ಬೆಳಗಾವಿ (ಜೂ. 03): ರಾಜ್ಯದಲ್ಲೇ ಅತೀ ಹೆಚ್ಚು ಕಬ್ಬು ಬೆಳೆಯುವುದಕ್ಕೆ ಖ್ಯಾತಿ ಪಡೆದಿರುವ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಬೇಸಿಗೆ ಬೆಳೆಗಳು ಒಣಗುವ ಭೀತಿಗೆ ಒಳಗಾಗಿವೆ. ಕಳೆದ  ಎರಡು ತಿಂಗಳಿಂದ ಕೃಷ್ಣಾ ನದಿ ಬತ್ತಿರುವುದರಿಂದ ಅತಿ ಹೆಚ್ಚು ನೀರು ಬೇಡುವ ಬೆಳೆಯಾದ ಕಬ್ಬು ದಿನದಿಂದ ದಿನಕ್ಕೆ ಒಣಗುತ್ತಿದೆ.

ಅಥಣಿ ತಾಲೂಕು ಒಂದರಲ್ಲೇ ಪ್ರತಿ ವರ್ಷ ಸುಮಾರು 42 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಇಡೀ ಮಂಡ್ಯ ಜಿಲ್ಲೆಯಾದ್ಯಂತ ಬೆಳೆಯುವುದಕ್ಕಿಂತ ಅಧಿಕ ಕಬ್ಬನ್ನು ಅಥಣಿ ತಾಲೂಕೊಂದರಲ್ಲೇ ಬೆಳೆಯಲಾಗುತ್ತಿದೆ.

ಅಂದರೆ ಮಂಡ್ಯ ಸುಮಾರು 65 ಲಕ್ಷ ಟನ್ ಕಬ್ಬು ಬೆಳೆದರೆ, ಅಥಣಿಯಲ್ಲಿ ಸುಮಾರು 70 ಲಕ್ಷ ಟನ್ ಕಬ್ಬು ಉತ್ಪಾದಿಸಲಾಗುತ್ತಿದೆ. ನದಿ ನೀರನ್ನೇ ಅವಲಂಬಿಸಿ ಕಬ್ಬು ಬೆಳೆದಿದ್ದು, ಅನಂತಪುರ, ತೆಲಸಂಗ ಜಿ.ಪಂ ವ್ಯಾಪ್ತಿಯ 31 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಒಣಗಿದೆ.

ಮೇವಾಗಿ ಬಳಕೆ: ನದಿ ದಡದ ಮೇಲಿನ ಗ್ರಾಮಗಳಲ್ಲಿ ಶೇ. 90 ರಷ್ಟು ಕಬ್ಬನ್ನೇ ಬೆಳೆಯಲಾಗಿದೆ. ಅಲ್ಲದೆ ಏತ ನೀರಾವರಿ ಯೋಜನೆ ಮೂಲಕ ರೈತರು ಸ್ವಯಂ ಪೈಪ್‌ಲೈನ್ ಮೂಲಕ ಸುಮಾರು 90 ಕಿ.ಮೀ. ದೂರದಿಂದ ನೀರನ್ನು ತೆಗೆದುಕೊಂಡು ಹೋಗಿ ಕಬ್ಬು ಬೆಳೆದಿದ್ದಾರೆ.

ಬರೆ ಮೇಲೆ ಬರೆ:

ಸಾಲ ಮಾಡಿಕೊಂಡು ರೈತರು ಕಬ್ಬು ಬೆಳೆದಿದ್ದಾರೆ. ಆದರೆ ಈಗ ಆಗಿರುವ ಸಾಲವನ್ನು ಮುಂದೆ ಹೇಗೆ ತೀರಿಸುವುದು ಹಾಗೂ ತಮ್ಮ ಮುಂದಿನ ಉಪಜೀವನ ಹೇಗೆ ಸಾಗಿಸುವುದು? ಎಂಬ ಚಿಂತೆ ಕಾಡುತ್ತಿದೆ. ಮತ್ತೊಂದೆಡೆ ಕಳೆದ ಬಾರಿ ಸಾಗಿಸಿದ ಕಬ್ಬಿಗೆ ಕಾರ್ಖಾನೆಗಳು ಬಾಕಿ ಬಿಲ್ ಅನ್ನು ಹಾಗೆ ಉಳಿಸಿಕೊಂಡಿರುವುದು ರೈತರಿಗೆ ಬರೆ ಮೇಲೆ ಬರೆ ಎಳೆದಂತಾಗಿದೆ. ಮಳೆಗಾಲದಂ ತಹ ಸಂದರ್ಭದಲ್ಲಿ ಕೃಷ್ಣಾ ನದಿ ತುಂಬಿ ಹರಿಯುತ್ತದೆ. ಆಗ ಹರಿವ ನೀರನ್ನು ಬಳಸಿಕೊಂಡು ಯೋಜನೆ ರೂಪಿಸಬೇಕಿದೆ.

ಕಬ್ಬಿನ ಕೊರತೆ ಭೀತಿ:

ಮಂಡ್ಯ ಜಿಲ್ಲೆಯಲ್ಲಿ 6 ಸಕ್ಕರೆ ಕಾರ್ಖಾನೆಗಳಿವೆ. ಆದರೆ ಅಥಣಿ ತಾಲೂಕೊಂದರಲ್ಲೇ 5 ಸಕ್ಕರೆ ಕಾರ್ಖಾನೆಗಳಿವೆ. ಅಲ್ಲದೆ, ತಾಲೂಕಿನ ಕಬ್ಬು ನೆರೆಯ ಚಿಕ್ಕೋಡಿ ತಾಲೂಕು ಮತ್ತು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಸಕ್ಕರೆ ಕಾರ್ಖಾನೆ ಸೇರಿ ಮಹಾರಾಷ್ಟ್ರದ 3 ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆಯಾಗುತ್ತದೆ. ಹೀಗಾಗಿ ಸುಮಾರು ಶೇ.40 ರಷ್ಟು ಭಾಗ ಕಬ್ಬು ಒಣಗಿದೆ. ಇದರಿಂದ ಮುಂದಿನ ಹಂಗಾಮಿ ನಲ್ಲಿ ಕಾರ್ಖಾನೆಗಳಿಗೆ ಕಬ್ಬಿನ ಕೊರತೆ ಆಗುವುದು ಖಚಿತ ಎಂದು ಹೇಳಲಾಗುತ್ತಿದೆ.