ಪ್ರಧಾನಿ ನರೇಂದ್ರ ಮೋದಿ ಮನೆ ಸ್ಥಳಾಂತರ?
ಲೋಕ ಕಲ್ಯಾಣ ಮಾರ್ಗದಲ್ಲಿನ ಪ್ರಧಾನಿ ಕಚೇರಿಯನ್ನು ರಾಷ್ಟ್ರಪತಿ ಭವನ ಇರುವ ರೈಸಿನಾ ಹಿಲ್ಸ್‌ನ ಡಾಲ್‌ಹೌಸಿ ರಸ್ತೆಗೆ ಸ್ಥಳಾಂತರಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ನವದೆಹಲಿ [ನ.04]: ದೆಹಲಿಯ ರಾಜಪಥವನ್ನು ಮರುವಿನ್ಯಾಸಗೊಳಿಸುವ ಹೊಣೆ ಹೊತ್ತಿರುವ ಗುಜರಾತ್‌ನ ಅಹಮದಾಬಾದ್ ಮೂಲದ ಎಚ್‌ಸಿಪಿ ಡಿಸೈನ್ ಸಂಸ್ಥೆಯು ಪ್ರಧಾನಿ ನಿವಾಸವನ್ನು ರಾಷ್ಟ್ರಪತಿ ಭವನದ ಹತ್ತಿರಕ್ಕೆ ಸ್ಥಳಾಂತರಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದೆ.
ಆದರೆ, ಪ್ರಸ್ತುತ ಲೋಕ ಕಲ್ಯಾಣ ಮಾರ್ಗದಲ್ಲಿನ ಪ್ರಧಾನಿ ಕಚೇರಿಯನ್ನು ರಾಷ್ಟ್ರಪತಿ ಭವನ ಇರುವ ರೈಸಿನಾ ಹಿಲ್ಸ್‌ನ ಡಾಲ್‌ಹೌಸಿ ರಸ್ತೆಗೆ ಸ್ಥಳಾಂತರಿಸುವ ಬಗ್ಗೆ ವಿಸ್ತೃತ ಚರ್ಚೆ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಡತನದ ಪಾಠ ಓದಿ ಕಲಿತಿಲ್ಲ, ನೋಡಿ ಕಲಿತಿದ್ದೇನೆ: ಮೋದಿ!...
ಹಾಲಿ ಸಂಸತ್ತಿನ ಕಟ್ಟಡಕ್ಕೆ ಯಾವುದೇ ಹಾನಿ ಮಾಡದೇ, ಅದನ್ನು ಭಾರತೀಯ ಪ್ರಜಾಪ್ರಭುತ್ವದ ಮಹತ್ವ ಸಾರುವ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸುವ ಬಗ್ಗೆ ನಿರ್ಧರಿಸಲಾಗಿದೆ. ಅಲ್ಲದೆ, ದೆಹಲಿಯ ರಾಜಪಥದಲ್ಲಿರುವ ಖಾಲಿ ಜಾಗದಲ್ಲಿ ಪ್ರಧಾನಿ ಕಚೇರಿಗಾಗಿ ಪ್ರತ್ಯೇಕ ಕಟ್ಟಡ, ಸಂಸದರಿಗೆ ನೂತನ ಕಚೇರಿಗಳ ಕಟ್ಟಡ ಹಾಗೂ ಸಾಧ್ಯವಾದರೆ, ಪ್ರಸ್ತುತ ನೂತನ ಸಂಸತ್ ಭವನ ನಿರ್ಮಿಸಿ, 30 ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 70 ಸಾವಿರ ನೌಕರರಿಗೆ ಒಂದೇ ಕಡೆ ಸಚಿವಾಲಯ ನಿರ್ಮಿಸುವ ವಿನ್ಯಾಸವನ್ನು ಎಚ್‌ಸಿಪಿ ಪ್ರಸ್ತಾವನೆ ಸಲ್ಲಿಸಿದೆ.
ಆದರೆ, ನೂತನ ಸಂಸತ್ ಭವನ ನಿರ್ಮಾಣವು ರಾಷ್ಟ್ರೀಯ ಹಿತಾಸಕ್ತಿ ಯೋಜನೆಯಾಗಿದ್ದು, ಈ ಬಗ್ಗೆ ಹಲವು ಸುತ್ತಿನ ಚರ್ಚೆಗಳು ಮತ್ತು ಪರಿಶೀಲನೆಗಳ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.