ಶಿವಮೊಗ್ಗ[ಅ.25]: ಶರಾವತಿ ಡೆಂಟಲ್ ಕಾಲೇಜು ಈಡಿಗ ಸಮಾಜದ ಆಸ್ತಿ ಎಂದು ಹೇಳುತ್ತಿರುವ ಶಾಸಕ ಕುಮಾರ ಬಂಗಾರಪ್ಪ 10 ವರ್ಷಗಳ ಕಾಲ ಕಾಲೇಜಿನ ಅಧ್ಯಕ್ಷರಾಗಿದ್ದಾಗ ಬಾಯಲ್ಲಿ ಕಡುಬು ಇಟ್ಟುಕೊಂಡಿದ್ದರಾ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹರಿಹಾಯ್ದಿದ್ದಾರೆ.

ಇದನ್ನು ಓದಿ: ಬಸ್ ಸ್ಟ್ಯಾಂಡ್ ರಾಘು ಸೋಲಿಸಲು ಗುದ್ದಲಿ ಗೋಪಾಲ ಪಣ!

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶರಾವತಿ ಡೆಂಟಲ್ ಕಾಲೇಜು ಬಂಗಾರಪ್ಪನವರ ಕುಟುಂಬದ ಆಸ್ತಿ. ಅದು ಈಡಿಗ ಸಮುದಾಯದ ಅಸ್ತಿಯಲ್ಲ, ಕುಮಾರ್ ಬಂಗಾರಪ್ಪ ಹಾಗೂ ಹರತಾಳು ಹಾಲಪ್ಪ ರಾಜಕೀಯ ಪ್ರೇರಿತ ಆರೋಪ ಮಾಡುತ್ತಿದ್ದಾರೆ ಎಂದು ಬೇಳೂರು ಅಸಮಾಧಾನ ಹೊರಹಾಕಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿಯವರು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಮಧುಬಂಗಾರಪ್ಪನವರು ಅಭ್ಯರ್ಥಿಯಾದ ಬಳಿಕ ಬಿಜೆಪಿಗೆ ನಡುಕ ಹುಟ್ಟಿದೆ. ಮುಂದಿನ‌ ಚುನಾವಣೆ ವೇಳೆಗೆ ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ಸ್ವಾಮಿರಾವ್ ಸೇರಿದಂತೆ ಇನ್ನು ಹಲವರು ಕಳೆದು ಹೋಗಲಿದ್ದಾರೆ ಎಂದು ಬೇಳೂರು ಹೇಳಿದ್ದಾರೆ.

ಇದನ್ನು ಓದಿ: ದಕ್ಷಿಣದಲ್ಲಿ ಬಿಜೆಪಿ ಹೆಬ್ಬಾಗಿಲು ಬಂದ್

ಯಡಿಯೂರಪ್ಪ ಮುಖ್ಯಮಂತ್ರಿಯಾದ ವೇಳೆ ಮಕ್ಕಳು ಹಲವಾರು ‌ಕಡತಗಳಿಗೆ ಪೊರ್ಜರಿ ಮಾಡಿದ್ದರು. ತಮ್ಮ ಮಕ್ಕಳು ಮಾಡಿದ ತಪ್ಪಿಗೆ ಜೈಲಿಗೆ ಹೋಗಬೇಕಾಯಿತು. ಕಳೆದ ಬಾರಿಯ ಚುನಾವಣೆಯಲ್ಲಿ ಯಡಿಯೂರಪ್ಪ ಭ್ರಷ್ಟಾಚಾರದ ಹಣವನ್ನ ಹಂಚಿ ಗೆಲುವನ್ನು ಸಾಧಿಸಿದ್ದರು. ಸಾಗರದ ತುಮರಿ ಸೇತುವೆ ವಿಚಾರದಲ್ಲಿ ಸುಳ್ಳು ಡೊಂಗಿ ಮಾತುಗಳನ್ನ ಬಿಜೆಪಿಯವರು ಆಡುತ್ತಿದ್ದಾರೆ. ಅಲ್ಲಿನ ಮುಗ್ದ ಜನರಿಗೆ ಸುಳ್ಳು ಭರವಸೆ ನೀಡಿ ವಂಚಿಸುತ್ತಿದ್ದಾರೆ. ಇನ್ನು ಹತ್ತು ಚುನಾವಣೆ ಮಾಡುವಷ್ಟು ಭ್ರಷ್ಟಾಚಾರದ ಹಡಬೆ ದುಡ್ಡನ್ನ ಬಿಎಸ್’ವೈ ಇಟ್ಟುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.