2019ರ ಚುನಾವಣೆಯ ಫಾರ್ಮುಲಾ ಬಿಚ್ಚಿಟ್ಟ ಶಶಿ ತರೂರ್| ಸಮ್ಮಿಶ್ರ ಸರ್ಕಾರವಾದರೆ ಒಮ್ಮತದ ಪ್ರಧಾನಿ ಅಭ್ಯರ್ಥಿ| ರಾಹುಲ್ ಗಾಂಧಿ ಪ್ರಧಾನಿ ಆಯ್ಕೆಯಲ್ಲಿ ನಿಸ್ಸೀಮ ಎಂದ ತರೂರ್| ಸ್ಪಷ್ಟ ಬಹುಮತ ಬಂದರೆ ರಾಹುಲ್ ಗಾಂಧಿ ಪ್ರಧಾನಿ

ನವದೆಹಲಿ(ಡಿ.30): ಒಬ್ಬ ಅತ್ಯುತ್ತಮ ಪ್ರಧಾನಿಯನ್ನು ಆಯ್ಕೆ ಮಾಡುವ ಎಲ್ಲಾ ಸಾಮರ್ಥ್ಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಇದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

2019ರ ಲೋಕಸಭೆ ಚುನಾವಣೆಯ ನಂತರಷ್ಟೇ ಮಿತ್ರ ಪಕ್ಷಗಳೊಂದಿಗೆ ಚರ್ಚಿಸಿ ಒಮ್ಮತದಿಂದ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ 2019ರಲ್ಲಿ ರಾಹುಲ್ ಒಬ್ಬರೇ ಪ್ರಧಾನಿ ರೇಸ್ ನಲ್ಲಿ ಇಲ್ಲ ಎಂಬುದನ್ನು ತರೂರ್ ಪರೋಕ್ಷವಾಗಿ ಹೇಳಿದಂತಾಗಿದೆ.

2019ರಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದರೆ, ರಾಹುಲ್ ಅವರೇ ಪ್ರಧಾನಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸಮ್ಮಿಶ್ರ ಸರ್ಕಾರ ರಚಿಸುವ ಪರಿಸ್ಥಿತಿ ನಿರ್ಮಾಣವಾದರೆ ಮಿತ್ರ ಪಕ್ಷಳೊಂದಿಗೆ ಚರ್ಚಿಸಿ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದು ತರೂರ್ ತಿಳಿಸಿದ್ದಾರೆ.

ಸ್ಥಾಪಿತ ಪ್ರಕ್ರಿಯೆಯ ಮೂಲಕ ಮತ್ತು ಸಂಪ್ರದಾಯದಂತೆ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಿವೆ ಎಂದು ತರೂರ್ ಹೇಳಿದ್ದಾರೆ.