ಉಪ ಚುನಾವಣೆಯ ಪ್ರಚಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಗಿನಡಿಯಲ್ಲೇ ಮತದಾರರಿಗೆ ಹಣ, ಹೆಂಡ ಹಂಚಲಾಗುತ್ತಿದೆ. ಇದನ್ನು ತಡೆಗಟ್ಟಬೇಕಾದ ಚುನಾವಣಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ನಂಜನಗೂಡು(ಏ.02): ಉಪ ಚುನಾವಣೆಯ ಪ್ರಚಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಗಿನಡಿಯಲ್ಲೇ ಮತದಾರರಿಗೆ ಹಣ, ಹೆಂಡ ಹಂಚಲಾಗುತ್ತಿದೆ. ಇದನ್ನು ತಡೆಗಟ್ಟಬೇಕಾದ ಚುನಾವಣಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಚುನಾವಣಾ ಅಕ್ರಮ ತಡೆಗಟ್ಟುವಂತೆ ಕೋರಿ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಿ. ರಂದೀಪ್ ಅವರಿಗೆ ಭಾನುವಾರ ಮತ್ತೊಂದು ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದಂತೆ ಕೇಳಿಕೊಂಡು, ಅವರ ಪರ ಕೆಲಸ ಮಾಡುತ್ತಿದೆ. ಜಾತಿ ನೋಡಿ ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಹೀಗಾಗಿ, ಚುನಾವಣಾ ಆಯೋಗವು ಇತ್ತ ಗಮನ ಹರಿಸಿ, ಕೇಂದ್ರ ತಂಡವನ್ನು ಕರೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಚುನಾವಣಾ ಪ್ರಚಾರ ಕಾರ್ಯವನ್ನು ರಾತ್ರಿ 10 ಗಂಟೆಯವರೆಗೂ ನಡೆಸಲು ಅನುಮತಿಯಿದೆ. ಆದರೆ, ಯಡಿಯೂರಪ್ಪ ಅವರು ಮಾದಾಪುರ ಗ್ರಾಮಕ್ಕೆ ರಾತ್ರಿ ೯.೪೫ಕ್ಕೆ ತೆರಳಿದ್ದಾಗ ಮೈಕ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್‌ನವರು ಹಣ ಹಂಚುತ್ತಿದ್ದ ವಿಚಾರವನ್ನು ಬಿಜೆಪಿ ಕಾರ್ಯಕರ್ತರು ಪತ್ತೆ ಹಚ್ಚಿದ ಮಾಹಿತಿ ನೀಡಿದ್ದರೂ, ಚುನಾವಣಾಧಿಕಾರಿಗಳು ವಿಳಂಬ ನೀತಿ ಅನುಸರಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
