ಶಿವಮೊಗ್ಗ (ಜೂ. 23): ಶರಾವತಿ ಹಿನ್ನೀರಿನಿಂದ ಬೆಂಗಳೂರಿಗೆ ಕುಡಿಯಲು ನೀರು ತೆಗೆದುಕೊಂಡು ಹೋಗುವ ಯೋಜನೆಗೆ ದಿನಕಳೆದಂತೆ ಮಲೆನಾಡು ಭಾಗದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಅವೈಜ್ಞಾನಿಕವಾದ ಯೋಜನೆ. ಬೆಂಗಳೂರು ಉದ್ಧಾರವಾದರೆ ಇಡೀ ರಾಜ್ಯ ಉದ್ಧಾರವಾದಂತೆ ಎಂದು ರಾಜ್ಯ ಸರ್ಕಾರ ಭಾವಿಸಿದ್ದರೆ ಅದು ತಪ್ಪು. ಬೆಂಗಳೂರಿಗೆ ಅಗತ್ಯವಾಗಿರುವ ನೀರನ್ನು ಹೊಂದಲು ಅಲ್ಲಿಯೇ ಸಂಪನ್ಮೂಲವಿದೆ. ಅದಕ್ಕೆ ಆದ್ಯತೆ ನೀಡಬೇಕು. ಕೆರೆ ಒತ್ತುವರಿ ತೆರವುಗೊಳಿಸಬೇಕು. ಮಳೆ ನೀರು ಹಿಡಿದಿಡುವ ಪ್ರಯತ್ನವಾಗಬೇಕು ಎಂದು ಹೇಳಿದರು.

ಪರಿಸರ ಉಳಿಸುವ ಯೋಜನೆಯನ್ನು ಸರ್ಕಾರ ರೂಪಿಸಬೇಕೇ ಹೊರತು, ಆರ್ಥಿಕವಾಗಿ ನಷ್ಟವಾಗುವ, ದೂರದೃಷ್ಟಿಯಿಲ್ಲದ ಇಂತಹ ಯೋಜನೆಗಳನ್ನು ರೂಪಿಸಬಾರದು. ಲಿಂಗನಮಕ್ಕಿ ಜಲಾಶಯ ವಿದ್ಯುತ್‌ ಉತ್ಪಾದನೆಗೆ ಹೆಸರಾಗಿದೆ. ಒಂದು ವೇಳೆ ಬೆಂಗಳೂರಿಗೆ ನೀರು ಪೂರೈಕೆ ಮಾಡುವುದಾದರೆ ಆ ಯೋಜನೆಯಿಂದ ಉತ್ಪಾದನೆ ಕೂಡ ಕುಂಠಿತವಾಗಲಿದೆ. ಹೀಗಾಗಿ ಶರಾವತಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಅವೈಜ್ಞಾನಿಕ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿದರು.

ಜು.10 ರಂದು ಶಿವಮೊಗ್ಗ ಬಂದ್‌:

ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆಗೆ ಸಂಬಂಧಪಟ್ಟಂತೆ ಡಿಸಿಎಂ ಡಾ.ಜಿ.ಪರಮೇಶ್ವರ್‌ ಡಿಪಿಆರ್‌ ತಯಾರಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಸಾಗರದ ಸರ್ಕಾರಿ ನೌಕರರ ಭವನದಲ್ಲಿ ಸಮಾಲೋಚನಾ ಸಭೆ ಕರೆಯಲಾಯಿತು. ಯೋಜನೆಯನ್ನು ವಿರೋಧಿಸಿ ಮೊದಲ ಹಂತದಲ್ಲಿ ಜು.10ರಂದು ಶಿವಮೊಗ್ಗ ಜಿಲ್ಲೆ ಬಂದ್‌ಗೆ ಕರೆ ನೀಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ರಂಗಕರ್ಮಿ, ದೇಶಿ ಚಿಂತಕ ಪ್ರಸನ್ನ, ಸಾಹಿತಿ ನಾ.ಡಿಸೋಜ, ಇಂಧನ ವಿಷಯ ತಜ್ಞ ಶಿವಮೊಗ್ಗದ ಶಂಕರ ಶರ್ಮ ಸೇರಿದಂತೆ ಹಲವರು ಭಾಗಿಯಾಗಿದ್ದರು.