Asianet Suvarna News Asianet Suvarna News

ಅತೃಪ್ತರೊಂದಿಗೆ ಸೇರಿ ಅಧಿಕಾರಕ್ಕೆ ಬರುತ್ತಾ ಬಿಜೆಪಿ..?

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ ಅತೃಪ್ತ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದರೂ ಪರಿಸ್ಥಿತಿಯ ಲಾಭ ಪಡೆದುಕೊಳ್ಳದೆ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಂಡು ಸಮರ್ಥವಾಗಿ ಕೆಲಸ ಮಾಡುತ್ತೇವೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. 

Several RebelMLAs wants to join BJP Says BS Yeddyurappa

ಬೆಂಗಳೂರು : ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ ಅತೃಪ್ತ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದರೂ ಪರಿಸ್ಥಿತಿಯ ಲಾಭ ಪಡೆದುಕೊಳ್ಳದೆ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಂಡು ಸಮರ್ಥವಾಗಿ ಕೆಲಸ ಮಾಡುತ್ತೇವೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಶನಿವಾರ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತ ನಾಡಿದರು. 

ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕೆಲವು ಶಾಸಕರು ಬೇಸತ್ತು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಆದ್ಯತೆ ಮೇರೆಗೆ ಯಾರನ್ನು ಯಾವ ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಜಿಲ್ಲಾ ನಾಯಕರು ನಿರ್ಧರಿಸಲಿದ್ದಾರೆ. ನಾವು ಅಧಿಕಾರದ ಹಿಂದೆ ಬೀಳುವುದಿಲ್ಲ. ಪ್ರತಿಪಕ್ಷ ಸ್ಥಾನದಲ್ಲಿ ಕುಳಿತು ಸಮರ್ಥವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ವಿಧಾನಸಭೆಯಲ್ಲಿ ಬಿಜೆಪಿ ಎದ್ದುನಿಂತರೆ ಕಾಂಗ್ರೆಸ್-ಜೆಡಿಎಸ್ ನವರ ಜಂಘಾಬಲವೇ ಉಡುಗಿಹೋಗಲಿದೆ. ವಿಧಾನಸಭೆಯಲ್ಲಿ ಅಧಿಕಾರ ಹಿಡಿಯುವುದಕ್ಕಿಂತ ಹೆಚ್ಚಾಗಿ 2019ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕಿದೆ. ಇದಕ್ಕಾಗಿ ಯುವಮೋರ್ಚಾಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕು ಎಂದು ಕರೆ ನೀಡಿದ ಅವರು, ಜೆಡಿಎಸ್-ಕಾಂಗ್ರೆಸ್‌ ನದ್ದು ಅಪವಿತ್ರ ಮೈತ್ರಿಯಿಂದ ರಚನೆಯಾಗಿರುವ ಸರ್ಕಾರ. ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಭಿನ್ನಮತವನ್ನಾಗಲೀ, ಅಸಮಾಧಾನವನ್ನಾಗಲೀ ಬಿಜೆಪಿ ಬಳಸಿ ಕೊಳ್ಳುವುದಿಲ್ಲ. ಸರ್ಕಾರ ಎಷ್ಟು ದಿನ ಇರಲಿದೆ ಎಂಬುದು ಗೊತ್ತಿದೆ.

ಅಲ್ಲಿಯವರೆಗೆ ಪ್ರತಿಪಕ್ಷವಾಗಿ ಬಿಜೆಪಿ ಜನತೆಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿದೆ. ವಿಧಾನಸಭೆ ಚುನಾವಣೆಯಲ್ಲಿ ಸ್ವಲ್ಪ ದರಲ್ಲಿಯೇ ಜನಾದೇಶ ತಪ್ಪಿದೆಯಾದರೂ ನಾವು ಧೃತಿಗೆಡುವುದಿಲ್ಲ ಎಂದರು. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಇದೇ  ಮೊದಲ ಬಾರಿಗೆ 37  ಸ್ಥಾನಗಳನ್ನು ಪಡೆದಿರುವ ಜೆಡಿಎಸ್ ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಬಿಜೆಪಿಯನ್ನು ದೂರ ಇಡಬೇಕು ಎಂಬ ಏಕೈಕ ಉದ್ದೇಶದಿಂದ ಮೈತ್ರಿ ಮಾಡಿಕೊಳ್ಳಲಾಗಿದೆಯೇ ಹೊರತು ರಾಜ್ಯದ ಹಿತದೃಷ್ಟಿಯಿಂದಲ್ಲ.

ಈ ಹಿಂದೆ ಜೆಡಿಎಸ್‌ನೊಂದಿಗೆ 20-20 ಸರ್ಕಾರ ರಚನೆ ಮಾಡಿದ ಮೇಲೆ ಜೆಡಿಎಸ್ ಅಧಿಕಾರ ಹಸ್ತಾಂತರ ಮಾಡದೆ ಏನು ಮಾಡಿತು ಎಂಬುದು ಕಾಂಗ್ರೆಸ್‌ಗೆ ಗೊತ್ತಿದೆ. ಅದರೂ ಕೈಜೋಡಿಸಿದೆ. ಮುಂದಿನ ದಿನದಲ್ಲಿ ಕಾಂಗ್ರೆಸ್ ಸಹ ಪಶ್ಚಾತ್ತಾಪ ಪಡುವ ದಿನಗಳು ಬರಲಿವೆ ಎಂದು ಭವಿಷ್ಯ ನುಡಿದರು. ಜೆಡಿಎಸ್ ನೀಡಿದ ಭರವಸೆಗಳನ್ನು ಈಡೇರಿಸಬಹುದು ಎಂಬ ಒಂದೇ ಕಾರಣಕ್ಕಾಗಿ ಜನರು ನಂಬಿ 37 ಸ್ಥಾನ ಗಳನ್ನು ನೀಡಿದರು. 24 ಗಂಟೆಯಲ್ಲಿ ರೈತರ ಸಾಲಮನ್ನಾ ಮಾಡಲಾಗುವುದು ಎಂದು ಘೋಷಣೆ ಮಾಡಿ ಈಗ ಮುಖ್ಯಮಂತ್ರಿಗಳು ಮಾತಿಗೆ ತಪ್ಪಿದ್ದಾರೆ. 

ಮುಂದಿನ ಚುನಾವಣೆಯಲ್ಲಿ ನೀವು ಎರಡಂಕಿ ದಾಟುವುದಿಲ್ಲ. ಹಲವು ಕ್ಷೇತ್ರದಲ್ಲಿ ಕೆಲವೇ ಮತಗಳ ಅಂತರದಿಂದ ಬಿಜೆಪಿಗೆ ಸೋಲು ಉಂಟಾಗಿದ್ದರಿಂದ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಈಗಲೂ ಚುನಾವಣೆ ನಡೆದರೆ ನಾವು ೧೫೦ ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.

Follow Us:
Download App:
  • android
  • ios