ಕಳೆದ ಬಾರಿ ಹೊಸ ವರ್ಷಾಚರಣೆ ವೇಳೆ ಸಂಭವಿಸಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ರಾಜಧಾನಿ ಬೆಂಗಳೂರಿನ ಮಾನ ಅಂತಾರಾಷ್ಟ್ರೀ ಯ ಮಟ್ಟದಲ್ಲಿ ಹರಾಜು ಆಗಿದ್ದು, ಇದೀಗ ಅಂತಹದ್ದೇ ಘಟನೆ ಮತ್ತೊಮ್ಮೆ ಮರುಕಳಿಸಿದೆ.
ಬೆಂಗಳೂರು (ಜ.1): ಕಳೆದ ಬಾರಿ ಹೊಸ ವರ್ಷಾಚರಣೆ ವೇಳೆ ಸಂಭವಿಸಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ರಾಜಧಾನಿ ಬೆಂಗಳೂರಿನ ಮಾನ ಅಂತಾರಾಷ್ಟ್ರೀ ಯ ಮಟ್ಟದಲ್ಲಿ ಹರಾಜು ಆಗಿದ್ದು, ಇದೀಗ ಅಂತಹದ್ದೇ ಘಟನೆ ಮತ್ತೊಮ್ಮೆ ಮರುಕಳಿಸಿದೆ.
ಖಾಕಿ ಕೋಟೆಯ ಮಧ್ಯೆಯೂ ಕಾಮುಕರು ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಮತ್ತು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಭಾನುವಾರ ರಾತ್ರಿ ವರದಿಯಾಗಿದೆ. ಮತ್ತೊಂದೆಡೆ ಮಹಿಳೆಯ ಪತಿ ಜತೆಗಿದ್ದರೂ ಬಿಡದ ಆರೋಪಿಗಳು ವಿಕೃತ ಮೆರೆದಿದ್ದಾರೆ. ಘಟನೆ ಸಂಬಂಧ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಹೊಸ ವರ್ಷಾಚರಣೆ ಮುಗಿದು ಬ್ರಿಗೇಡ್ ರಸ್ತೆಯಿಂದ ಹೊರ ತೆರಳದ ಕೆಲ ಪುಂಡರ ಗುಂಪು ಪುನಃ ವಾಪಸ್ ಅನಿಲ್ ಕುಂಬ್ಳೆ ವೃತ್ತಕ್ಕೆ ಹೋಗಲು ಯತ್ನಿಸಿತ್ತು. ಈ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು. ಎಂದಿನಂತೆ ಯುವತಿಯರು ಮಹಿಳೆಯರು ತಮ್ಮ ಕುಟುಂಬಸ್ಥರ ಜತೆ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆ ಆಚರಿಸಲು ಬಂದಿದ್ದರು.
ಸಂಭ್ರಮ ಮುಗಿಸಿ ನಾಲ್ಕೈದು ಮಂದಿಯ ಯುವತಿಯರ ಗುಂಪು ವಾಪಸ್ ತೆರಳುತ್ತಿತ್ತು. ಈ ವೇಳೆ ಸ್ಥಳಕ್ಕೆ ಬಂದ ಪುಂಡರ ಗುಂಪು ಯುವತಿಯರನ್ನು ಚುಡಾಯಿಸಿ ಎಳೆದಾಡಲು ಯತ್ನಿಸಿದ್ದರು. ಕೂಡಲೇ ಯುವತಿಯರು ಅಲ್ಲಿಯೇ ಇದ್ದ ಸಿವಿಲ್ ಡಿಫೆನ್ಸ್ ಅಧಿಕಾರಿಗಳಿಗೆ ಪುಂಡರ ಚೇಷ್ಟೆ ಬಗ್ಗೆ ತಿಳಿಸಿದ್ದರು. ಅಷ್ಟೋತ್ತಿಗೆ ಕಾಮುಕರ ಸ್ಥಳದಿಂದ ಪರಾರಿಯಾಗಿದ್ದರು ಎಂದು ಯುವತಿಯರು ಮಾಧ್ಯಮಗಳ ಬಳಿ ಅಳಲು ತೋಡಿಕೊಂಡರು.
ಪತಿ ಎದುರೇ ಲೈಂಗಿಕ ದೌರ್ಜನ್ಯ: ಮತ್ತೊಂದೆರೆ ಸಂಭ್ರಮಾಚರಣೆಗೆ ಇನ್ನು ಕೇವಲ ಏಳು ನಿಮಿಷ ಇದ್ದಂತೆ ಎಲ್ಲರೂ ಜೋರಾಗಿ ಚೀರಾಡುತ್ತಿದ್ದರು. ತಿಪ್ಪಸಂದ್ರದಿಂದ ದಂಪತಿ ಕೂಡ ಸಂಭ್ರಮಾಚರಣೆಗೆ ಆಗಮಿಸಿದ್ದರು. ಚೀರಾಟದ ಮಧ್ಯೆ ದುಷ್ಕರ್ಮಿಗಳು ಮಹಿಳೆ ಮೇಳೆ ಕೈ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಕೂಡಲೇ ಪತಿ, ಪತ್ನಿಯ ರಕ್ಷಣೆ ಧಾವಿಸಿದರೂ ಬಿಡದ ಕಾಮುಕರು ಪತಿಯನ್ನು ತಳ್ಳಿ ಕೃತ್ಯ ಎಸಗಿದರು ಎಂದು ಮಹಿಳೆಯ ಪತಿ ಮಾಧ್ಯಮಗಳ ಬಳಿ ಪ್ರತಿಕ್ರಿಯಿಸಿದರು.
ವಿಷಯ ತಿಳಿಯುತ್ತಿದ್ದಂತೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಎಂ.ಜಿ.ರಸ್ತೆ ಮತ್ತು ಬ್ರಿಗೇಡ ರಸ್ತೆಯಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಡಿಫೆನ್ಸ್ ಅಧಿಕಾರಿಗಳ ಬಳಿ ಕೂಡ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿದೆ ಎನ್ನಲಾಗಿದೆ.
