ಮುಂಬೈ(ಡಿ.24): 2019 ರ ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ ತನ್ನ ಮಿತ್ರ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದೋ ಇಲ್ಲವೋ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.2019ರಲ್ಲಿ ಬಿಜೆಪಿಯೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಬಿಜೆಪಿ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಠಾಕ್ರೆ ಹೇಳಿದ್ದಾರೆ.

ಶಿವಸೇನೆ ಮತ್ತು ಬಿಜೆಪಿ ನಡುವೆ ಹಲವಾರು ವಿಷಯಗಳ ಮೇಲೆ ಭಿನ್ನಮತ ಇದ್ದು, ಪ್ರಮುಖವಾಗಿ ರಾಮ ಮಂದಿರ, ನೋಟ್ ಬ್ಯಾನ್ ಕುರಿತ ಬಿಜೆಪಿ ನಿರ್ಣಯಗಳಿಗೆ ತಮ್ಮ ಸಹಮತವಿಲ್ಲ ಎಂದು ಠಾಕ್ರೆ ಹೇಳಿದ್ದಾರೆ.

ಇದೇ ವೇಳೆ 2019ರ ಲೋಕಸಭೆ ಚುನಾವಣೆವರೆಗೂ ಅಂದರೆ ಕೇಂದ್ರ ಸರ್ಕಾರ ತನ್ನ ಅವಧಿ ಮುಗಿಸುವವರೆಗೂ ಬಿಜೆಪಿ ಜೊತೆಗಿರುವುದಾಗಿ ಹೇಳಿರುವ ಠಾಕ್ರೆ, ಮುಂದಿನ ಲೋಕಸಭೆ ಚುನಾವಣೆಯನ್ನು ಮಾತ್ರ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಇನ್ನು ರಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಮೋದಿ ಸರ್ಕಾರದ ಮೇಲೆ ಹರಿಹಾಯ್ದಿರುವ ಉದ್ಧವ್ ಠಾಕ್ರೆ, ಅನುಭವ ಇಲ್ಲದ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡು ದೇಶಕ್ಕೆ ದ್ರೋಹ ಬಗೆಯಲಾಗಿದೆ ಎಂದು ಕಿಡಿ ಕಾರಿದ್ದಾರೆ.

ಸೈನಿಕರ ವೇತನ ಹೆಚ್ಚಳ ಮಾಡದ ಮೋದಿ ಸರ್ಕಾರ ಶಸ್ತ್ರಾಸ್ತ್ರ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ಮಾಡಿದೆ ಎಂದೂ ಉದ್ಧವ್ ಠಾಕ್ರೆ ಗಂಭೀರ ಆರೋಪ ಮಾಡಿದ್ದಾರೆ.