ದೇಗುಲದ ಗಂಟೆ ಬಾರಿಸುವ ಹಸುವಿನ ವಿಡಿಯೋ ವೈರಲ್
ದೇಗುಲದ ಗಂಟೆ ಬಾರಿಸುವ ಹಸುವಿನ ವಿಡಿಯೋ ವೈರಲ್| ಭದ್ರಾವತಿಯ ಡಿ.ಬಿ. ಹಳ್ಳಿಯಲ್ಲಿ ಘಟನೆ
ಶಿವಮೊಗ್ಗ[ಏ.28]: ಹಸುವೊಂದು ದೇವಾಲಯಕ್ಕೆ ನಡೆದು ಬಂದು, ಹೊರಭಾಗದಲ್ಲಿ ನೇತು ಹಾಕಿದ್ದ ಗಂಟೆ ಬಾರಿಸಿ ವಾಪಸ್ಸು ತೆರಳಿದ ಕೌತುಕ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಡಿ.ಬಿ.ಹಳ್ಳಿಯಲ್ಲಿ ವಾರದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ದೃಶ್ಯಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿವೆ. ಡಿ.ಬಿ.ಹಳ್ಳಿಯ ವೀರಭದ್ರಸ್ವಾಮಿ ಹಾಗೂ ಮುಗ್ದ ಸಂಗಮೇಶ್ವರ ಸ್ವಾಮೀಜಿಗಳ ಗದ್ದಿಗೆಯಲ್ಲಿ ಘಟನೆ ನಡೆದಿದೆ. ಗ್ರಾಮದ ಮಂಜಪ್ಪ ಅವರಿಗೆ ಸೇರಿದ ಹಸು ಗಂಟೆ ಬಾರಿಸಿದೆ.
ಏ.20ರಂದು ರಾತ್ರಿ 8ರ ಸುಮಾರಿಗೆ ದೇವಸ್ಥಾನ ಮತ್ತು ಕಟ್ಟೆಯ ಮೇಲೆ ಹಲವು ಭಕ್ತರಿದ್ದರು. ಎಲ್ಲರ ಎದುರೇ ಹಸು ನೇರವಾಗಿ ಬಂದು ಗಂಟೆ ಬಾರಿಸಿ ಹೋಗಿದೆ. ಇದನ್ನು ಕಂಡು ಅಲ್ಲಿದ್ದ ಭಕ್ತರು ಆಶ್ಚರ‍್ಯಚಕಿತರಾಗಿದ್ದಾರೆ. ಅಲ್ಲದೆ ಬೇರೆಯವರಿಗೂ ಹೇಳಿದ್ದಾರೆ. ಆದರೆ ಯಾರೂ ನಂಬಲಿಲ್ಲ. ಬಳಿಕ ದೇಗುಲದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದ್ದನ್ನು ಕಂಡಾಗ ಕೌತುಕಗೊಂಡಿದ್ದಾರೆ.
12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ಆದಾಗ ಶರಣ ದೊಂಬರ ಚನ್ನಮ್ಮ ಈ ಊರಿಗೆ ಬಂದು ನೆಲೆಸಿದರು ಎನ್ನಲಾಗಿದ್ದು, ಈ ಕಾರಣದಿಂದ ಈ ಗ್ರಾಮಕ್ಕೆ ದೊಂಬರ ಭೈರನಹಳ್ಳಿ ಎಂದು ಹೆಸರಿಡಲಾಗಿದೆ. ಆಗಿನ ಕಾಲದಿಂದಲೂ ಈ ದೇವಾಲಯದಲ್ಲಿ ಪವಾಡಗಳು ನಡೆಯುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಅಪ್ಪಣೆ ಕೇಳುವ ವಿಷಯದಲ್ಲಿ ಕೂಡ ಈ ದೇವಾಲಯ ಖ್ಯಾತಿ ಪಡೆದಿದೆ. ಭಕ್ತರು ತಮ್ಮ ಬೇಡಿಕೆಗಳನ್ನು ದೇವರ ಮುಂದೆ ಮಂಡಿಸಿದಾಗ ಎಡ ಅಥವಾ ಬಲದಲ್ಲಿ ಹೂವು ಬೀಳುವ ಆಧಾರದಲ್ಲಿ ಕೇಳಿಕೆ ನಡೆಯುತ್ತದೆ.