2 ತಿಂಗಳ ಮಗುವಿನ ಪಾಸ್‌ಪೋರ್ಟ್​ಗೆ ಪೋಲಿಸರ ಪರಿಶೀಲನೆಗೆ ಆಕ್ಷೇಪ ವ್ಯಕ್ತಪಡಿಸಿ ಸುಷ್ಮಾ ಸ್ವರಾಜ್‌ಗೆ ಟ್ವೀಟ್ ತಕ್ಷಣ ಸ್ಪಂದಿಸಿದ ವಿದೇಶಾಂಗ ಇಲಾಖೆ ಸಚಿವೆ; 3 ದಿನದಲ್ಲೇ ಪಾಸ್‌ಪೋರ್ಟ್ ಕೈಗೆ

ಬೆಂಗಳೂರು: 2 ತಿಂಗಳ ಮಗುವಿನ ಪಾಸ್‌ಪೋರ್ಟ್​ಗೆ ಪೋಲಿಸರ ಪರಿಶೀಲನೆಗೆ ಆಕ್ಷೇಪ ವ್ಯಕ್ತಪಡಿಸಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ಗೆ ಟ್ವೀಟ್ ಮಾಡಿದ್ದ ಶಿವಮೊಗ್ಗ ಮಹಿಳೆಗೆ ಕೊನೆಗೂ ಜಯ ಸಿಕ್ಕಿದೆ.

ಮಗುವಿನ ತಾಯಿಯ ಟ್ವೀಟ್‌ಗೆ ಕೇಂದ್ರ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ತಕ್ಷಣ ಸ್ಪಂದಿಸಿದ್ದು, ಇದೀಗ ಮೂರೇ ದಿನಕ್ಕೆ ಮಗುವಿನ ಪಾಸ್‌ಪೋರ್ಟ್ ಕೈಸೇರಿದೆ. 

ಶಿವಮೊಗ್ಗ ಮೂಲದ ಟೆಕ್ಕಿ ಮಹಿಳೆ ಅಕ್ಷತಾ ಎಂಬುವರು ಜರ್ಮನಿಯಲ್ಲಿರುವ ಪತಿಯ ಬಳಿ ಹೋಗಲು ಶಿವಮೊಗ್ಗದ ಪಾಸ್‌ಪೋರ್ಟ್ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ಸಲ್ಲಿಸಿ ಒಂದೂವರೆ ತಿಂಗಳಾದರೂ ಪಾಸ್ ಪೋರ್ಟ್ ಮಾತ್ರ ಕೈ ಸೇರಿರಲಿಲ್ಲ. ತಮ್ಮ ಎರಡು ತಿಂಗಳ ಮಗುವಿಗೆ ಪೊಲೀಸ್ ವೆರಿಫಿಕೇಷನ್ ಮಾಡಬೇಕೆಂದು ಅಧಿಕಾರಿಗಳು ಸಮಯ ವಿಳಂಬ ಮಾಡಿದ್ದರು.

Scroll to load tweet…

ಇದರಿಂದ ಬೇಸರಗೊಂಡ ಮಹಿಳೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿ ತಮ್ಮ ಅತೃಪ್ತಿ ಹೊರಹಾಕಿದ್ದರು. ನಿಮ್ಮ ಕಾನೂನುಗಳು ಹಳೆಯದಾಗಿವೆ, ಚಿಕ್ಕ ಮಗು ಯಾವ ಅಪರಾಧ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದರು. 2 ತಿಂಗಳ ಮಗುವಿಗೆ ಪೋಲಿಸ್ ಸಿಬ್ಬಂದಿಯೊಬ್ಬರು ಬಂದು ನೆರೆ ಹೊರೆಯವರನ್ನು ಸಹಿ ಹಾಕಲು ಕೇಳುತ್ತಿದ್ದಾರೆ. ಇದರಿಂದ ನನಗೂ ನನ್ನ ಮಗುವಿಗೂ ಮಾನಸಿಕ ಒತ್ತಡವುಂಟಾಗಿದೆ ಎಂದು ಟ್ವಿಟ್ ಮಾಡಿದ್ದರು.

ಮೇ 20ರ ಮಧ್ಯಾಹ್ನ ಮಾಡಿದ ಈ ಟ್ವೀಟ್ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಯಾವಾಗ ಅಕ್ಷತಾ ಟ್ವೀಟ್ ಮೂಲಕ ಮಗುವಿನ ಪಾಸ್ ಪೋರ್ಟ್​ ಸಮಸ್ಯೆಯನ್ನು ಹೇಳಿಕೊಂಡರೋ ತಕ್ಷಣವೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಖುದ್ದಾಗಿ ಪ್ರತಿಕ್ರಿಯೆ ನೀಡಿ ವಿವರ ಪಡೆದಿದ್ದರು. 

ನಂತರ ಸಂಜೆಯೊಳಗೆ ಬೆಂಗಳೂರು ಪ್ರಾದೇಶಿಕ ಕಚೇರಿ ಕೂಡ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿ ಎರಡು ದಿನಗಳಲ್ಲಿ ಪಾಸ್‌ಪೋರ್ಟ್ ಮನೆ ಸೇರಲಿದೆ ಎಂದು ಭರವಸೆ ನೀಡಿದ್ದರು. ಅದರಂತೆ ಟ್ವೀಟ್ ಮಾಡಿ ಮೂರೇ ದಿನಕ್ಕೆ 2 ತಿಂಗಳ ಗಂಡು ಮಗು ದಕ್ಷ್ ದರ್ಶನ್ ಪಾಸ್ ಪೋರ್ಟ್ ಅಕ್ಷತಾ ಅವರ ಕೈ ಸೇರಿದೆ.

ಇದರೊಂದಿಗೆ ಅಕ್ಷತಾ ಸಹೋದರಿಯ 5 ತಿಂಗಳ ಹೆಣ್ಣು ಮಗಳು ತ್ರಿಷಿಕಾ ಪಾಸ್‌ಪೋರ್ಟ್​ ಕೂಡ ಪೋಲಿಸ್ ವೆರಿಫಿಕೇಶನ್ ಇಲ್ಲದೇ ಕೈ ಸೇರಿದ್ದು ಕುಟುಂಸ್ಥರು ಸಂತೋಷಗೊಂಡಿದ್ದಾರೆ.

Scroll to load tweet…

ಒಟ್ಟಿನಲ್ಲಿ ಟ್ವಿಟ್ಟರ್ ಮೂಲಕ ತಮ್ಮ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮೇಡಂ ಗೆ ಅಕ್ಷತಾ ತಮ್ಮ ಧನ್ಯವಾದ ಹೇಳಿದ್ದಾರೆ. ಈ ಮೂಲಕ ಸುಷ್ಮಾ ಸ್ವರಾಜ್ ಸಾಮಾನ್ಯ ನಾಗರಿಕರ ಸಮಸ್ಯೆಗೂ ತುರ್ತು ಸ್ಪಂದನೆ ಮಾಡಿ ದೇಶದ ಗಮನ ಸೆಳೆದಿದ್ದಾರೆ.