ಶಿವಮೊಗ್ಗದ ಮಾಚೇನಹಳ್ಳಿ KSRP ಕಮಾಂಡೆಂಟ್  ರಾಜಣ್ಣನ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ಸೇವೆಯಲ್ಲಿದ್ಧಾಗ ಮೃತ ಪಟ್ಟ ಪೇದೆಯ ಪತ್ನಿಗೆ ಅನುಕಂಪದ ನೌಕರಿ ನೀಡದೆ ಕಿರುಕುಳ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಶಿವಮೊಗ್ಗ(ಸೆ.01): ಶಿವಮೊಗ್ಗದ ಮಾಚೇನಹಳ್ಳಿ ಕೆಎಸ್‌ಆರ್‌ಪಿ 8ನೇ ಬೆಟಾಲಿನ್ ಕಮಾಂಡರ್ ರಾಜಣ್ಣ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಅನುಕಂಪ ಆಧಾರದ ನೌಕರಿ ನೀಡಲು ಅನಗತ್ಯ ವಿಳಂಬ ನೀತಿ ಅನುಸರಿಸುತ್ತಾ ಕಿರುಕುಳ ನೀಡುತ್ತಿರುವ ಅಪಾದನೆ ಕೇಳಿಬಂದಿದೆ.

ಕಳೆದ 3 ವರ್ಷಗಳ ಹಿಂದೆ ಸೇವೆಯಲ್ಲಿದ್ದಾಗ ಪೇದೆ ದಾದಾಪೀರ್ ಮೃತಪಟ್ಟಿದರು. ಈತನ ಪತ್ನಿ ರಶೀದಾ ಬೇಗಂ ಅನುಕಂಪದ ಆಧಾರದ ನೌಕರಿಗಾಗಿ, ದೂರಶಿಕ್ಷಣದ ಮೂಲಕ ಪಡೆದ ಬಿಎ ಪದವಿಯ ಅಂಕಪಟ್ಟಿ ಸಲ್ಲಿಸಿದರು. ಆದ್ರೆ ದೂರ ಶಿಕ್ಷಣದವರು ಕೊಟ್ಟ ಅಂಕಪಟ್ಟಿ ನಕಲಿಯಾಗಿತ್ತು. ಈ ಬಗ್ಗೆ ದೂರಶಿಕ್ಷಣ ಕೇಂದ್ರದವರ ವಿರುದ್ಧ ದೂರು ನೀಡುವ ಬದಲು ಕಮಾಂಡರ್ ರಾಜಣ್ಣ, ಬೇಕಂತಲೇ ಶಿವಮೊಗ್ಗ ಪೊಲೀಸರಿಗೆ ದೂರು ನೀಡಿದ್ದಾರೆ. ನಕಲಿ ಅಂಕಪಟ್ಟಿ ಕೊಟ್ಟವರ ವಿರುದ್ಧ ಕ್ರಮಕೈಗೊಂಡು ತಮಗೆ ನ್ಯಾಯ ದೊರಕಿಸಿಕೊಡುವಂತೆ ರಶೀದ್ ಬೇಗಂ ಕೂಡ ಶಿವಮೊಗ್ಗ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ರು. ಆದ್ರೆ ಪೊಲೀಸರು, ಕಮಾಂಡರ್ ನೀಡಿದ ದೂರಿನ್ವಯವೇ ಪ್ರಕರಣ ದಾಖಲಿಸಿ ರಶೀದಾ ಬೇಗಂನನ್ನು ಮೊದಲ ಆರೋಪಿಯನ್ನಾಗಿಸಿದ್ದರು.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ರಶೀದಾ ಬೇಗಂ ಅಮಾಯಕಿ ಅಂತಾ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದರು. ಬಳಿಕ ಹಿಂದಿ ಶಿಕ್ಷಕ ತರಬೇತಿ ಆಧಾರದ ಮೇಲೆಯಾದ್ರೂ ನೌಕರಿ ನೀಡಿ ಅಂತಾ ಮನವಿ ಮಾಡಿದ್ರು ಪರಿಗಣಿಸದೇ ಎಸ್ಎಸ್ಎಲ್ ಸಿ ಆಧಾರದ ಮೇಲೆ ಅಟೆಂಡರ್ ನೌಕರಿ ನೀಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇದನ್ನು ಕೊಡದೇ ಸತಾಯಿಸುತ್ತಿದ್ದಾರೆ. ರಾಜಣ್ಣ ಮತ್ತವರ ಕಚೇರಿ ಸಿಬ್ಬಂದಿಯ ಹಣದ ಬೇಡಿಕೆಯಾಗಲಿ, ತನ್ನ ಮಾನ ಬಿಡುವ ಪರಿಸ್ಥಿತಿಯಾಗಲಿ ಎದುರಿಸಲಾಗದೇ ರಶೀದಾ ನೊಂದಿದ್ದಾರೆ. ಇದೀಗ ತನ್ನೆಲ್ಲಾ ತೊಂದರೆಗಳ ಬಗ್ಗೆ ಮಾಚೇನಹಳ್ಳಿ KSRP ಕಮಾಂಡೆಂಟ್ ರಾಜಣ್ಣ ನೀಡುತ್ತಿರುವ ಕಿರುಕುಳದ ಬಗ್ಗೆ ರಾಜ್ಯಪಾಲ ವಜುಬಾಯಿ ವಾಲಾರಿಗೆ ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. 

ಒಟ್ಟಿನಲ್ಲಿ ಪೇದೆಗಳಿಂದ ಚಾಕರಿ ಮಾಡಿಸಿಕೊಳ್ಳುತ್ತಾ ಜೀತದಾಳುಗಳಂತೆ ದುಡಿಸಿಕೊಳ್ಳುವ ರಾಜಣ್ಣ , ಪೇದೆಗಳ ಸಾವಿನ ನಂತರವೂ ಅವರ ಕುಟುಂಬಸ್ಥರಿಗೆ ಕಿರುಕುಳ ನೀಡಿದ್ದು ಮಾತ್ರ ಈ ಭ್ರಷ್ಟ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಇದೀಗ ರಾಜಣ್ಣನ ಕರ್ಮಕಾಂಡ ರಾಜ್ಯಪಾಲರ ಅಂಗಳ ತಲುಪಿದ್ದು, ಸಂತ್ರಸ್ತೆಗೆ ನ್ಯಾಯ ಸಿಗುತ್ತಾ ಕಾದುನೋಡಬೇಕಾಗಿದೆ.