ನಿನ್ನೆ ರಾತ್ರಿ ಗಂಜಿ, ಅನ್ನ, ತಿಳಿಸಾರು, ಫಲಾಹಾರ ಸೇವಿಸಿದ ಶ್ರೀಗಳು ಇಂದು ಸ್ವಲ್ಪ ಲವಲವಿಕೆಯಿಂದಿದ್ದು ದಿನಪತ್ರಿಕೆಯನ್ನೂ ಓದಿದರು. ಅವರ ಶಿಷ್ಯವೃಂದವು ಮಠದಿಂದ ಲಿಂಗ ಪೂಜಾ ಸಾಮಗ್ರಿ ಮತ್ತು ಪ್ರಸಾದವನ್ನು ತಂದುಕೊಟ್ಟರು. 110 ವರ್ಷದ ಶ್ರೀಗಳು ಇಂದು ಬೆಳಗ್ಗೆ 7 ಗಂಟೆಗೆ ಆಸ್ಪತ್ರೆಯಲ್ಲೇ ಲಿಂಗಪೂಜೆ ಮಾಡಿದರು.
ಬೆಂಗಳೂರು(ಮೇ 13): ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮಠಕ್ಕೆ ವಾಪಸ್ಸಾಗುತ್ತಿದ್ದಾರೆ. ಕೆಂಗೇರಿಯಲ್ಲಿ ಇರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ವೈದ್ಯರು ಡಿಸ್ಚಾರ್ಜ್ ಮಾಡಲು ನಿರ್ಧರಿಸಿದರೆನ್ನಲಾಗಿದೆ. ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆಯಾಗಿದ್ದರೂ ಇನ್ನಷ್ಟು ಕಾಲ ಅವರಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲು ವೈದ್ಯರು ಬಯಸಿದ್ದರು. ಆದರೆ, ತಮಗೆ ಚಿಕಿತ್ಸೆ ಆಗುವುದಿದ್ದರೆ ಸಿದ್ದಗಂಗಾ ಮಠದಲ್ಲೇ ಆಗಲಿ ಎಂದು ಶ್ರೀಗಳು ಪಟ್ಟು ಹಿಡಿದಿದ್ದರಿಂದ ವೈದ್ಯರು ಡಿಸ್ಚಾರ್ಜ್ ಮಾಡಬೇಕಾಯಿತೆನ್ನಲಾಗಿದೆ.
ಇದೇ ವೇಳೆ, ಬಿಜಿಎಸ್ ಆಸ್ಪತ್ರೆ ವೈದ್ಯರ ತಂಡವೊಂದು ತುಮಕೂರಿನ ಸಿದ್ದಗಂಗಾ ಮಠದಲ್ಲೇ ಇದ್ದು ನಿತ್ಯವೂ ಆರೋಗ್ಯ ಪಾಲನೆ ಮಾಡಲಿದೆ ಎಂದು ಬಿಜಿಎಸ್ ಆಸ್ಪತ್ರೆಯ ವೈದ್ಯ ಡಾ. ರವೀಂದ್ರ ತಿಳಿಸಿದ್ದಾರೆ.
ಲಿಂಗಪೂಜೆ
ನಿನ್ನೆ ರಾತ್ರಿ ಗಂಜಿ, ಅನ್ನ, ತಿಳಿಸಾರು, ಫಲಾಹಾರ ಸೇವಿಸಿದ ಶ್ರೀಗಳು ಇಂದು ಸ್ವಲ್ಪ ಲವಲವಿಕೆಯಿಂದಿದ್ದು ದಿನಪತ್ರಿಕೆಯನ್ನೂ ಓದಿದರು. ಅವರ ಶಿಷ್ಯವೃಂದವು ಮಠದಿಂದ ಲಿಂಗ ಪೂಜಾ ಸಾಮಗ್ರಿ ಮತ್ತು ಪ್ರಸಾದವನ್ನು ತಂದುಕೊಟ್ಟರು. 110 ವರ್ಷದ ಶ್ರೀಗಳು ಇಂದು ಬೆಳಗ್ಗೆ 7 ಗಂಟೆಗೆ ಆಸ್ಪತ್ರೆಯಲ್ಲೇ ಲಿಂಗಪೂಜೆ ಮಾಡಿದರು. ಆಸ್ಪತ್ರೆಯ ವೈದ್ಯರು ಹೇಳಿರುವಂತೆ, ಶ್ರೀಗಳಿದ್ದ ಕೊಠಡಿಯು ಒಂದು ರೀತಿಯಲ್ಲಿ ದೈವ ಮಂದಿರವಾಗಿತ್ತಂತೆ.
ಶ್ರೀಗಳಿಗೆ ಡಿಸ್'ಚಾರ್ಜ್ ಆಗಿ ತುಮಕೂರಿಗೆ ಹೊರಡುತ್ತಿರುವ ಸುದ್ದಿ ತಿಳಿಯುತ್ತಲೇ ಬಿಜಿಎಸ್ ಆಸ್ಪತ್ರೆಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಶ್ರೀಗಳನ್ನು ನೋಡಲು ಜಮಾಯಿಸಿದರು.
ಶಸ್ತ್ರಚಿಕಿತ್ಸೆ ಯಶಸ್ವಿ:
ನಡೆದಾಡುವ ದೇವರು ಎಂದು ಪ್ರತೀತಿಯಾಗಿರುವ ಶಿವಕುಮಾರ ಸ್ವಾಮೀಜಿಯವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ್ಯೂಮೋನಿಯಾ, ಯಕೃತ್, ಮೂತ್ರನಾಳ ಸೋಂಕು, ಪಿತ್ತನಾಳ ಸಮಸ್ಯೆ ಇತ್ಯಾದಿ ಆರೋಗ್ಯ ತೊಂದರೆಗಳು ಅವರನ್ನು ಬಾಧಿಸಿದ್ದವು. ಬಿಜಿಎಸ್'ನ 10 ವೈದ್ಯರ ತಂಡವು 4 ತಾಸು ಸತತವಾಗಿ ಶ್ರೀಗಳ ಆರೋಗ್ಯ ತಪಾಸಣೆ ನಡೆಸಿ ಕೊನೆಗೆ ಎಂಡೋಸ್ಕೋಪಿ ಆಪರೇಷನ್ ಮಾಡಲು ನಿರ್ಧರಿಸಿತು. ಪಿತ್ತನಾಳದಲ್ಲಿ ಸಮಸ್ಯೆಯಾದ್ದರಿಂದ ನಿನ್ನೆ ಶಸ್ತ್ರಚಿಕಿತ್ಸೆ ನಡೆಸಿ ನಾಳದಲ್ಲಿ ಸ್ಟೆಂಟ್ ಅಳವಡಿಸಲು ನಿಶ್ಚಯಿಸಲಾಯಿತು. ಶ್ರೀಗಳು ಆಪರೇಷನ್'ಗೆ ಮೊದಲು ವಿರೋಧಿಸಿದರೂ ಬಳಿಕ ಒಪ್ಪಿಕೊಂಡರೆನ್ನಲಾಗಿದೆ. ಆದರೆ, ಎಂಡೋಸ್ಕೋಪಿ ಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು, ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯಾಗಿದೆ.
ಶಸ್ತ್ರಚಿಕಿತ್ಸೆ ನಂತರ ಸ್ವಾಮಿಗಳನ್ನ ನೋಡಲು ಗಣ್ಯರ ದಂಡೇ ಆಗಮಿಸಿತ್ತು. ಸಿಎಂ ಸಿದ್ದರಾಮಯ್ಯ, ಮಾಜಿ ಪಿಎಂ ದೇವೇಗೌಡ, ಬಿಎಸ್ ಯಡಿಯೂರಪ್ಪ ಮೊದಲಾದವರು ನಿನ್ನೆ ಬಿಜಿಎಸ್ ಆಸ್ಪತ್ರೆಗೆ ಭೇಟಿಕೊಟ್ಟು ಶ್ರೀಗಳ ಯೋಗಕ್ಷೇಮ ವಿಚಾರಿಸಿದ್ದರು.
