ಭಾನುವಾರ ಕನಕಪುರ ರಸ್ತೆಯಲ್ಲಿನ ಆರ್ಟ್ ಆಫ್ ಲಿವಿಂಗ್‌ಗೆ ಭೇಟಿ ನೀಡಿದ್ದ ವೇಳೆ ಖಾಸಗಿಯಾಗಿ ಆರೂಢ ಜ್ಯೋತಿಷ್ಯ ಕೇಳಿದ್ದಾರೆ ಎಂದು ಹೇಳಲಾಗಿದೆ. ಪ್ರತ್ಯೇಕ ಕೊಠಡಿಯಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಮಾತ್ರ ಇದ್ದು, ರಾಜ್ಯದ ನಾಯಕರು ಹೊರಗೆ ಕಾದು ಕುಳಿತಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಇತರೆ ನಾಯಕರು ಕೊಠಡಿ ಹೊರಗೆ ಇದ್ದರು ಎನ್ನಲಾಗಿದೆ.

ಬೆಂಗಳೂರು(ಆ.15): ಮುಂದಿನ ವರ್ಷ ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜ್ಯೋತಿಷಿಗಳ ಮೊರೆ ಹೋಗಿದ್ದು, ಪಕ್ಷಕ್ಕೆ ಜಯ ಸಿಗಲಿದೆಯೇ ಎಂಬುದರ ಬಗ್ಗೆ ಭವಿಷ್ಯ ಕೇಳಿದ್ದಾರೆ ಎಂಬ ಸ್ವಾರಸ್ಯಕರ ಬೆಳವಣಿಗೆ ನಡೆದಿದೆ.

ಭಾನುವಾರ ಕನಕಪುರ ರಸ್ತೆಯಲ್ಲಿನ ಆರ್ಟ್ ಆಫ್ ಲಿವಿಂಗ್‌ಗೆ ಭೇಟಿ ನೀಡಿದ್ದ ವೇಳೆ ಖಾಸಗಿಯಾಗಿ ಆರೂಢ ಜ್ಯೋತಿಷ್ಯ ಕೇಳಿದ್ದಾರೆ ಎಂದು ಹೇಳಲಾಗಿದೆ. ಪ್ರತ್ಯೇಕ ಕೊಠಡಿಯಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಮಾತ್ರ ಇದ್ದು, ರಾಜ್ಯದ ನಾಯಕರು ಹೊರಗೆ ಕಾದು ಕುಳಿತಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಇತರೆ ನಾಯಕರು ಕೊಠಡಿ ಹೊರಗೆ ಇದ್ದರು ಎನ್ನಲಾಗಿದೆ.

ತಮಿಳುನಾಡಿನಿಂದ ಆಗಮಿಸಿದ್ದ ಇಬ್ಬರು ಜ್ಯೋತಿಷಿಗಳ ಜತೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಚರ್ಚಿಸಿದರು. ಈ ವೇಳೆ ೨೦೧೮ರಲ್ಲಿ ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಆದರೆ, ಅಧಿಕಾರ ಸುಲಭವಾಗಿ ಧಕ್ಕುವುದಿಲ್ಲ. ಸಾಕಷ್ಟು ಕಠಿಣ ಶ್ರಮ ವಹಿಸಬೇಕು. ರಾಜ್ಯ ಚುನಾವಣೆಯ ಉಸ್ತುವಾರಿಯನ್ನು ಖುದ್ದು ನೀವೇ ವಹಿಸಿಕೊಳ್ಳಬೇಕು. ಆಗ ಮಾತ್ರ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಇತರ ಸಹಾಯದ ಮೂಲಕವಾದರೂ ಅಧಿಕಾರಕ್ಕೆ ಬರಬಹುದು ಎಂದು ಅಮಿತ್ ಶಾ ಅವರಿಗೆ ಜ್ಯೋತಿಷಿಗಳು ಕಹಿ ನುಡಿದಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ನಡೆಯುವ ಬೆಳವಣಿಗೆಗಳನ್ನು ನೀವೇ ಗಮನಿಸಬೇಕು. ರಾಜ್ಯ ಬಿಜೆಪಿ ನಾಯಕರಿಗಿಂತ ವಿದ್ಯಮಾನಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಉಸ್ತುವಾರಿ ವಹಿಸಿಕೊಳ್ಳಬೇಕು ಎಂದು ಹೇಳಿರುವ ಜ್ಯೋತಿಷಗಳು, ಗುಜರಾತ್‌ನಲ್ಲಿ ಬಿಜೆಪಿ ಗೆಲುವಿಗೆ ಪರಿಸ್ಥಿತಿ ಕಷ್ಟ ಇದೆ. ಪ್ರಸ್ತುತ ಗೆದ್ದಿರುವ ಸ್ಥಾನಗಳಲ್ಲಿ ಮತ್ತೊಮ್ಮೆ ಜಯಗಳಿಸುವ ಬಗ್ಗೆ ರಾಜಕೀಯ ತಂತ್ರ ರೂಪಿಸಿ ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

(ಕನ್ನಡಪ್ರಭ ವಾರ್ತೆ)