ಗಿರಿಜನರ ಹೋರಾಟ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸರನ್ನು ದಿಡ್ಡಳ್ಳಿ ಸುತ್ತಮುತ್ತ ನಿಯೋಜಿಸಲಾಗಿದೆ.  ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸ್​ ಬಂದೋಬಸ್ತ್​ ಕಲ್ಪಿಸಲಾಗಿದೆ. ಕೆಎಸ್'​ಆರ್'​ಪಿ ತುಕಡಿಯನ್ನು ಬಂದೋಬಸ್ತ್​'ಗೆ ನಿಯೋಜಿಸಲಾಗಿದೆ.

ಮಡಿಕೇರಿ(ಡಿ. 18): ಅರಣ್ಯ ಇಲಾಖೆ ಒಕ್ಕಲೆಬ್ಬಿಸಿದ್ದರಿಂದ ಬೀದಿಗೆ ಬಿದ್ದ ಮಡಿಕೇರಿಯ ದಿಡ್ಡಳ್ಳಿಯ 577 ಗಿರಿಜನ ಕುಟುಂಬಗಳು ನಡೆಸುತ್ತಿರುವ ಹೋರಾಟ ಇಂದು ಭಾನುವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಿರಿಮನೆ ನಾಗರಾಜ್​ ಸೇರಿದಂತೆ ಇತರ ಮುಖಂಡರ ನೇತೃತ್ವದಲ್ಲಿ ಹೋರಾಟ ಮುಂದುವರೆದಿದೆ. ಪ್ರಗತಿಪರ ಹೋರಾಟಗಾರರಾದ ಸಿ.ಎಸ್​ ದ್ವಾರಕನಾಥ್, ನೂರ್​ ಶ್ರೀಧರ್​, ಗೌರಿ ಲಂಕೇಶ್​, ಎ.ಕೆ ಸುಬ್ಬಯ್ಯ ಮತ್ತಿತರರು ಈ ಆದಿವಾಸಿಗಳ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ಗಿರಿಜನರ ಹೋರಾಟಕ್ಕೆ ಬಲ ಬಂದಂತಾಗಿದೆ.

ಗಿರಿಜನ ನಿರಾಶ್ರಿತರ ಪ್ರತಿಭಟನೆಗೆ ರಾಜ್ಯದ ವಿವಿಧ ಸಂಘಟನೆಗಳೂ ಕೂಡ ಬೆಂಬಲ ಸೂಚಿಸಿದ್ದಾರೆ. ಅನ್ನ ನೀರು ಇಲ್ಲದೆ ಪರದಾಡುವ ಪ್ರತಿಭಟನಾಕಾರರಿಗೆ ಬಿಸ್ಕೆಟ್, ಹಾಲನ್ನು ನೀಡುವ ಮೂಲಕ ಸಂಘಟನೆಗಳು ಸಹಾಯ ಹಸ್ತ ಚಾಚಿವೆ.

ಚಳಿ ವಿಪರೀತವಾಗಿರುವ ಹಿನ್ನೆಲೆಯಲ್ಲಿ ವೃದ್ದರು, ಮಹಿಳೆಯರಿಗೆ ಕಂಬಳಿಯನ್ನು ವಿತರಿಸಲಾಯಿತು. ಈ ಹಿಂದೆ ಕೆಲವು ಸಂಘ-ಸಂಸ್ಥೆಗಳು ಅಕ್ಕಿ, ಅವಲಕ್ಕಿ, ತರಕಾರಿಯನ್ನು ನೀಡಿ ಮಾನವೀಯತೆ ಮೆರದಿದ್ದರು. ಕಳೆದ ಜಿಲ್ಲಾಡಳಿತ ಸಭೆಯಲ್ಲಿ ಗಿರಿಜನ ಪುನರ್ವಸತಿ ಇಲಾಖೆಯಿಂದ ಆಹಾರ ಸಮಾಗ್ರಿಗಳನ್ನು ನೀಡುವುದಾಗಿ ಭರವಸೆ ನೀಡಲಾಗಿತ್ತಾರೂ ಇಲ್ಲಿವರೆಗೆ ಯಾವುದೇ ಆಹಾರ ಪದಾರ್ಥಗಳ ಸೌಲಭ್ಯಗಳು ಇಲ್ಲಿನವರಿಗೆ ಲಭ್ಯವಾಗಿಲ್ಲ. ಕಳೆದ ಹತ್ತು ದಿನಗಳಿಂದ ತಮ್ಮ ಹಾಡಿಗಳಿಂದ ಎತ್ತಂಗಡಿಯಾದ ಬಳಿಕ ಕೂಲಿ ಕೆಲಸಕ್ಕೂ ಹೋಗದೆ ಇರುವ ಇಲ್ಲಿನ ವಾಸಿಗಳಿಗೆ ಸಂಘಸಂಸ್ಥೆಗಳು ನೀಡುವ ಆಹಾರಗಳೇ ಆಧಾರವಾಗಿದೆ.

ಇದೇ ವೇಳೆ, ಗಿರಿಜನರ ಹೋರಾಟ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸರನ್ನು ದಿಡ್ಡಳ್ಳಿ ಸುತ್ತಮುತ್ತ ನಿಯೋಜಿಸಲಾಗಿದೆ. ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸ್​ ಬಂದೋಬಸ್ತ್​ ಕಲ್ಪಿಸಲಾಗಿದೆ. ಕೆಎಸ್'​ಆರ್'​ಪಿ ತುಕಡಿಯನ್ನು ಬಂದೋಬಸ್ತ್​'ಗೆ ನಿಯೋಜಿಸಲಾಗಿದೆ. 

ದಿಡ್ಡಳ್ಳಿ ಅರಣ್ಯದಲ್ಲಿ ನೆಲೆ ಕಂಡುಕೊಂಡಿದ್ದ 577 ಕುಟುಂಬಗಳನ್ನು ಅರಣ್ಯ ಇಲಾಖೆ ಡಿಸೆಂಬರ್​ 7 ರಂದು ಏಕಾಏಕಿ ಒಕ್ಕಲೆಬ್ಬಿಸಿತ್ತು. ಇದರ ವಿರುದ್ಧ ಸ್ಥಳೀಯ ಹೋರಾಟಗಾರ್ತಿ ಮುತ್ತಮ್ಮ ಸೇರಿದಂತೆ ಗಿರಿಜನ ವಾಸಿಗಳು ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ.