ರಾಜ್ಯಕ್ಕೆ ಕೇಂದ್ರ ನೀಡಿರುವ ಅನುದಾನ ಹಾಗೂ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಬಿಡುಗಡೆ ಮಾಡಿರುವ ಹಣದ ವಿವರಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬೆಂಗಳೂರು : ರಾಜ್ಯಕ್ಕೆ ಕೇಂದ್ರ ನೀಡಿರುವ ಅನುದಾನ ಹಾಗೂ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಬಿಡುಗಡೆ ಮಾಡಿರುವ ಹಣದ ವಿವರಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯಕ್ಕೆ 1.39 ಲಕ್ಷ ಕೋಟಿ ರು. ಅನುದಾನ ಹಾಗೂ ಕೇಂದ್ರದ ವಿವಿಧ ಯೋಜನೆಗಳಿಗೆ ಪ್ರತ್ಯೇಕವಾಗಿ ಹಣ ಬಿಡುಗಡೆ ಮಾಡಿದೆ. ಹೀಗಿದ್ದರೂ ಕೇಂದ್ರ ತಾರತಮ್ಯ ಮಾಡುತ್ತಿದೆ ಎಂದು ಸುಳ್ಳು ಆರೋಪ ಮಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಸಚಿವ ಕೃಷ್ಣ ಬೈರೇಗೌಡ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಾತನಾಡಿದ ಅವರು, ಅನುದಾನ ನೀಡಿಕೆಯಲ್ಲಿ ತಾರತಮ್ಯ ಆಗಿದ್ದರೆ ನೀತಿ ಆಯೋಗದ ಸಭೆಯಲ್ಲಿ ಪ್ರಸ್ತಾಪಿಸಬೇಕಿತ್ತು. ಇಲ್ಲವೇ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ಕಾಂಗ್ರೆಸ್ ಸಂಸದರು ಲೋಕಸಭೆಯಲ್ಲಿ ಪ್ರಸ್ತಾಪಿಸಬೇಕಿತ್ತು ಎಂದು ತಿರುಗೇಟು ನೀಡಿದರು.
2015-16ರಿಂದ 17-18ರವರೆಗೆ ಹಣಕಾಸು ಆಯೋಗದ ಪ್ರಕಾರ ನೀಡಬೇಕಾಗಿದ್ದ ಹಣಕ್ಕಿಂತ 10,533ಕೋಟಿ ರು. ಹಣ ಕಡಿಮೆ ಬಂದಿದೆ ಎಂದು ಕಾಂಗ್ರೆಸ್ ದೂರಿದೆ. ಅಲ್ಲದೆ ಕೇಂದ್ರದ ಅನುದಾನಿತ ಯೋಜನೆಗಳ ಪಾಲುದಾರಿಕೆಯನ್ನು ಶೇ.75ರಿಂದ ಶೇ.50ಕ್ಕೆ ಕಡಿಮೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇವರು ಕೆಲವೇ ಯೋಜನೆಗಳಿಗೆ ಸೀಮಿತವಾಗಿ ಆರೋಪ ಮಾಡಿದ್ದಾರೆ. ಕೇಂದ್ರ ಸರ್ಕಾರವು ಯಾವುದೇ ಅನುದಾನ ತಾರತಮ್ಯ ಮಾಡಿಲ್ಲ. ಜಿಎಸ್‌ಟಿ ಜಾರಿಯಾದ ನಂತರವೂ 3271 ಕೋಟಿ ರು. ಹಣ ರಾಜ್ಯಕ್ಕೆ ಬಿಡುಗಡೆಯಾಗಿದೆ. 13ನೇ ಹಣಕಾಸು ಆಯೋಗದಲ್ಲಿ ಶೇ.32ರಷ್ಟಿದ್ದ ಅನುದಾನ 14ನೇ ಹಣಕಾಸು ಆಯೋಗದಲ್ಲಿ 42ರಷ್ಟಾಗಿದೆ. 13ನೇ ಹಣಕಾಸು ಆಯೋಗದಿಂದ 5 ವರ್ಷಗಳಲ್ಲಿ ರಾಜ್ಯಕ್ಕೆ 2010 – 15 ಸಾಲಿನವರೆಗೆ ಒಟ್ಟಾರೆ 83 ಸಾವಿರ ಕೋಟಿ ರು. ಮಾತ್ರ ಬಂದಿದೆ. ಆದರೆ, 14ನೇ ಹಣಕಾಸು ಆಯೋಗದಿಂದ 2015 -20ರ ವರೆಗೆ 2.19 ಲಕ್ಷ ಕೋಟಿ ರು. ಅನುದಾನ ಬರುತ್ತದೆ. ಇದರಲ್ಲಿ ಈಗಾಗಲೇ 1.39 ಲಕ್ಷ ಕೋಟಿ ರು. ಹಣ ಬಂದಿದೆ ಎಂದು ದಾಖಲೆ ಬಿಡುಗಡೆ ಮಾಡಿದರು.
2014ರಿಂದ ಸ್ವಚ್ಛ ಭಾರತ ಯೋಜನೆಯಡಿ ಗ್ರಾಮೀಣ ಭಾಗಕ್ಕೆ 1,932 ಕೋಟಿ ರು., ನಮ್ಮ ಮೆಟ್ರೋಗೆ 9,342 ಕೋಟಿ ರು., ಸ್ಮಾರ್ಟ್ ಸಿಟಿಗಳಿಗೆ 836 ಕೋಟಿ ರು. ಬಿಡುಗಡೆಯಾಗಿದೆ. ಆದರೆ, ಸ್ಮಾರ್ಟ್ ಸಿಟಿ ಯೋಜನೆಯಡಿ ಎರಡು ಕೋಟಿ ಮಾತ್ರ ಬಳಕೆ ಮಾಡಿದ್ದಾರೆ. ಕೌಶಲ್ಯ ಅಭಿವೃದ್ಧಿ ಯೋಜನೆಯ ಹಣವನ್ನೂ ಬಳಕೆ ಮಾಡಿಲ್ಲ ಎಂದು ಅಂಕಿ ಅಂಶಗಳ ಸಹಿತ ಶೆಟ್ಟರ್ ವಿವರಿಸಿದರು. ಈ ಬಗ್ಗೆ ವಿರೋಧ ಪಕ್ಷವಾಗಿ ನಾವು ಮಾಹಿತಿ ಕೇಳಿದ್ದೆವು. ಆದರೆ, ಹಣಕಾಸು ಇಲಾಖೆ ಮಾಹಿತಿ ನೀಡದೇ ಇರುವುದನ್ನು ನೋಡಿದರೆ ಹಣ ದುರ್ಬಳಕೆ ಬಗ್ಗೆ ಅನುಮಾನ ಮೂಡಿದೆ. ಹೀಗಾಗಿ ಅಮಿತ್‌ಶಾ ಲೆಕ್ಕ ಕೇಳಿದ್ದಾರೆ. ಲೆಕ್ಕ ಕೇಳುವ ಹಕ್ಕು ಪ್ರತಿಯೊಬ್ಬರಿಗೂ ಇದ್ದು, ಪಾರದರ್ಶಕತೆ ಕಾಯ್ದುಕೊಂಡಿದ್ದರೆ ಶ್ವೇತಪತ್ರ ಹೊರಡಿಸಿ ಎಂದು ಅವರು ಆಗ್ರಹಿಸಿದರು.
