Asianet Suvarna News Asianet Suvarna News

ಉಡುಪಿ ಮಠಾಧೀಶರಿಗೆ ಮಕ್ಕಳು ವಿವಾದ : ಶಿರೂರು ಶ್ರೀ ವಿರುದ್ಧ ಸಿಡಿದೆದ್ದ ಸ್ವಾಮೀಜಿಗಳು

ಉಡುಪಿಯ ಅಷ್ಟ ಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಪೀಠಾಧೀಶರಾಗಿರುವ ಶ್ರೀ ಲಕ್ಷ್ಮೀವರ ತೀರ್ಥರು ತಕ್ಷಣ  ಶಿಷ್ಯರೊಬ್ಬರನ್ನು ಸ್ವೀಕರಿಸಿ, ಶ್ರೀಮಠದ ಪಟ್ಟದ ದೇವರಾದ ಶ್ರೀವಿಠಲ ದೇವರ ಪೂಜೆಯನ್ನು ಶಿಷ್ಯರಿಗೆ ಹಸ್ತಾಂತರಿಸಬೇಕು ಎಂದು ಪೇಜಾವರ ಶ್ರೀಗಳು ಮತ್ತು ಇತರ ಮಠಾಧೀಶರು ಪಟ್ಟು ಹಿಡಿದಿದ್ದಾರೆ. 

Shiroor Swamiji's allegations against Asta Math's Swamijis

ಉಡುಪಿ:  ಉಡುಪಿಯ ಅಷ್ಟ ಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಪೀಠಾಧೀಶರಾಗಿರುವ ಶ್ರೀ ಲಕ್ಷ್ಮೀವರ ತೀರ್ಥರು ತಕ್ಷಣ  ಶಿಷ್ಯರೊಬ್ಬರನ್ನು ಸ್ವೀಕರಿಸಿ, ಶ್ರೀಮಠದ ಪಟ್ಟದ ದೇವರಾದ ಶ್ರೀವಿಠಲ ದೇವರ ಪೂಜೆಯನ್ನು ಶಿಷ್ಯರಿಗೆ ಹಸ್ತಾಂತರಿಸಬೇಕು ಎಂದು ಪೇಜಾವರ ಶ್ರೀಗಳು ಮತ್ತು ಇತರ ಮಠಾಧೀಶರು ಪಟ್ಟು ಹಿಡಿದಿದ್ದಾರೆ. 

ಇತ್ತೀಚೆಗೆ ವಿಧಾನಸಭಾ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಶಿರೂರು ಮಠಾಧೀಶರು, ಈ ಸಂದರ್ಭದಲ್ಲಿ ಉಡುಪಿಯ ಎಲ್ಲಾ ಮಠಾಧೀಶರಿಗೆ ಮಕ್ಕಳಿದ್ದಾರೆ ಎಂದು ಹೇಳಿರುವ ವಿಡಿಯೋವೊಂದು  ಬಹಿರಂಗಗೊಂಡಿತ್ತು. 

ಇದರಿಂದ ತೀವ್ರ ಇರುಸು ಮುರುಸಿಗೊಳಗಾಗಿರುವ ಇತರ ಮಠಾಧೀಶರು ಶಿರೂರು ಶ್ರೀಗಳ ವಿರುದ್ಧ ಸಿಡಿದೆದ್ದಿದ್ದಾರೆ. ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಾಲ್ಕೈದು ಬಾರಿ ಸಭೆ ನಡೆಸಿದ್ದಾರೆ. ಸೋಮವಾರವೂ ಸಭೆ ನಡೆದು, ಶಿರೂರು ಶ್ರೀಗಳು ಮಠದ ಅಧಿಕಾರವನ್ನು ಮುನ್ನಡೆಸುವುದು ಸರಿಯಲ್ಲ, ಅವರು ಶಿಷ್ಯರೊಬ್ಬರನ್ನು ಸ್ವೀಕರಿಸಿ, ಮಠದ ಅಧಿಕಾರವನ್ನು ಅವರಿಗೆ ಬಿಟ್ಟುಕೊಡಬೇಕು ಎಂದು ಆಗ್ರಹಿಸುವ ನಿರ್ಧಾರಕ್ಕೆ ಬಂದಿದ್ದಾರೆ. 

ಇತರ ಮಠಾಧೀಶರು ಈ ನಿರ್ಣಯಗಳನ್ನು ಇನ್ನೂ ಶಿರೂರು ಶ್ರೀಗಳಿಗೆ ಲಿಖಿತವಾಗಿ ಕಳುಹಿಸಿಲ್ಲ.  ಆದರೆ ಈ ಬಗ್ಗೆ ಮಾಹಿತಿ ಪಡೆದಿರುವ ಶಿರೂರು ಶ್ರೀಗಳು, ಈ ನಿರ್ಣಯಗಳಿಗೆ ಕ್ಯಾರೇ ಎಂದಿಲ್ಲ. ಬದಲಿಗೆ ತಮ್ಮ ಮಠದ ಪಟ್ಟದ ದೇವರನ್ನು ಪಡೆಯುವುದು ತಮ್ಮ ಹಕ್ಕು. ನೀಡುವುದಿಲ್ಲ ಎಂದು  ಹೇಳುವುದಕ್ಕೆ ಇತರ ಮಠಾಧೀಶರಿಗೆ ಅಧಿಕಾರವೇ ಇಲ್ಲ. ನೀಡದಿದ್ದರೆ ಕೋರ್ಟಿಗೆ ಹೋಗುತ್ತೇನೆ ಎಂದು ಎಚ್ಚರಿಸಿದ್ದಾರೆ. 

ನನ್ನ ವಿರುದ್ಧ ಸಭೆಗಳ ಮೇಲೆ ಸಭೆಗಳನ್ನು ಮಾಡುತ್ತಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇದೆ. ಯಾವುದಕ್ಕೂ ಮೊದಲು ಅವರು ತೆಗೆದುಕೊಂಡಿರುವ ನಿರ್ಣಯಗಳನ್ನು ಲಿಖಿತ ರೂಪದಲ್ಲಿ ತಮಗೆ ಕಳುಹಿಸಲಿ ಎಂದು ಶ್ರೀಗಳು ‘ಕನ್ನಡಪ್ರಭ’ದೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

Follow Us:
Download App:
  • android
  • ios