Asianet Suvarna News Asianet Suvarna News

ದಕ್ಷಿಣದಲ್ಲಿ ಬಿಜೆಪಿ ಹೆಬ್ಬಾಗಿಲು ಬಂದ್

ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಗೆಲವಿಗೆ ಶ್ರಮಿಸುತ್ತೇವೆಂಬ ಪ್ರತಿಜ್ಞೆ ಕೈಗೊಳ್ಳಬೇಕು. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮಧುಬಂಗಾರಪ್ಪ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಮನೆ ಮನೆಗೆ ತೆರಳಿ ಅಭ್ಯರ್ಥಿ ಪರ ಮತ ಯಾಚಿಸಬೇಕು - ಹೆಚ್.ಡಿ.ದೇವೇಗೌಡ

JDS and Congress coalition will shut doors on BJP in South
Author
Bengaluru, First Published Oct 24, 2018, 4:56 PM IST

ಶಿವಮೊಗ್ಗ[ಅ.24]: ಕರ್ನಾಟಕದ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿ ತೆರೆದಿರುವ ಹೆಬ್ಬಾಗಿಲನ್ನು ಮುಚ್ಚಿಸುತ್ತೇವೆಂಬ ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಟ ಎಚ್. ಡಿ. ದೇವೇಗೌಡ ಕರೆ ನೀಡಿದರು.

ನಗರದ ಗಾಯತ್ರಿ ಕಲ್ಯಾಣಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಆಡಳಿತ ನೋಡುತ್ತಿದ್ದೇವೆ. ಅನೇಕ ರಾಜ್ಯಗಳಲ್ಲಿ ಸದ್ಯದ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇದನ್ನು ವಿಮರ್ಶೆ ಮಾಡಬೇಕು. ಕರ್ನಾಟಕದ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿ ತೆರೆದ ಹೆಬ್ಬಾಗಿಲನ್ನು ಮುಚ್ಚಿಸಬೇಕಿದೆ ಎಂದು ಹೇಳಿದರು.

ದೇಶದ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಮೈತ್ರಿ ಅನಿವಾರ್ಯವಾಗಿದೆ. ಮುಂದೆ ದೇಶದಲ್ಲಿ ಸಂಭವಿಸಬಹುದಾದ ಅನಾಹುತ ಗಳಿಗೆ ಅವಕಾಶ ಮಾಡಿಕೊಡದಂತೆ ಬಿಜೆಪಿ ಹೊರತಾದ ಮಿಕ್ಕಲ್ಲಾ ಪಕ್ಷಗಳು ಒಂದಾಗಿ ಹೋರಾಟ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಯೊಂದಿಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, 5 ಕ್ಷೇತ್ರದಲ್ಲಿ ಗೆಲುವು ಸಾಧಿಸುವುದರ
ಮೂಲಕ ರಾಷ್ಟ್ರ ರಾಜಕಾರಣಕ್ಕೆ ಸ್ಪಷ್ಟ ಸಂದೇಶ ರವಾನಿಸಬೇಕೆಂದರು.

ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಗೆಲವಿಗೆ ಶ್ರಮಿಸುತ್ತೇವೆಂಬ ಪ್ರತಿಜ್ಞೆ ಕೈಗೊಳ್ಳಬೇಕು. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮಧುಬಂಗಾರಪ್ಪ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಮನೆ ಮನೆಗೆ ತೆರಳಿ ಅಭ್ಯರ್ಥಿ ಪರ ಮತ ಯಾಚಿಸಬೇಕೆಂದು ಮನವಿ ಮಾಡಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರೇ ಕಾರಣ. ಇದರಿಂದ ರಾಷ್ಟ್ರ ರಾಜಕೀಯದಲ್ಲಿ ಹೊಸ ಪರಿಕಲ್ಪನೆ ಪ್ರಾರಂಭವಾಗಿದೆ. ಆ ಮೂಲಕ ಕೇಂದ್ರದಲ್ಲಿನ ಜನವಿರೋಧಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕೆಂಬ ಉದ್ದೇಶದಿಂದ ಬಿಜೆಪಿ ಹೊರತು ಮಿಕ್ಕೆಲ್ಲಾ ಪಕ್ಷಗಳು ಒಟ್ಟುಗೂಡಬೇಕೆಂಬುದಕ್ಕೂ ದೇವೇಗೌಡರೇ ರೂವಾರಿ ಎಂದು ಹೇಳಿದರು.

ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಪ್ರಜಾ ತಂತ್ರ ವ್ಯವಸ್ಥೆಯ ಬುಡಕ್ಕೆ ಕೊಡಲಿ ಏಟು ಹಾಕಿದಾದ್ದಾರೆ. 5 ವರ್ಷ ಉತ್ತಮವಾಗಿ ಕೆಲಸ ನಿರ್ವಹಿಸಿ ಎಂದು ಮತದಾರರು ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಿ ಕಳಿಸಿದರೆ ಸಂಸದ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವ ಮೂಲಕ ಮತದಾರರಿಗೆ ಅನ್ಯಾಯ ಬಗೆದಿದ್ದಾರೆ ಎಂದು ದೂರಿದರು.

ಪ್ರಜಾತಂತ್ರ ವ್ಯವಸ್ಥೆಗೆ ಯಡಿಯೂರಪ್ಪ ಅಪಚಾರ ಎಸಗಿದ್ದಾರೆ. ಇಂತಹ ಪ್ರಜಾತಂತ್ರ ವಿರೋಧಿಗಳನ್ನು ಬಗ್ಗು ಬಡಿಯುವ ಮೂಲಕ ತಕ್ಕ ಪಾಠ ಕಲಿಸಬೇಕಿದೆ.  ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಟಿಸಬೇಕು ಎಂದು ಕರೆ ನೀಡಿದರು.

ಮೈತ್ರಿ ಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ, ರಾಜ್ಯ, ರಾಷ್ಟ್ರ ರಾಜಕೀಯದಲ್ಲಿ ಬದಲಾವಣೆ ತರಬೇಕಿದೆ. ವರಿಷ್ಠರು ಕೈಗೊಂಡಿರುವ ತೀರ್ಮಾನಕ್ಕೆ ಇನ್ನು ಹೆಚ್ಚಿನ ಶಕ್ತಿ ಕೊಡಬೇಕಿದೆ. ಎರಡು ಪಕ್ಷಗಳ ಕಾರ್ಯಕರ್ತರು ತಮ್ಮ ಗೆಲುವಿಗೆ ಪ್ರಯತ್ನಿಸಬೇಕೆಂದು ಮನವಿ ಮಾಡಿದರು. 

ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀ.ನಾ. ಶ್ರೀನಿವಾಸ್, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್. ಎಂ. ಮಂಜುನಾಥ ಗೌಡ, ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಮಾಜಿ ಶಾಸಕರಾದ ಎಂ.ಜೆ. ಅಪ್ಪಾಜಿಗೌಡ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ವಡ್ನಾಳ್ ರಾಜಣ್ಣ, ಶಾರದಾ ಪೂರ‌್ಯನಾಯ್ಕ, ಶಾಂತನಗೌಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಮತ್ತಿತರರು ಉಪಸ್ಥಿತರಿದ್ದರು.
 

Follow Us:
Download App:
  • android
  • ios