ಮುಂಬೈ(ಸೆ.15): ರಾಜಕೀಯ ಲಾಭಕ್ಕಾಗಿ ಪಾಕಿಸ್ತಾನ ಹಾಗೂ ಪಾಕಿಸ್ತಾನಿಯರ ವಿರುದ್ಧ ಕೇಂದ್ರ ಸರ್ಕಾರ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿ ರದ್ಧತಿ ಸರಿಯಲ್ಲ ಎಂದು ಎನ್’ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

ಮುಂಬೈನಲ್ಲಿ ಅಲ್ಪಸಂಖ್ಯಾತರ ಕಾರ್ಯಕ್ರಮದಲ್ಲಿ ಮಾತನಾಡಿದ ಶರದ್ ಪವಾರ್, ಬಿಜೆಪಿ ತನ್ನ ರಾಜಕೀಯಕ್ಕಾಗಿ ಪಾಕಿಸ್ತಾನದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅರೋಪಿಸಿದರು. 

ಪಾಕಿಸ್ತಾನ ಹಾಗೂ ಪಾಕಿಸ್ತಾನಿಯರ ಕುರಿತು ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತಾ, ಬಿಜೆಪಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಶರದ್ ಕಿಡಿಕಾರಿದ್ದಾರೆ. ಪಾಕಿಸ್ತಾನಿಯರು ಆ ರಾಷ್ಟ್ರದಲ್ಲಿ ನೆಮ್ಮಂದಿಯಿಲ್ಲ ಎಂಬುದೆಲ್ಲ ಕೇವಲ ಊಹಾಪೋಹ ಎಂದು ಪವಾರ್ ಅಭಿಪ್ರಾಯಪಟ್ಟಿದ್ದಾರೆ.

ನಾನು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಅಲ್ಲಿನ ಜನರ ಹೃದಯ ವೈಶಾಲ್ಯತೆಯ ಅರವಿದೆ ಎಂದು ಶರದ್ ಹೇಳಿದ್ದಾರೆ. ಪ್ರತಿಯೊಬ್ಬ ಪಾಕಿಸ್ತಾನಿ ಪ್ರಜೆ ಭಾರತದೊಂದಿಗೆ ಉತ್ತಮ ಬಾಂಧ್ಯವ ಹೊಂದಲು ಬಯಸುತ್ತಾರೆ ಎಂದು ಅವರು ನುಡಿದಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ 370ನೇ ವಿಧಿಯನ್ನು ರದ್ದು ಮಾಡಿರುವ ಕೇಂದ್ರ ಸರ್ಕಾರದ ನಡೆಯನ್ನು ಶರದ್ ಪವಾರ್ ವಿರೋಧಿಸಿದರು. 

370ನೇ ವಿಧಿ ರದ್ಧತಿ ಮೂಲಕ ಅಲ್ಪ ಸಂಖ್ಯಾತರಲ್ಲಿ ಭಯದ ವಾತಾವರಣ ಸೃಷ್ಟಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಸರ್ಕಾರದ ಅವೈಜ್ಞಾನಿಕ ನಿರ್ಧಾರದಿಂದಾಗಿ ಕಣಿವೆಯಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.