"ಪೊಲೀಸ್ ಇಲಾಖೆ ಎಂತಹುದೇ ಘಟನೆ ಎದುರಾದರೂ ಅದನ್ನು ಹತೋಟಿಗೆ ತರುವಲ್ಲಿ ಈಗಾಗಲೆ ಸಿದ್ಧವಾಗಿದೆ. ಶಾಂತಿಯುತವಾಗಿ ಗಣಪತಿ ವಿಸರ್ಜನೆ ನಡೆಯಬೇಕು ಎಂದ ಅವರು ಸಮಾಜದಲ್ಲಿ ಅಹಿತಕರ ಘಟನೆ ಹುಟ್ಟುಹಾಕಲು ಪ್ರಯತ್ನಿಸಿದರೆ ಅಂತಹವರ ವಿರುದ್ದ ಇಲಾಖೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ"
ಶಿವಮೊಗ್ಗ(ಸೆ.04): ನಾಳೆ (ಸೆ.5 ರಂದು) ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಅಭಿನವ ಖರೆ ತಿಳಿಸಿದರು.
ನಗರದಲ್ಲಿಂದು ಪ್ರೆಸ್'ಟ್ರಸ್ಟ್'ಯಿಂದ ಆಯೋಜಿಸಲಾಗಿದ್ದ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಮೂರು ತಿಂಗಳ ಹಿಂದಿನಿಂದಲೇ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆಯಲ್ಲಿ ಬಂದೋಬಸ್ತ್ ಕುರಿತು ಈಗಾಗಲೇ ಸಿದ್ಧತೆ ಕೈಗೊಂಡಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದ್ದು, ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗಿದ್ದು ಎಂದು ತಿಳಿಸಿದರು.
ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ, 12 ಡಿವೈಎಸ್ಪಿ, 23 ಪೊಲೀಸ್ ಇನ್ಸ್‌ಪೆಕ್ಟರ್, 55 ಸಬ್,ಇನ್ಸ್,ಪೆಕ್ಟರ್, 160 ಎಎಸೈ, 1500 ಪೊಲೀಸ್ ಪೇದೆಗಳು, 570 ಹೋಂ ಗಾರ್ಡ್‌ಗಳು, 2 ಎಎನ್'ಎಸ್ ತುಕಡಿ, 1 ಕ್ಯೂಆರ್'ಬಿ ತುಕಡಿ, 23 ಡಿಎಆರ್ ತುಕಡಿ, ಕೆಎಸ್'ಆರ್'ಪಿ ಸಿಬ್ಬಂದಿ ಜೊತೆಗೆ 600ಕ್ಕೂ ಹೆಚ್ಚು ಸ್ವಯಂ ಸೇವಕರು ಹಾಗೂ ನಿವೃತ್ತಿ ಹೊಂದಿರುವ ಪೊಲೀಸ್ ಅಧಿಕಾರಿಗಳನ್ನು ಬಂದೋಬಸ್ತ್'ಗೆ ನಿಯೋಜನೆ ಮಾಡಲಾಗುತ್ತದೆ ಎಂದರು.
ಆಯಾ ಸೂಕ್ಷ್ಮ ಸ್ಥಳಗಳಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಸಿಸಿ ಕ್ಯಾಮೆರಾ, ವೀಡಿಯೋ ಚಿತ್ರೀಕರಣ ನಡೆಸಲಾಗುವುದು. ಅಲ್ಲದೇ ನಗರದ ಆಯಕಟ್ಟಿನ ಸೂಕ್ತ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. 50 ವಾಹನಗಳು ಬಂದೋಬಸ್ತ್'ಗೆ ನಿಯೋಜನೆಗೊಂಡಿವೆ. ಇವುಗಳ ನಗರಾದ್ಯಂತ ಸಂಚರಿಸಲಿದ್ದು, 22 ಚೀತಾ ವಾಹನಗಳ ಬಳಕೆ ಮಾಡಿಕೊಳ್ಳಲಾಗುವುದು. 2 ಡ್ರೋಣ್ ಕ್ಯಾಮರಾ ಮೂಲಕ ಚಿತ್ರೀಕರಣ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಪೊಲೀಸ್ ಇಲಾಖೆ ಎಂತಹುದೇ ಘಟನೆ ಎದುರಾದರೂ ಅದನ್ನು ಹತೋಟಿಗೆ ತರುವಲ್ಲಿ ಈಗಾಗಲೆ ಸಿದ್ಧವಾಗಿದೆ. ಶಾಂತಿಯುತವಾಗಿ ಗಣಪತಿ ವಿಸರ್ಜನೆ ನಡೆಯಬೇಕು ಎಂದ ಅವರು ಸಮಾಜದಲ್ಲಿ ಅಹಿತಕರ ಘಟನೆ ಹುಟ್ಟುಹಾಕಲು ಪ್ರಯತ್ನಿಸಿದರೆ ಅಂತಹವರ ವಿರುದ್ದ ಇಲಾಖೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವರು ಇಲ್ಲಸಲ್ಲದ ಗಾಳಿ ಸುದ್ದಿ ಹರಡುತ್ತಿದ್ಧಾರೆ. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಬಾರದು. ಗಾಳಿ ಸುದ್ದಿಗಳಿಗೆ ಸಾರ್ವಜನಿಕರು ಕಿವಿಕೊಡಬಾರದು. ಇಲ್ಲಸಲ್ಲದ ಸುದ್ದಿ ಹಬ್ಬಿಸಿದರೆ ಅಂತಹವರ ವಿರುದ್ದ ಇಲಾಖೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗಣಪತಿ ಮೆರವಣಿಗೆ ಹಿನ್ನೆಲೆಯಲ್ಲಿ ಸೆ. 5 ರಂದು ನಗರಪಾಲಿಕೆ ವ್ಯಾಪ್ತಿಯ ಎಲ್ಲ ಶಾಲಾ ಕಾಲೇಜುಗಳಿಗೂ ರಜೆ ಘೋಷಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸುವ ಶಾಲಾ ಕಾಲೇಜು ಆಡಳಿತ ಮಂಡಳಿ ವಿರುದ್ದ ಕ್ರಮ ಜರುಗಿಸಲಾಗುವುದು. ಯಾವುದೇ ಅಹಿತಕರ ಘಟನೆ ನಡೆದರೆ ಆಡಳಿತ ಮಂಡಳಿಯನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಕಾರ್ಯದರ್ಶಿ ಶಿ.ವಿ. ಸಿದ್ದಪ್ಪ ಉಪಸ್ಥಿತರಿದ್ದರು.
