ರಾಜ್ಯದಲ್ಲಿರುವ ಮುಖ್ಯಮಂತ್ರಿ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಅಧಿಕಾರಿಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಬೆಂಗಳೂರು : ರಾಜ್ಯದಲ್ಲಿರುವ ಮುಖ್ಯಮಂತ್ರಿ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಅಧಿಕಾರಿಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಮಂಗಳವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಧಿಕಾರಿಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಅಧಿಕಾರಿಗಳಿಗೆ ರಕ್ಷಣೆ ಇಲ್ಲದ ಮೇಲೆ ಸಾಮಾನ್ಯ ಜನತೆಗೆ ಯಾವ ರೀತಿ ಸರ್ಕಾರ ರಕ್ಷಣೆ ನೀಡುತ್ತದೆ ಎಂದು ಪ್ರಶ್ನಿಸಿದರು.

ಕರ್ನಾಟಕ ಐಪಿಎಸ್‌ ಅಸೋಸಿಯೇಷನ್‌ ಸಂಘದ ಅಧ್ಯಕ್ಷರಾಗಿರುವ ಎಡಿಜಿಪಿ ಆರ್‌.ಪಿ.ಶರ್ಮಾ ಅವರು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದ ಉದ್ದೇಶದ ಬಗ್ಗೆ ಗಮನಹರಿಸದೆ ಸರ್ಕಾರ ಅದರಲ್ಲಿ ರಾಜಕೀಯ ಮಾಡುತ್ತಿದೆ. ಐಪಿಎಸ್‌ ಅಧಿಕಾರಿ ಶರ್ಮಾ ಅವರ ಪತ್ರದ ಹಿಂದೆ ಬಿಜೆಪಿ ಕೈವಾಡ ಇದೆ ಎಂಬುದನ್ನು ತಳ್ಳಿ ಹಾಕಿದ ಅವರು, ಎಲ್ಲದಕ್ಕೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.

ಪತ್ರದಲ್ಲಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಬೇರೆಯವರ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದು ದೂರಿದರು.

ಚುನಾವಣಾ ಸಂದರ್ಭದಲ್ಲಿ ಅಧಿಕಾರಿಗಳ ವರ್ಗಾವಣೆ, ಅಧಿಕಾರಿಗಳ ಮೇಲೆ ದೌರ್ಜನ್ಯ ನಿಂತಿಲ್ಲ. ಅಧಿಕಾರಿಗಳ ನಿಗೂಢ ಸಾವು, ಆತ್ಮಹತ್ಯೆ ಮುಂದುವರೆದಿದೆ. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಸಾಮಾನ್ಯ ಜ್ಞಾನ ಸರ್ಕಾರಕ್ಕೆ ಇಲ್ಲ. ಡಿ.ಕೆ.ರವಿ, ಮಲ್ಲಿಕಾರ್ಜುನ್‌ ಬಂಡೆ, ಕಲ್ಲಪ್ಪ ಹಂಡಿಬಾಗ್‌, ಅನುರಾಗ್‌ ತಿವಾರಿ ಇವರ ಸಾವಿನ ರಹಸ್ಯ ಇದುವರೆಗೂ ಹೊರ ಬಂದಿಲ್ಲ. ಮೈಸೂರು ಡಿ.ಸಿ.ಯಾಗಿದ್ದ ಶಿಖಾ, ರಶ್ಮಿ ಮಹೇಶ್‌ ಅವರಂತಹ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲ ಎಂದರು.

ಉದ್ಯಮಿ ಪುತ್ರ ವಿದ್ವತ್‌ ಮೇಲೆ ಮೊಹಮ್ಮದ್‌ ನಲಪಾಡ್‌ ಹಲ್ಲೆ ನಡೆಸಿದ್ದು ನಿಜವಾದರೂ ಪೊಲೀಸರು ಆತನನ್ನು ಬಂಧಿಸಲಿಲ್ಲ. ಆತ ತಾನಾಗಿಯೇ ಬಂದು ಶರಣಾದ. ಆದರೂ ಅಧಿಕಾರಿಯನ್ನು ಅಮಾನತು ಮಾಡಲಾಯಿತು. ಅಧಿಕಾರಿ ಮೇಲೆ ಒತ್ತಡ ತಂದ ಶ್ಯಾಸಕ ಹ್ಯಾರಿಸ್‌ ಮೇಲೆ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.