹಿಂದಿರುವ ಉದ್ದೇಶ. ಫಲಾನುಭವಿಗಳನ್ನು 94 ಶಾಸಕರು ಯಾವ ಅರ್ಹತೆ ಆಧಾರದ ಮೇಲೆ ಆಯ್ಕೆ ಮಾಡಿದ್ದಾರೆ ಎಂಬುದನ್ನು ಅಲ್ಪಸಂಖ್ಯಾತರ ಇಲಾಖೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಅನುದಾನದ ಬಿಡುಗಡೆಯ ತಾರತಮ್ಯ ಮಾಡುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು. ಇದು ಸಹ ಮತ್ತೊಂದು ಅಂಥದ್ದೇ ಹಣ ದುರುಪಯೋಗದ ಕ್ರಮ. ಈ ಅನುದಾನ ಬಿಡುಗಡೆಗೆ ಚುನಾವಣಾ ಆಯೋಗವು ತಕ್ಷಣ ತಡೆ ನೀಡಬೇಕು ಎಂದು ಮನವಿ ಮಾಡಿದರು.

ಶ್ರಮಶಕ್ತಿ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯದ ಕಡುಬಡವರು, ಸಾಂಪ್ರದಾಯಿಕ ಕುಶಲಕರ್ಮಿಗಳು ಹಾಗೂ ವೃತ್ತಿ ಕುಲಕಸುಬುದಾರರು ಆಧುನಿಕ ತಂತ್ರಜ್ಞಾನದ ಬಳಕೆಯಿಂದ ತಮ್ಮ ಸಾಂಪ್ರದಾಯಿಕ ಮಾರುಕಟ್ಟೆಯನ್ನು ಹಾಗೂ ವೃತ್ತಿ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಲು ಅಗತ್ಯವಿರುವ ಆರ್ಥಿಕ ನೆರವು ನೀಡಲಾಗುತ್ತದೆ. ಈ ಸಾಲಕ್ಕೆ ಶೇ.50ರಷ್ಟುಸಬ್ಸಿಡಿ ನೀಡಲಾಗುತ್ತದೆ.

ರಾಹುಲ್‌ ಕೆಟ್ಟಗ್ರಾಮೋಫೋನ್‌:

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೋದಲ್ಲೆಲ್ಲಾ ಭಾಷಣವನ್ನು ಪುನಾರಾವರ್ತನೆ ಮಾಡುತ್ತಿದ್ದು, ಅವರ ಭಾಷಣ ಕೆಟ್ಟುಹೋದ ಗ್ರಾಮೋಫೋನಿನಂತೆ ಎಂದು ಇದೇ ವೇಳೆ ಶೋಭಾ ಲೇವಡಿ ಮಾಡಿದರು.

ರಾಹುಲ್‌ ಗಾಂಧಿಗೆ ಅಭಿವೃದ್ಧಿ ವಿಚಾರದಲ್ಲಿ ಮಾತನಾಡಲು ತಾಕತ್ತು ಇಲ್ಲ. ಹೋದಲ್ಲೆಲ್ಲಾ ಪ್ರಧಾನಿ ಮೋದಿ ಮತ್ತು ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರೋಧಿ ಭಾಷಣವನ್ನಷ್ಟೇ ಮಾಡುತ್ತಿದ್ದಾರೆ. ಕರ್ನಾಟಕದ ಜನರು ಕಾಂಗ್ರೆಸ್‌ಗೆ ಬೆಂಬಲ ನೀಡಿರುವುದು ಮೋದಿ ಮತ್ತು ಯಡಿಯೂರಪ್ಪ ನಿಂದನೆಗೆ ಅಲ್ಲ. ಯಡಿಯೂರಪ್ಪ ಅವರ ಅವಧಿಯಲ್ಲಿ ಆದ ಸಾಧನೆಗಳೇನು, ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿ ಆದ ಸಾಧನೆಗಳೇನು ಎನ್ನುವುದು ಜನರಿಗೆ ತಿಳಿದಿದೆ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರನ್ನು ನಿಂದಿಸುವ ನೀವು ಏನು ಮಾಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು.

loader