ಶಫಿ ಅರ್ಮಾರ್​ ಅನ್ನೋ ಭಟ್ಕಳ ಮೂಲದ ಭಯೋತ್ಪಾದಕ ಈಗ ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾನೆ. ಅದಕ್ಕೆ ಕಾರಣ ಅಮೆರಿಕ ಆತನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದೆ. ಇಷ್ಟಕ್ಕೂ ಈ ಶಫಿ ಅರ್ಮಾರ್​ ಅಂದ್ರೆ ಯಾರು...?  ಆತ ಜಗತ್ತಿನ ಪಾಲಿಗೆ ಕಂಟಕಪ್ರಾಯನಾಗಿದ್ದು ಹೇಗೆ ಗೊತ್ತಾ..?

ಬೆಂಗಳೂರು(ಜೂನ್ 16): ಭಟ್ಕಳವು ಜಾಗತಿಕ ಭಯೋತ್ಪಾದಕರ ಫ್ಯಾಕ್ಟರಿಯಾಗುತ್ತಿದೆಯೇ? ಹೀಗಂತ ಅನುಮಾನ ಪಡಲು ಕಾರಣವಾಗಿದ್ದು ಮೊಹಮ್ಮದ್ ಶಫಿ ಅರ್ಮಾರ್ ಎಂಬ ವ್ಯಕ್ತಿಯ ಬಗ್ಗೆ ಬಂದಿರುವ ಸುದ್ದಿ. ಭಟ್ಕಳದ ಶಫಿ ಅರ್ಮಾರ್ ಸೇರಿದಂತೆ ಮೂವರು ವ್ಯಕ್ತಿಗಳನ್ನು ಜಾಗತಿಕ ಭಯೋತ್ಪಾದಕರೆಂದು ಅಮೆರಿಕ ಘೋಷಿಸಿದೆ. ಶಫಿಯನ್ನು ಇಸ್ಲಾಮಿಕ್ ಸ್ಟೇಟ್ ಆಪರೇಟಿವ್ ಎಂದು ಘೋಷಿಸಲಾಗಿದೆ. ಇನ್ನಿಬ್ಬರು ಭಾರತೀಯರಾದ ಔಸಾಮಾ ಅಹ್ಮದ್ ಅತರ್ ಮತ್ತು ಮೊಹಮ್ಮದ್ ಇಸಾ ಬಿನಾಲಿ ಅವರನ್ನು ವಿಶೇಷ ಜಾಗತಿಕ ಭಯೋತ್ಪಾದಕರೆಂದು ಅಮೆರಿಕ ಪ್ರಕಟಿಸಿದೆ. ಅಮೆರಿಕದ ರಾಷ್ಟ್ರೀಯ ಸುರಕ್ಷತೆಗೆ ಈ ಮೂವರು ಅಪಾಯ ತಂದೊಡ್ಡಬಲ್ಲರು ಎಂದು ಅಮೆರಿಕದ ಅಧಿಕಾರಿಗಳ ಅಭಿಪ್ರಾಯ ಪಟ್ಟಿದ್ದು, ಎಲ್ಲರಿಗೂ ಹಣಕಾಸು ನಿರ್ಬಂಧಗಳನ್ನು ವಿಧಿಸಿದ್ದಾರೆ.

ಮೊಹಮ್ಮದ್ ಶಫಿ ಅರ್ಮಾರ್ ಭಟ್ಕಳದವನಾಗಿದ್ದು ಈ ಹಿಂದೆ ನಿಷೇಧಿತ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಸದಸ್ಯನಾಗಿದ್ದ. ಆನಂತರ ಇಸ್ಲಾಮಿಕ್ ಸ್ಟೇಟ್ ಸಂಘಟನಯನ್ನು ಸೇರಿಕೊಂಡ ಆತ ಈಗ ಭಾರತೀಯರನ್ನು ಸಂಘಟನೆಗೆ ಸೆಳೆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ. ಈತನ ಅಣ್ಣ ಸುಲ್ತಾನ್ ಅರ್ಮಾರ್ ಕೂಡ ಐಸಿಸ್ ಉಗ್ರನಾಗಿದ್ದು 2015ರಲ್ಲಿ ಸಿರಿಯಾ ಯುದ್ಧದಲ್ಲಿ ಸಾವನ್ನಪ್ಪಿದನೆಂಬ ಮಾಹಿತಿ ಇದೆ. ಸೋದರ ಸಾವಿನ ಬಳಿಕ ಐಸಿಸ್'ಗೆ ಭಾರತೀಯರನ್ನು ನೇಮಿಸುವ ಸಂಪೂರ್ಣ ಹೊಣೆ ಈತನ ಮೇಲೆಯೇ ಬಿತ್ತು. ಶಫಿ ಅರ್ಮಾರ್'ಗೆ ಅಂಜನ್ ಭಾಯ್, ಛೋಟೆ ಮೌಲಾ, ಯೂಸೂಫ್ ಅಲ್-ಹಿಂದಿ ಎಂಬಿತ್ಯಾದಿ ಹಲವು ಹೆಸರುಗಳಿವೆ.

ಶಫಿ ಬೆಳೆದು ಬಂದದ್ದು...
ಭಾರತದ ಎನ್‌'ಐಎ ಮೋಸ್ಟ್ ವಾಂಟೆಡ್ ಲಿಸ್ಟ್‌'ನಲ್ಲೂ ಈತನಿದ್ದಾನೆ. ಪಾಕಿಸ್ತಾನದಿಂದ ಉಗ್ರ ಚಟುವಟಿಕೆಗಳನ್ನು ಮಾಡುತ್ತಿದ್ದ ಈತ ದುಬೈ ಸೇರಿಕೊಂಡು, ನಂತರ ಐಸಿಸ್ ಪರ ಹೋರಾಟಕ್ಕಾಗಿ ಸಿರಿಯಾಗೆ ಹೋಗಿದ್ದ. ಐಸಿಸ್ ಮುಖ್ಯಸ್ಥ ಆಲ್ ಬಾಗ್ದಾದಿಗೆ ಹತ್ತಿರವಾಗಿದ್ದ ಈತನನ್ನು ಭಾರತದ ಐಸಿಸ್ ಘಟಕಕ್ಕೆ ಚೀಫ್ ರೆಕ್ರ್ಯುಟರ್'ನಾಗಿ ಮಾಡಲಾಗಿತ್ತು. ಭಾರತದಲ್ಲಿ ಐಸಿಸ್ ನೆಲೆವೂರುವಂತೆ ಮಾಡುವ ಹೊಣೆಗಾರಿಕೆಯನ್ನು ಶಫಿ ಅರ್ಮಾರ್ ವಹಿಸಿಕೊಂಡಿದ್ದ. 2008 ರಲ್ಲಿ ಭಟ್ಕಳ ಮೂಲದ ಉಗ್ರರಾದ ಯಾಸಿನ್ ಭಟ್ಕಳ್, ರಿಯಾಜ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್ ಇಂಡಿಯನ್ ಮುಜಾಹಿದೀನ್ ಸಂಘಟನೆ ಆರಂಭಿಸಿದಾಗ ಅವರೊಂದಿಗೆ ಇದ್ದಿದ್ದು ಅರ್ಮಾರ್ ಸೋದರರು.

ಇ೦ಡಿಯನ್ ಮುಜಾಹಿದೀನ್ ಸ೦ಘಟನೆಯ ಮೂಲಕ ದೇಶಾದ್ಯ೦ತ ಹಲವು ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದ ಅರ್ಮಾರ್ ಸೋದರರು ಆ ನ೦ತರ ತಮ್ಮದೇ ಆದ ಅನ್ಸರ್ -ಉಲ್‍-ತವಾಹಿದ್ ಎ೦ಬ ಸ೦ಘಟನೆ ಸ್ಥಾಪನೆ ಮಾಡಿದ್ದರು. ಇ೦ಡಿಯನ್ ಮುಜಾಹಿದೀನ್ ಮುಖ್ಯಸ್ಥ ಯಾಸಿನ್ ಭಟ್ಕಳ್ ಜತೆಗೆ ಉಗ್ರ ಕೃತ್ಯಗಳಿಗಾಗಿ ಸ೦ಗ್ರಹವಾಗಿದ್ದ ದೇಣಿಗೆ ಬಳಸಿಕೊಳ್ಳುವ ವಿಚಾರವಾಗಿ ಭಿನ್ನಾಭಿಪ್ರಾಯ ಉ೦ಟಾಗಿ ತನ್ನದೇ ಆದ ಸ೦ಘಟನೆ ಮಾಡಿಕೊ೦ಡಿದ್ದರು. ಪಾಕಿಸ್ತಾನದ ಐಎಸ್'ಐ ನಿಯ೦ತ್ರಣವಿಲ್ಲದ ಒ೦ದು ಸ೦ಘಟನೆ ಆರ೦ಭಿಸಬೇಕು ಎ೦ಬ ಉದ್ದೇಶ ಈ ಸೋದರರಿಗಿತ್ತು.

ಬಗ್ದಾದಿ ವಿಶ್ವಾಸ ಗಳಿಸಿದ್ದು...
2012ರಲ್ಲಿ ಪಾಕಿಸ್ತಾನದ ವಜೀರಿಸ್ತಾನದಲ್ಲಿ ತೆಹ್ರಿಕ್ -ಎ-ತಾಲಿಬಾನ್ ಸ೦ಘಟನೆಯೊ೦ದಿಗೆ ಗುರುತಿಸಿಕೊ೦ಡಿದ್ದ ಅರ್ಮಾರ್ ಸಹೋದರರು ಆಲ್‍ಖೈದಾಗೆ ಯುವಕರನ್ನು ಸೆಳೆಯುತ್ತಿದ್ದರು. ಒಸಮಾ ಬಿನ್ ಲಾಡೆನ್ ಮೃತಪಟ್ಟ ನ೦ತರ ಐಸಿಸ್‍ನ ಸೆಳೆತಕ್ಕೆ ಒಳಗಾಗಿ ಸಿರಿಯಾ ಸೇರಿಕೊ೦ಡಿದ್ದರು. ಐಸಿಸ್ ಸೇರಿದ್ದ ಸುಲ್ತಾನ್ ಅರ್ಮಾರ್ ಕೆಲವೇ ದಿನಗಳಲ್ಲಿ ಮುಖ್ಯಸ್ಥ ಆಲ್ ಬಾಗ್ದಾದಿ ವಿಶ್ವಾಸ ಗಳಿಸಿದ್ದ. ಭಾರತದಿ೦ದ ಹೇರಳ ಹಣ ಮತ್ತು ಯುವಕರನ್ನು ಐಸಿಸ್ ಪರ ಸೆಳೆಯುತ್ತಿದ್ದ ಸುಲ್ತಾನ್ ಅಮಾ೯ರ್‍ನನ್ನು ಐಸಿಸ್‍ನ ಭಾರತದ ಘಟಕದ ಮುಖ್ಯಸ್ಥನನ್ನಾಗಿ ಬಗ್ದಾದಿ ನೇಮಕ ಮಾಡಿದ್ದ. ಈ ನೇಮಕ ಆದೇಶದ ವಿಡಿಯೋ ಉಗ್ರ ಲೋಕದಲ್ಲಿ ದೊಡ್ಡ ಸ೦ಚಲನವನ್ನೇ ಸೃಷ್ಟಿಸಿತ್ತು. ಆದರೆ 2015ರ ಮಾ.6 ರ೦ದು ಸಿರಿಯಾದಲ್ಲಿ ನಡೆದ ವಾಯುದಾಳಿಯಲ್ಲಿ ಸುಲ್ತಾನ್ ಅಮಾ೯ರ್ ಮೃತಪಟ್ಟಿದ್ದ. ಇದಾದ ನ೦ತರ ಅಣ್ಣನ ಜಾಗಕ್ಕೆ ಶಫಿ ಅಮಾ೯ರ್‍ನನ್ನು ನೇಮಕ ಮಾಡಲಾಯಿತು.

ಭಾರತದಲ್ಲಿ ಹೇಗಿತ್ತು ಶಫಿ ಪ್ಲಾನ್?
ಭಾರತದಲ್ಲಿ ಐಸಿಸ್ ನೃತೃತ್ವ ವಹಿಸಿಕೊ೦ಡಿದ್ದ ಶಫಿ ಅಮಾ೯ರ್ ಭಾರತದಿ೦ದ ಐಸಿಸ್'ಗೆ ಸದಸ್ಯರನ್ನು ನೇಮಕ ಮಾಡಿಕೊಳ್ಳಲು ಜಾಲ ರೂಪಿಸಿದ್ದ. ಕಳೆದ ಜನವರಿಯಲ್ಲಿ ದೇಶಾದ್ಯ೦ತ ಕಾಯಾ೯ಚರಣೆ ನಡೆಸಿದ್ದ ಎನ್‍ಐಎ ಅಧಿಕಾರಿಗಳು 14 ಮ೦ದಿ ಶ೦ಕಿತರನ್ನು ಬ೦ಧಿಸಿದ್ದರು. ಬ೦ಧಿತರ ಜತೆಗೆ ಶಫಿ ಅಮಾ೯ರ್ ನಿರ೦ತರ ಸ೦ಪಕ೯ದಲ್ಲಿದ್ದ ಎ೦ಬ ಮಾಹಿತಿ ತನಿಖಾಧಿಕಾರಿಗಳಿಗೆ ಸಿಕ್ಕಿತ್ತು. ಭಾರತದಲ್ಲಿ ವ್ಯವಸ್ಥಿತವಾಗಿ ಐಸಿಸ್ ನೆಲೆಯೂರುವ೦ತೆ ಮಾಡಲು ಶಫಿ ಅಮಾ೯ರ್ “ಜುನೂದ್ ಇ-ಖಲೀಫಾ ಆಲ್ ಹಿ೦ದ್’ ಎ೦ಬ ಐಸಿಸ್ ಉಗ್ರರ ಪಡೆ ರಚಿಸಲು ಮು೦ದಾಗಿದ್ದ. ಇದಕ್ಕಾಗಿ ಉಗ್ರ ಮುದಬೀರ್ ಮುಷ್ತಾಕ್ ಷೇಕ್‍ನನ್ನು ಮುಖ್ಯಸ್ಥನನ್ನಾಗಿ ಮಾಡಿದ್ದ. ಕಳೆದ ಜನವರಿಯಲ್ಲಿ ಎನ್‍ಐಎ ಅಧಿಕಾರಿಗಳು ಮುಷ್ತಾಕ್ ಷೇಕ್‍ನನ್ನು ಬ೦ಧಿಸಿದ್ದರು. ಭಾರತದಿ೦ದ ಉಗ್ರರನ್ನು ನೇಮಕ ಮಾಡಿಕೊಳ್ಳುವುದಕ್ಕಾಗಿ ಶಫಿ ಅಮಾ೯ರ್ ಮುಷ್ತಾಕ್ ಷೇಕ್‍ಗೆ ಹವಾಲ ಮೂಲಕ ಹಣ ತಲುಪಿಸುತ್ತಿದ್ದ ಎ೦ಬ ಮಾಹಿತಿ ಆತನ ಬ೦ಧನದ ಬಳಿಕ ಲಭ್ಯವಾಗಿತ್ತು.

ಶಫಿ ಅಮಾ೯ರ್ ಫೇಸ್‍ಬುಕ್ ಮತ್ತು ಟ್ವಿಟ್ಟರ್ ಮೂಲಕ ಐಸಿಸ್ ಪರ ಸೆಳೆತ ಇರುವ ಉಗ್ರರನ್ನು ಪತ್ತೆ ಹಚ್ಚಿ ಅವರನ್ನು ಆನ್'ಲೈನ್ ಮೂಲಕ ಸ೦ಪಕ೯ ಮಾಡುತ್ತಿದ್ದ. ನ೦ತರ ಅವರನ್ನು ಇಸ್ಲಾ೦ ಮೂಲಭೂತವಾದದ ಕಡೆಗೆ ಆಕಷಿ೯ಸಿ ಅವರನ್ನು ಐಸಿಸ್ ಸೇರುವ೦ತೆ ಪ್ರೇರೇಪಿಸುತ್ತಿದ್ದ. ಫೇಸ್‍ಬುಕ್ ಮತ್ತು ಟ್ವಿಟರ್‍ನಲ್ಲಿ ರಹಸ್ಯ ಗ್ರೂಪ್‍ಗಳನ್ನು ಮಾಡಿಕೊ೦ಡು ಭಾರತದ ಯುವಕರೊ೦ದಿಗೆ ಸ೦ವಹನ ನಡೆಸುತ್ತಿದ್ದ. ವಾಟ್ಸ್'ಆ್ಯಪ್, ಟೆಲಿಗ್ರಾಮ್ ಮೂಲಕ ಯುವಕರಿಗೆ ಜವಾಬ್ದಾರಿಗಳನ್ನು ಹ೦ಚಿಕೆ ಮಾಡುತ್ತಿದ್ದ ಈತ ಹೋರಾಡಲು ತುದಿಗಾಲಲ್ಲಿದ್ದ ಯುವಕರನ್ನು ಸಿರಿಯಾಗೆ ಕರೆಸಿಕೊಳ್ಳುತ್ತಿದ್ದ. ಐಸಿಸ್ ಸೇರಲು ಭಾರತದಿ೦ದ ಸಿರಿಯಾಗೆ ಹೋಗುವ ಪ್ರಯತ್ನ ಮಾಡಿ ಸಿಕ್ಕಿಬಿದ್ದ ಹಲವು ಯುವಕರ ವಿಚಾರಣೆ ವೇಳೆ ಶಫಿ ಅಮಾ೯ರ್ ಹೆಸರನ್ನು ಬಾಯ್ಬಿಟ್ಟಿದ್ದರು.

ಶಫಿ ಅರ್ಮಾರ್ ಇತ್ತೀಚೆಗಷ್ಟೇ ಅಮೆರಿಕದ ವಾಯುದಾಳಿಯಲ್ಲಿ ಮೃತ ಪಟ್ಟಿರಬಹುದೆಂದು ಶಂಕಿಸಲಾಗಿತ್ತು. ಆದರೆ, ಆತ ಜೀವಂತವಾಗಿದ್ದಾನೆನ್ನುವ ಸುದ್ದಿಗಳು ಕೇಳಿಬರುತ್ತಿವೆ.