ಅಯೋಧ್ಯೆಯಲ್ಲಿ ಫೆಬ್ರವರಿ 21ರಿಂದ ರಾಮಮಂದಿರ ನಿರ್ಮಾಣ ಆರಂಭವಾಗಲಿದೆ ಎಂದು ಇಲ್ಲಿ ನಡೆದಿರುವ ಕುಂಭಮೇಳದಲ್ಲಿ ಬುಧವಾರ ಜರುಗಿದ ‘ವಿಶ್ವ ಹಿಂದೂ ಪರಿಷತ್‌ ವಿರೋಧಿ’ ಸಾಧು-ಸಂತರ ಧರ್ಮಸಂಸತ್ತು ನಿರ್ಣಯ ಕೈಗೊಂಡಿದೆ.

ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದರ ಅಧ್ಯಕ್ಷತೆಯಲ್ಲಿ ನಡೆದ ಧರ್ಮಸಂಸತ್ತಿನಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ‘ಸುಪ್ರೀಂ ಕೋರ್ಟ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಮಗೆ ಗೌರವವಿದೆ. ಆದರೆ ರಾಮಮಂದಿರ ನಿರ್ಮಾಣಕ್ಕೆ ಈಗ ಸಮಯ ಬಂದಿದೆ. ಫೆಬ್ರವರಿ 21ರಂದು ಶಿಲಾನ್ಯಾಸ ಮಾಡಿ ಮಂದಿರ ನಿರ್ಮಾಣ ಆರಂಭಿಸಲಾಗುವುದು. ನಮ್ಮ ಮೇಲೆ ಗುಂಡು ಹಾರಿಸಿದರೂ ಪರವಾಗಿಲ್ಲ. ಮಂದಿರ ನಿರ್ಮಿಸಿಯೇ ತೀರುತ್ತೇವೆ’ ಎಂಬ ನಿರ್ಣಯ ಘೋಷಿಸಲಾಯಿತು.

‘ಸರ್ಕಾರವು 67 ಎಕರೆ ಪ್ರದೇಶವನ್ನು ಮೂಲ ಮಾಲೀಕರಿಗೆ ಮರಳಿಸಿ ಅಲ್ಲಿ ಮಂದಿರ ಕಟ್ಟಲು ಉದ್ದೇಶಿಸಿದೆ. ವಿವಾದಿತ 0.3 ಎಕರೆಯನ್ನು ಬಿಡಲು ನಿರ್ಧರಿಸಿದೆ. ಆದರೆ ಇಡೀ 67 ಎಕರೆಯಲ್ಲಿ ಮಂದಿರ ನಿರ್ಮಾಣ ಆಗಬೇಕೆಂಬ ಇರಾದೆ ನಮ್ಮದು’ ಎಂದು ಸ್ವರೂಪಾನಂದರು ಸರ್ಕಾರ ಹಾಗೂ ಸಂಘ ಪರಿವಾರಕ್ಕೆ ಸವಾಲು ಹಾಕಿದರು.

ಈ ನಡುವೆ, ವಿಎಚ್‌ಪಿ ನೇತೃತ್ವದ ಧರ್ಮ ಸಂಸತ್ತು ಗುರುವಾರದಿಂದ ಆರಂಭವಾಗಲಿದ್ದು, ಪ್ರತ್ಯೇಕವಾಗಿ ಮಂದಿರ ನಿರ್ಮಾಣ ದಿನಾಂಕ ಘೋಷಿಸುವ ಸಾಧ್ಯತೆ ಇದೆ.