ಮಂಗಳೂರು (ಜೂ. 20):  ಮಂಗಳೂರು- ಬೆಂಗಳೂರು ಮಹಾನಗರಗಳನ್ನು ಸಂಪರ್ಕಿಸುವ ಶಿರಾಡಿ ಘಾಟ್‌ ರಸ್ತೆ ಕಾಮಗಾರಿಯನ್ನು ಮುಕ್ತಾಯಗೊಳಿಸಿ ಜು.5 ರಿಂದ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಭರವಸೆ ನೀಡಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿನ ಮಳೆಹಾನಿ ಮತ್ತು ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಇದೀಗ ಹೆದ್ದಾರಿ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಇನ್ನು ನಾಲ್ಕು ದಿನಗಳ ಕೆಲಸ ಮಾತ್ರ ಬಾಕಿಯಿದೆ. ಅದಾದ ಬಳಿಕ 10 ದಿನ ಕ್ಯೂರಿಂಗ್‌ಗಾಗಿ ಸಮಯ ಬೇಕಾಗಿದ್ದು, ಜು.5ರೊಳಗೆ ಸಂಚಾರ ಮುಕ್ತಗೊಳಿಸಲು ಪ್ರಯತ್ನಿಸಲಾಗುವುದು ಎಂದರು. ಇದೇ ವೇಳೆ ಚಾರ್ಮಾಡಿ, ಶಿರಾಡಿ ಮತ್ತು ಸಂಪಾಜೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಾಯಕಾರಿ ಮರಗಳ ತೆರವು ಮತ್ತಿತರ ತುರ್ತು ಕೆಲಸಗಳನ್ನು ನಡೆಸಲು ಅರಣ್ಯ ಇಲಾಖೆಯಿಂದ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದೂ ಸಚಿವರು ತಿಳಿಸಿದರು.