ಬೆಂಗಳೂರು ಮತ್ತು ಮಂಗಳೂರನ್ನು ಸಂಪರ್ಕಿಸುವ ಶಿರಾಡಿ ಘಾಟ್ ನಲ್ಲಿ ಮಳೆ ಅಬ್ಬರ ಸಂಚಾರ ಅಸಾಧ್ಯ ಎಂಬಂತೆ ಮಾಡಿದ್ದು ಗೊತ್ತೆ ಇದೆ. ಈಗ ಮಳೆ ನಿಂತಿದ್ದು ರಾಜಕಾರಣಿಗಳ ನಡುವೆ ಕೆಸರೆರೆಚಾಟ ಆರಂಭವಾಗಿದೆ. ಇನ್ನೊಂದುಕಡೆ ಶುಕ್ರವಾರ ಬೆಳಗ್ಗೆಯಿಂದಲೇ #connectustoMangalore ಹಾಷ್ ಟ್ಯಾಗ್ ಟ್ರೆಂಡ್ ಆಗುತ್ತಿದೆ. ಏನಿದು ಕತೆ ಇಲ್ಲಿದೆ ಫುಲ್ ಡಿಟೇಲ್ಸ್..
ಬೆಂಗಳೂರು[ಆ.24] ಒಂದು ಕಡೆ ರಾಜ್ಯದ ಲೋಕೋಪಯೋಗಿ ಇಲಾಖೆ ಶಿರಾಡಿ ಘಾಟ್ ದುರಸ್ತಿಗೆ ತಿಂಗಳುಗಟ್ಟಲೆ ಬೇಕು ಎಂದು ಹೇಳುತ್ತಿದೆ. ಈ ಬಗ್ಗೆ ಅನೇಕ ಮಾಧ್ಯಮಗಳಲ್ಲೂ ವರದಿಯಾಗಿದೆ. ಲೋಕೋಪಯೋಗಿ ಸಚಿವ ರೇವಣ್ಣ ಅವರಿಗೆ ಪತ್ರ ಬರೆದಿರುವ ಕೇಂದ್ರ ಸಚಿವ ಸದಾನಂದ ಗೌಡ, ರಸ್ತೆ ರಿಪೇರಿಗೆ ಒಂದು ವಾರ ಸಾಕು, ತಿಂಗಳು ಗಟ್ಟಲೇ ಬೇಕಾಗಿಲ್ಲ. ಕೂಡಲೇ ರಾಜ್ಯ ಸರಕಾರ ಕಾರ್ಯ ನಿರತವಾಗಬೇಕು ಎಂದು ವಿನಂತಿ ಮಾಡಿಕೊಂಡಿದ್ದಾರೆ.
ನಾಲ್ಕಾರು ಕಡೆ ಮಾತ್ರ ಸಮಸ್ಯೆ ಇದ್ದು ಒಂದು ವಾರದಲ್ಲಿ ಎಲ್ಲವನ್ನು ಬಗೆಹರಿಸಬಹುದು ಎಂದು ಸದಾನಂದ ಗೌಡರು ಹೇಳಿದ್ದಾರೆ. ಗೌಡರ ಮಾತಿಗೆ ಸೋಶಿಯಲ್ ಮೀಡಿಯಾದಲ್ಲಿ ಧ್ವನಿಗೂಡಿಸಿರುವ ನಾಗರಿಕರು, ಮಂಗಳೂರು ಭಾಗದ ಅನೇಕರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ, ಇದು ತುರ್ತಾಗಿ ಆಗಬೇಕಾದ ಕೆಲಸ, ಕೇವಲ ಮಳೆ ಒಂದೆ ಕಾರಣಕ್ಕೆ ಎರಡು ನಗರಗಳ ನಡುವಿನ ಪ್ರಮುಖ ದಾರಿಯನ್ನೇ ಬಂದ್ ಮಾಡುವುದು ಸರಿ ಅಲ್ಲ ಎಂದು ಹೇಳಿದ್ದಾರೆ.
